ADVERTISEMENT

ಸಂಗತ | ಏನಿದು ಚರ್ಮಗಂಟು ರೋಗ? ಹಾಲು ಸುರಕ್ಷಿತವೇ?

ಡಾ.ಮುರಳೀಧರ ಕಿರಣಕೆರೆ
Published 28 ಡಿಸೆಂಬರ್ 2022, 4:12 IST
Last Updated 28 ಡಿಸೆಂಬರ್ 2022, 4:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನಮ್ ದನಕ್ಕೆ ಮೈತುಂಬಾ ಸಿಡುಬು ಥರದ ಗುಳ್ಳೆ ಎದ್ದಿದೆ. ನೋಡಕ್ಕೆ ತುಂಬಾ ಹಿಂಸೆ ಆಗುತ್ತೆ. ನಮ್ಗೂ ಅಂಟುತ್ತಾ? ಅದ್ರ ಹಾಲು ಕುಡೀಬಹುದಾ?’ ರೈತರೊಬ್ಬರ ಆತಂಕದ ಪ್ರಶ್ನೆ. ಇಂತಹ ಅನುಮಾನ ಅವರದ್ದಷ್ಟೇ ಅಲ್ಲ, ಚರ್ಮಗಂಟು ರೋಗ (ಎಲ್‍ಎಸ್‍ಡಿ) ಎಂಬ ಮಹಾರೋಗ ಎಲ್ಲೆಡೆ ವ್ಯಾಪಿಸಿ ಜಾನುವಾರುಗಳ ಜೀವ ಹಿಂಡುತ್ತಿರುವ ಈ ಹೊತ್ತಿನಲ್ಲಿ ಬಹುತೇಕ ಹೈನುಗಾರರದ್ದೂ ಆಗಿದೆ.

‘ಈ ಕಾಯಿಲೆ ಮನುಷ್ಯರಿಗೆ ದಾಟಲ್ಲ. ಹಾಲಿಗೂ ದೋಷವಿಲ್ಲ. ಧೈರ್ಯವಾಗಿ ಉಪಯೋಗಿಸಿ, ಏನೂ ತೊಂದ್ರೆ ಇಲ್ಲ’ ಎಂದು ಎಷ್ಟೇ ವಿಶ್ವಾಸ ತುಂಬಿದರೂ ಕೆಲವರು ಬಾಧಿತ ಜಾನುವಾರುಗಳ ಹಾಲು ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ಗೋಪಾಲಕರ ಈ ಪರಿಯ ಹೆದರಿಕೆಗೆ ಕಾರಣ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ. ಮಾನವನ ಚರ್ಮದ ಮೇಲೆ ದೊಡ್ಡ ಗುಳ್ಳೆಗಳೆದ್ದು ಕೆಂಪಾಗಿರುವ ಭಯಾನಕ ಚಿತ್ರವೊಂದು ಮೊಬೈಲುಗಳಲ್ಲಿ ಓಡಾಡುತ್ತಿದೆ. ಚರ್ಮಗಂಟು ರೋಗಬಾಧಿತ ಹಸುವಿನ ಹಾಲು ಕುಡಿದಿದ್ದರಿಂದ ಹೀಗಾಗಿದ್ದು ಎಂಬ ಸುದ್ದಿ ಸುಳ್ಳೆಂದು ನಂಬದ ಹಲವರು ಭೀತಿಯಿಂದಾಗಿ ಹಾಲು ಉಪಯೋಗಿಸುತ್ತಿಲ್ಲ.

ADVERTISEMENT

ಪರಿಚಯದ ಕೃಷಿಕರೊಬ್ಬರು ತಮ್ಮ ಮಿಶ್ರತಳಿ ಹಸು ರೋಗದಿಂದ ಚೇತರಿಸಿಕೊಂಡಿದ್ದರೂ ಗಾಯಗಳು ಇನ್ನೂ ಪೂರ್ಣವಾಗಿ ಮಾಯದ ಕಾರಣ, ದಿನನಿತ್ಯ ಹದಿನೈದು ಲೀಟರ್‌ ಹಾಲನ್ನು ಹೊರಗೆ ಸುರಿಯುತ್ತಿದ್ದಾರೆ! ಮನೆಯವರಿಗೆ ಎಷ್ಟೇ ತಿಳಿಸಿ ಹೇಳಿದರೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಸುದ್ದಿ ಅವರ ತಲೆಯಲ್ಲಿ ಪಟ್ಟಾಗಿ ಕುಳಿತಿದೆ.

ಈ ರೋಗವೆಂದಲ್ಲ, ಸದಾ ಕಾಯಿಸಿ ಬಳಸಿದಾಗ ಹಾಲು ಸುರಕ್ಷಿತ. ಕುದಿಸುವ ಕ್ರಿಯೆ ಹಾಲಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರಗಳನ್ನು ಸಾಯಿಸುತ್ತದೆ. ಪ್ಯಾಶ್ಚರೀಕರಣ ಎಂಬ ಈ ಪ್ರಕ್ರಿಯೆ ಹಾಲಿನಿಂದ ಅಂಟಬಹುದಾದ ಕ್ಷಯ, ಬ್ರುಸೆಲ್ಲಾ, ಇ-ಕೋಲೈ, ಸಾಲ್ಮೊನೆಲ್ಲಾದಂತಹ ಹಲವು ರೋಗಾಣುಗಳನ್ನಲ್ಲದೆ ಜಂತುಗಳ ಮೊಟ್ಟೆಯನ್ನೂ ನಾಶಪಡಿಸುತ್ತದೆ. ಹಸಿ ಹಾಲು ಕುಡಿಯುವ ಪದ್ಧತಿ ಮಾತ್ರ ಅಪಾಯಕ್ಕೆ ಒಡ್ಡಿಕೊಂಡಂತೆ.

ಹೌದು, ದೇಹದ ಮೇಲೆಲ್ಲಾ ಗುಳ್ಳೆಗಳೆದ್ದು ಒಡೆದು ವ್ರಣವಾಗಿರುವ ದೃಶ್ಯವು ಭೀತಿ ತರುವುದು ಸಹಜವೆ. ಜ್ವರ, ನೋವು, ಬಾವು, ಉರಿ, ಸಿಡಿತಗಳಿಂದ ಮೂಕವೇದನೆ ಅನುಭವಿಸುವ ದನಕರುಗಳ ಈ ದಾರುಣ ಪರಿಸ್ಥಿತಿ ನಿಜಕ್ಕೂ ಮನಕಲಕುವಂತಹದ್ದು! ಸಾಂಕ್ರಾಮಿಕದ ಸ್ವರೂಪ ಪಡೆದು ಎಲ್ಲೆಡೆ ತೀವ್ರವಾಗಿ ವ್ಯಾಪಿಸುತ್ತಿರುವ ಚರ್ಮಗಂಟು ರೋಗ ಒಂದು ವೈರಲ್ ವ್ಯಾಧಿ. ಜಾನುವಾರುಗಳನ್ನು ಈ ಪರಿಯಲ್ಲಿ ಹಿಂಸಿಸುವ ಮತ್ತೊಂದು ರೋಗ ಇರಲಾರದು ಎನಿಸುವಷ್ಟರ ಮಟ್ಟಿಗೆ ಇದರ ಬಾಧೆ ಸಾಗಿದೆ. ಸೋಂಕಿತ ಹಸುಗಳ ಸಂಖ್ಯೆ, ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದ್ದರೂ ಎಮ್ಮೆಗಳಲ್ಲಿ ಮಾತ್ರ ಪ್ರಕರಣಗಳ ಸಂಖ್ಯೆ ಆಶ್ಚರ್ಯವೆನಿಸುವಷ್ಟು ಕಡಿಮೆಯಿದೆ.

ಚರ್ಮಗಂಟು ರೋಗ ಹೊಸ ಕಾಯಿಲೆಯೇನೂ ಅಲ್ಲ. 1929ರಲ್ಲೇ ಆಫ್ರಿಕಾದಲ್ಲಿ ವರದಿಯಾಗಿತ್ತು. ನಮ್ಮ ದೇಶಕ್ಕೆ ಕಾಲಿಟ್ಟಿದ್ದು ಮಾತ್ರ ಹೆಚ್ಚುಕಮ್ಮಿ ಕೊರೊನಾ ವೈರಾಣುಗಳ ಜೊತೆಯಲ್ಲೆ. ಒಂದೂವರೆ ವರ್ಷದ ಹಿಂದೆ ನಮ್ಮ ರಾಜ್ಯದಲ್ಲಿ ಕಾಣಿಸಿಕೊಂಡ ಮೊದಲ ಅಲೆಯು ಅದೃಷ್ಟವಶಾತ್‌ ಹೆಚ್ಚು ಹಾನಿ ಮಾಡಿರಲಿಲ್ಲ. ಆದರೆ ಈಗ್ಗೆ ಎರಡು– ಮೂರು ತಿಂಗಳಿಂದ ಕಾಡುತ್ತಿರುವ ಎರಡನೆಯ ಅಲೆ ತುಂಬಾ ಪ್ರಬಲವಾಗಿದ್ದು, ಮಿಶ್ರತಳಿ ರಾಸುಗಳನ್ನಲ್ಲದೆ ಸ್ಥಳೀಯ ಹಸುಕರುಗಳನ್ನೂ ಅಧಿಕ ಪ್ರಮಾಣದಲ್ಲಿ ಬಾಧಿಸುತ್ತಿದೆ. ಜೀವಹಾನಿಯೂ ದೊಡ್ಡ ಪ್ರಮಾಣದಲ್ಲಿದೆ!

ಗಾಯಗಳ ನಿರ್ವಹಣೆಯೇ ಜಾನುವಾರುಗಳಲ್ಲಿ ದೊಡ್ಡ ಸವಾಲು. ಅದರಲ್ಲೂ ಈ ಕಾಯಿಲೆಯಲ್ಲಿ ಗಂಟುಗಳು ಒಡೆದಾಗ ಆ ಜಾಗವೆಲ್ಲಾ ಕೊಳೆತಂತಾಗಿ ಕುಳಿ ಬೀಳುವುದು. ಮತ್ತೆ ಗಾಯ ಮುಚ್ಚಿಕೊಂಡು ಮೊದಲಿನಂತಾಗಲು ದೀರ್ಘ ಸಮಯ ಹಿಡಿಯುತ್ತದೆ. ಪ್ರತಿನಿತ್ಯ ಗಾಯ ಶುಚಿಗೊಳಿಸುವುದು, ಪದೇ ಪದೇ ಔಷಧ ಹಚ್ಚುವುದು ನಿಜಕ್ಕೂ ಸಮಯ, ತಾಳ್ಮೆ ಬೇಡುವ ಕೆಲಸ. ಒಂದು ದಿನ ನಿಗಾ ತಪ್ಪಿದರೂ ನೊಣಗಳು ಮೊಟ್ಟೆ ಇಟ್ಟು ಹುಳ ಮಾಡುತ್ತವೆ. ಗಾಯ ಮತ್ತಷ್ಟು ಆಳವಾಗುತ್ತದೆ. ಕೆಲವು ರಾಸುಗಳಲ್ಲಿ ಚರ್ಮದ ಮೇಲಷ್ಟೇ ಅಲ್ಲ ಒಳಾಂಗಗಳಲ್ಲೂ ಗಂಟುಗಳಾಗಿ ಪರಿಸ್ಥಿತಿಯನ್ನು ಗಂಭೀರವಾಗಿಸುತ್ತಿವೆ.

ರೋಗವು ವೈರಾಣುಜನ್ಯವಾದ್ದರಿಂದ ನಿರ್ದಿಷ್ಟ ಚಿಕಿತ್ಸೆಯೆಂಬುದಿಲ್ಲ. ಲಕ್ಷಣಗಳನ್ನು ಆಧರಿಸಿ ಮದ್ದು ನೀಡಬೇಕಿದೆ. ಸದ್ಯದಲ್ಲಿ ಈ ಕಾಯಿಲೆಗೆ ಉಪಯೋಗಿಸುತ್ತಿರುವ ಲಸಿಕೆಯೂ ಪೂರ್ಣ ಪರಿಣಾಮಕಾರಿಯಲ್ಲ. ರೋಗದ ಸಮಗ್ರ ನಿಯಂತ್ರಣಕ್ಕೆ ಅಲೋಪಥಿ ಪದ್ಧತಿಯೊಂದೇ ಸಾಕಾಗುತ್ತಿಲ್ಲ. ಪಾರಂಪರಿಕ ಜ್ಞಾನದ ಗಿಡಮೂಲಿಕೆಗಳ ಜೊತೆಗೆ ಆಯುರ್ವೇದ, ಹೋಮಿಯೋಪಥಿ ಔಷಧೋಪಚಾರದಿಂದ ಮಾತ್ರ ವ್ಯಾಧಿಯನ್ನು ಹದ್ದುಬಸ್ತಿಗೆ ತಂದು ದನಕರುಗಳ ಜೀವ ಉಳಿಸಲು ಸಾಧ್ಯ.

ದನಕರುಗಳು ಕಾಯಿಲೆಯಿಂದ ಚೇತರಿಸಿ ಕೊಂಡರೂ ಹೈನುಗಾರರಿಗೆ ಆಗುತ್ತಿರುವ ಆರ್ಥಿಕ ನಷ್ಟ ತುಂಬಾ ದೊಡ್ಡದು. ಹೆಚ್ಚು ಸೊರಗುವಿಕೆ, ಹಾಲು ಉತ್ಪಾದನೆಯಲ್ಲಿ ಕುಸಿತ, ಗರ್ಭಪಾತ, ಪುನಃ ಗರ್ಭ ಕಟ್ಟದಿರುವುದು ಜೊತೆಗೆ ಚರ್ಮವೂ ವಿರೂಪವಾಗುವುದರಿಂದ ರಾಸುಗಳ ಮೌಲ್ಯದಲ್ಲೂ ಇಳಿಕೆಯಾಗುವುದು. ಕೊರೊನಾ ಮನುಕುಲವನ್ನು ಕಾಡಿದಂತೆ ಎಲ್‍ಎಸ್‍ಡಿ ವೈರಾಣುಗಳು ಜಾನುವಾರುಗಳ ಆರೋಗ್ಯಕ್ಕೆ ಕಂಟಕಕಾರಿಯಾಗುತ್ತಿರುವುದು ಸದ್ಯದ ವಾಸ್ತವ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.