ADVERTISEMENT

ಆಳುವ ಪಕ್ಷದ ಅಸ್ಥಿರತೆಯ ಸಂಕೇತ

ಧರ್ಮವೆಂಬುದು ಅಸಾಧಾರಣ ಶಕ್ತಿಯಿರುವ ಒಂದು ಅಸ್ತ್ರ. ಅದನ್ನು ಪಡ್ಡೆಹುಡುಗರ ಕೈಗಳಲ್ಲಿ ಇಡಬೇಡಿ. ಅವರನ್ನು ಅನಗತ್ಯವಾಗಿ ಉದ್ರೇಕಿಸಬೇಡಿ

ಪ್ರಸನ್ನ
Published 19 ಜುಲೈ 2018, 19:42 IST
Last Updated 19 ಜುಲೈ 2018, 19:42 IST
   

ಹಿಂದೂ ಸನ್ಯಾಸಿ ಸ್ವಾಮಿ ಅಗ್ನಿವೇಶರನ್ನು ಹಿಂದುತ್ವವಾದಿಗಳು ‘ಹಿಂದೂ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ವಾಮಿ ಅಗ್ನಿವೇಶರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಜಾರ್ಖಂಡದ ಹಿಂದುತ್ವವಾದಿ ಮಂತ್ರಿಯೊಬ್ಬರಂತೂ ಸಭ್ಯತೆಯ ಎಲ್ಲೆ ಮೀರಿ, ಎಂಬತ್ತು ವರ್ಷ ವಯಸ್ಸಿನ ಹಿರಿಯ ಸನ್ಯಾಸಿಯನ್ನು, ‘ವಂಚಕ, ವಿದೇಶಿ ಏಜೆಂಟ್’ ಎಂದೆಲ್ಲ ಕರೆದಿದ್ದಾರೆ.

ಹಿಂದುತ್ವದ ಮುಖವಾಡ ಕಳಚತೊಡಗಿದೆ. ಮುಖವಾಡದ ಹಿಂದಿರುವ ಉಗ್ರವಾದಿ ರಾಜಕೀಯ ಮುನ್ನೆಲೆಗೆ ಬರತೊಡಗಿದೆ. ಇದು ಇಂದು ನಿನ್ನಿನ ಕತೆಯಲ್ಲ. ಈ ಹಿಂದೆ ಚರಿತ್ರೆಯಲ್ಲಿ ಹಲವರು ಮಾಡಿರುವ ಅವಾಂತ
ರವಿದು. ಹಿಟ್ಲರ್‌ನಿಂದ ಹಿಡಿದು ಆಯತೊಲ್ಲಾನವರೆಗೆ, ಮುಹಮ್ಮದಲಿ ಜಿನ್ನಾರಿಂದ ಹಿಡಿದು ತಾಲಿಬಾನಿಗರವರೆಗೆ ಅನೇಕರು ಮಾಡಿದ್ದಾರೆ, ಧರ್ಮದ ಹೆಸರಿನಲ್ಲಿ ರಕ್ತಪಾತ.

ಹಾಗೆ ನೋಡಿದರೆ, ಭಾರತೀಯ ಪ್ರಜೆಗಳಿಗೆ ಸ್ವಾಮಿ ಅಗ್ನಿವೇಶರು ಕೂಡ ಇಂದು ನಿನ್ನಿನವರೇನಲ್ಲ. ಭಾರತೀಯ ಜನತಾ ಪಕ್ಷಕ್ಕೆ ಅಪರಿಚಿತರೂ ಅಲ್ಲ ಅವರು. ಆರ್ಯ ಸಮಾಜದ ಮೂಲದಿಂದ ಬಂದ ಈ ಹಿರಿಯ ಸನ್ಯಾಸಿ, ಜನಪರ ಕಾಳಜಿ ಇರುವವರು. ಕಾಯಕಜೀವಿಗಳ ಪರವಾಗಿ ಹೋರಾಡುತ್ತ ಬಂದವರು.

ADVERTISEMENT

ತನ್ನ ರಾಜಕೀಯ ತಾಳಕ್ಕೆ ಸರಿಯಾಗಿ ಕುಣಿಯದವರನ್ನೆಲ್ಲ ಹಿಂದೂ ವಿರೋಧಿಗಳೆಂದು ಕರೆದು ಹಲ್ಲೆ ನಡೆಸುವುದು ಅಪಾಯಕಾರಿ ಪ್ರವೃತ್ತಿ. ಇಂದಿರಾ ಗಾಂಧಿಯವರು ಮಾಡಲಿಲ್ಲ ಹೀಗೆ. ನಮ್ಮ ಮೇಲೆ ಅವರು ಹೇರಿದ ತುರ್ತು ಪರಿಸ್ಥಿತಿ ಕೇವಲ ಕಾನೂನಿನ ದುರ್ಬಳಕೆಯಾಗಿತ್ತು. ರಾಜ್ಯಾಂಗದ ದುರ್ಬಳಕೆಯಾಗಿತ್ತು. ಆದರೆ, ಹೀಗೆ ಹಿಂಬಾಲಕರನ್ನು ಛೂ ಬಿಟ್ಟಿರಲಿಲ್ಲ ಅವರು. ಹಿಂದೂಸ್ತಾನದ ತಾಲಿಬಾನೀಕರಣವಾಗುತ್ತಿದೆ ಎಂಬ ಆತಂಕ ಅನೇಕರಲ್ಲಿ ಮೂಡುತ್ತಿದೆ. ಅದಕ್ಕೆ ಗಟ್ಟಿ ಕಾರಣಗಳೂ ಇವೆ. ತಾಲಿಬಾನೀಕರಣವೆಂದರೆ ಏನೆಂದು ಮೊದಲು ವಿವರಿಸುತ್ತೇನೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಎಂಬ ಮುಸ್ಲಿಂ ಉಗ್ರವಾದಿ ಸಂಘಟನೆಯೊಂದು ಹೀಗೆಯೇ ಮಾಡಿತ್ತು. ತನ್ನ ರಾಜಕಾರಣವನ್ನು ವಿರೋಧಿಸುವ ಎಲ್ಲರನ್ನೂ- ಮುಲ್ಲಾಗಳೂ ಸೇರಿದಂತೆ, ಇಸ್ಲಾಮಿನ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಿ ಹಿಂಸಿಸಿತ್ತು. ಇದೇ ಪರಿಸ್ಥಿತಿ ಮುಂದುವರೆದರೆ ನಾವೂ ಅಫ್ಗಾನಿಸ್ತಾನದವರಂತಾಗುತ್ತೇವೆ.

ನನಗಿಲ್ಲಿ ಸ್ವಾಮಿ ವಿವೇಕಾನಂದರ ನೆನಪಾಗುತ್ತಿದೆ. ಅವರು, ಒಂದೊಮ್ಮೆ ಬದುಕಿದ್ದಿದ್ದರೆ ಅವರ ಮೇಲೂ ಹಲ್ಲೆಗಳಾಗಿರುತ್ತಿದ್ದವು. ಸ್ವಾಮಿ ವಿವೇಕಾನಂದರೂ ಹಿಂದೂ ಧರ್ಮದ ಹಲವು ಸಾಮಾಜಿಕ ಅವಾಂತರಗಳನ್ನು ಕಟುವಾಗಿ ವಿಮರ್ಶಿಸಿದ್ದರು. ಮೂರೂ ಹೊತ್ತು ಮೂಗು ಹಿಡಿದು ಕೂರುವ ಸನ್ಯಾಸಿಗಳನ್ನು ಕಂಡರಾಗುತ್ತಿದ್ದಿಲ್ಲ ವಿವೇಕಾನಂದರಿಗೆ. ‘ಏಳಿ, ಎದ್ದೇಳಿ! ಸಂತಾಲ ಶ್ರಮಜೀವಿಗಳು ಕೆಲಸ ಮಾಡುತ್ತಿದ್ದಾರೆ ಹೊರಗೆ! ಅವರೊಟ್ಟಿಗೆ ಕೈಜೋಡಿಸಿ!’ ಎನ್ನುತ್ತಿದ್ದರು.

ವಿವೇಕಾನಂದರಿಗೆ ಗೋಮಾತೆಯ ಬಗ್ಗೆ ಪ್ರೀತಿಯಿತ್ತು, ಈ ದೇಶದ ರೈತನೊಬ್ಬನಿಗೆ ಇದ್ದಷ್ಟೇ ಪ್ರೀತಿಯಿತ್ತು. ಆದರೆ ಗೋರಕ್ಷಣೆಯನ್ನು ಸಾಂಕೇತಿಕಗೊಳಿಸಿ ಇತರರನ್ನು ಬಡಿದು ಸಾಯಿಸುವುದನ್ನು ಅವರು ಕ್ಷಮಿಸು
ವುದು ಸಾಧ್ಯವೇ ಇರಲಿಲ್ಲ. ಅಥವಾ ವಚನ ಚಳವಳಿಯನ್ನೇ ತೆಗೆದುಕೊಳ್ಳಿ. ಒಂದೊಮ್ಮೆ ಬಸವಣ್ಣ ಬದುಕಿದ್ದರೆ, ಅವರೂ ಸ್ವಾಮಿ ಅಗ್ನಿವೇಶರಂತೆ ಕಾಯಕಜೀವಿಗಳ ಬಗ್ಗೆ ಮಾತಾನಾಡಿದ್ದರೆ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಿ.

ವಿಚಿತ್ರ ನೋಡಿ! ಹಿಂದುತ್ವವಾದಿಗಳು ಸನ್ಯಾಸಿಗಳಿಂದ ಪಕ್ಷ ರಾಜಕಾರಣ ಮಾಡಿಸುತ್ತಿದ್ದಾರೆ. ಭಾಜಪಪರವಾದ ‘ಸನ್ಯಾಸಿ ರಾಜಕಾರಣಿಗಳು’, ಇತರೆ ಹಿಂದೂಗಳನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಭಾಷಣ ಕೇಳಬೇಕು ನೀವು! ಸನ್ಯಾಸಿಯ ನಾಲಗೆಯು ಹಿಡಿತ ತಪ್ಪಿದರೆ ಏನೆಲ್ಲ ಬಡಬಡಿಸೀತು ಎಂಬುದಕ್ಕೆ ಉತ್ತಮ ಉದಾಹರಣೆ. ಅವರನ್ನು ಈವರೆಗೆ ಯಾರೂ ಬಡಿದಿಲ್ಲ, ಬಡಿಯಬಾರದು. ಚುನಾವಣೆಯಲ್ಲಿ ಸೋಲಿಸಬೇಕು ಅಷ್ಟೆ.

ಹಿಂದೂ ಸನ್ಯಾಸಿಯೊಬ್ಬ ಭಾಜಪವನ್ನು ಟೀಕಿಸಿದಾಕ್ಷಣ ಆತನ ಹಿಂದೂ ಧರ್ಮ ನಾಶವಾಗುವುದಿಲ್ಲ. ಅಥವಾ ಆತ ವಿದೇಶಿ ಏಜೆಂಟನಾಗುವುದಿಲ್ಲ. ಅಥವಾ ವಂಚಕನಾಗುವುದಿಲ್ಲ. ಆಳುವ ಪಕ್ಷಕ್ಕೆ ಇಷ್ಟು ಅಸ್ಥಿರತೆ ಒಳ್ಳೆಯದಲ್ಲ. ಇಂತಹ ರಾಜಕಾರಣವು ದೇಶವನ್ನು ‘ಅಖಂಡ’ವಾಗಿ ಉಳಿಸುವುದಿಲ್ಲ.

ಇಂದಿರಾ ಗಾಂಧಿಯವರು ಜೈಲಿಗೆ ತಳ್ಳಿದರು ಮಾತ್ರ. ನಂತರ ಚುನಾವಣೆಯಲ್ಲಿ ಸೋತು ಸೋಲನ್ನೊಪ್ಪಿಕೊಂಡರು. ಅದರೆ ಪುಂಡರು ಯಾವ ಚುನಾವಣೆಗೂ ನಿಲ್ಲಬೇಕಿಲ್ಲ. ಯಾವ ಕಾನೂನೂ ಅವರನ್ನು ತಡೆಯುವುದಿಲ್ಲ. ಹೆಚ್ಚಿನವರಲ್ಲಿ ಸಭ್ಯತೆಯ ಸೋಂಕೂ ಇರುವುದಿಲ್ಲ. ಭಾಜಪ ಬೆಂಕಿಯ ಜೊತೆ ಆಟ ನಡೆಸಿದೆ. ಸ್ವಾಮಿ ಅಗ್ನಿವೇಶರು ಒಬ್ಬ ಗೌರವಯುತ ಹಿಂದೂ ಸನ್ಯಾಸಿ. ಹಾಗೂ ಒಬ್ಬ ಗೌರವಯುತ ಭಾರತೀಯ ಸಾಮಾಜಿಕ ಕಾರ್ಯಕರ್ತ. ವಾಜಪೇಯಿ, ಅಡ್ವಾಣಿ ಇತ್ಯಾದಿ ಹಿರಿಯ ಭಾಜಪ ನಾಯಕರ ಜೊತೆ ಹಾಗೂ ಚಂದ್ರಶೇಖರ್ ಜೊತೆ ಒಡನಾಡಿದವರು ಅವರು. ಇದು ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ.

ಧರ್ಮವೆಂಬುದು ಅಸಾಧಾರಣ ಶಕ್ತಿಯಿರುವ ಒಂದು ಅಸ್ತ್ರ. ಅದನ್ನು ಪಡ್ಡೆಹುಡುಗರ ಕೈಗಳಲ್ಲಿ ಇಡಬೇಡಿ. ಪಡ್ಡೆಹುಡುಗರನ್ನು ಅನಗತ್ಯವಾಗಿ ಉದ್ರೇಕಿಸಬೇಡಿ. ಹುಡುಗರ ಕೈಯಲ್ಲಿ ನೀವಾಗಲಿ ನಾವಾಗಲಿ ಇಡಬೇಕಿರುವುದು ಉದ್ಯೋಗವನ್ನು. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಸ್ವಯಂ ಉದ್ಯೋಗವನ್ನು.

ನೀವೊಂದು ಆಡಳಿತ ಪಕ್ಷ. ಈ ದೇಶದ ಅರ್ಧಕ್ಕಿಂತ ಹೆಚ್ಚಿನ ಜನರು ನಿಮಗೆ ವೋಟು ನೀಡಿಲ್ಲ. ಅದರೆ ಅವರೆಲ್ಲರೂ, ಆಳುವ ಪಕ್ಷ ನೀವು ಎಂಬುದನ್ನು ಒಪ್ಪಿಕೊಂಡಿದ್ದಾರೆ. ನೂರು ಪ್ರತಿಶತ ಜನರು ನಿಮ್ಮದೇ ಪ್ರಜೆಗಳು ಎಂದು ನೀವು ಒಪ್ಪಿಕೊಳ್ಳಿ. ಸೌಮ್ಯವಾದಿ ರಾಜಕಾರಣ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.