ADVERTISEMENT

ಗಾಜು ಒಡೆಯುವ ಮುನ್ನ...

ಖಾಲಿ ಬಾಟಲ್‍ಗಳನ್ನು ಕಡ್ಡಾಯವಾಗಿ ಮರಳಿಸುವಂತಹ ಕಠಿಣ ನಿಯಮ ಅಗತ್ಯ

ಡಾ.ಮುರಳೀಧರ ಕಿರಣಕೆರೆ
Published 18 ಅಕ್ಟೋಬರ್ 2021, 17:43 IST
Last Updated 18 ಅಕ್ಟೋಬರ್ 2021, 17:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಆ ಹಳ್ಳಿಗನ ಸಾಕುಪ್ರಾಣಿಯ ಚಿಕಿತ್ಸೆ ಮುಗಿಸಿ, ಅಲ್ಲೇ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕೈಗಾಡಿಯನ್ನು ನೋಡುತ್ತಿದ್ದಂತೆ ತುಸು ಅಚ್ಚರಿಯ ಜೊತೆಗೆ ಕುತೂಹಲ. ಗಾಡಿಯ ತುಂಬಾ ವಿವಿಧ ನಮೂನೆಯ ನೂರಾರು ಖಾಲಿ ಮದ್ಯದ ಬಾಟಲ್‍ಗಳು! ಹೆಚ್ಚಿನವು ಒಡೆದು ಹೋಳಾಗಿದ್ದವು. ಕೃಷಿ ಕಾರ್ಮಿಕನಾಗಿರುವ ಈ ಯುವಕ ಗುಜರಿ ವ್ಯಾಪಾರಕ್ಕೆ ಕೈಹಾಕಿರಬಹುದು ಎಂದು ಆ ಕ್ಷಣಕ್ಕೆ ಅನಿಸುತ್ತಿದ್ದಂತೆ ನನ್ನ ಊಹೆ ಸುಳ್ಳಾಗಿಸಿತ್ತು ಅವನ ವಿವರಣೆ.

‘ಇದೆಲ್ಲಾ ನಮ್ಮ ಹುಡುಗರ ಮೋಜು ಮಸ್ತಿಯ ಫಲ ಸ್ಸಾರ್. ಮೊನ್ನೆ ಗಾಂಧಿ ಜಯಂತಿ ದಿನ ಇಲ್ಲೇ ಶಾಲೆಯ ಸುತ್ತಮುತ್ತ ಕುಡುಕ್ರು ಎಸೆದ ಬಾಟ್ಲುಗಳನ್ನು ನನ್ನ ಸಣ್ ಮಗ್ಳು ಜೊತೆಗೆ ಹೆರ್ಕಿ ಗಾಡಿಗೆ ತುಂಬಿಸಿದೆ. ಒಂದು ನಾನೂರು ಅಡಿ ಜಾಗದಲ್ಲೇ ಇಷ್ಟು ಬಾಟ್ಲು ಸಿಕ್ವು ನೋಡಿ’ ಒಡೆದ ಶೀಷೆಗಳನ್ನು ಎತ್ತಿ ತೋರಿಸುತ್ತಿದ್ದಂತೆ ನಾನು ದಿಗ್ಭ್ರಮೆಗೊಂಡಿದ್ದೆ!

ಇದು ಹೇಳಿ ಕೇಳಿ ಸಣ್ಣ ಹಳ್ಳಿ. ತೀರ್ಥಹಳ್ಳಿ ಪಟ್ಟಣದಿಂದ ಹತ್ತು ಮೈಲು ದೂರದಲ್ಲಿದೆ. ಇಂಥ ಕಡೆಯೇ ದುರಾಚಾರದ ಚಹರೆಗಳು ಈ ಬಗೆಯಲ್ಲಿ ಎದ್ದು ಕಾಣುವಾಗ ಇನ್ನು ಪಟ್ಟಣಗಳ ಆಜುಬಾಜಿನ ಪರಿಸರ ಹೇಗಿರಬಹುದು? ಯೋಚಿಸುತ್ತಿದ್ದಂತೆ ಮನದೊಳಗೆ ಅವ್ಯಕ್ತ ತಳಮಳ!

ADVERTISEMENT

‘ಖಾಲಿ ಬಾಟ್ಲುಗಳನ್ನು ಎತ್ತಿಕೊಂಡು ಹೋಗದಿದ್ದರೆ ಹೋಗಲಿ, ಕುಡಿದ ನಶೇಲಿ ಅಲ್ಲೇ ಒಡೆದು ಚೂರು ಮಾಡಿ ಖುಷಿಪಡ್ತಾರೆ. ಶಾಲೆಯ ಮಕ್ಕಳು ಇಲ್ಲೇ ಓಡಾಡೋದು, ಅವರ ಕಾಲಿಗೆ ಚುಚ್ಚಿದ್ರೆ? ಸುತ್ತ ಹುಲ್ಲು ಬೆಳೆದು ದನಕರುಗಳು ಮೇಯುವಾಗ ಸೊಡ್ಡಿಗೋ ಕಾಲಿಗೋ ಚುಚ್ಚಿ ಯಮಯಾತನೆ ಪಡ್ತವೆ.
ನಮ್ಮನೆ ದನಕ್ಕೇ ಹೀಗೆ ಹುಣ್ಣಾಗಿ ಒಂದು ತಿಂಗ್ಳು ಒದ್ದಾಡಿತ್ತು...’

ಆತನ ಮಾತಲ್ಲಿ ನೋವು, ಸಂಕಟ, ಅಸಹಾಯಕತೆ. ಕಾಲಿಗೆ ಸೀಸದೋಡು ಹೊಕ್ಕಿ ಹುಣ್ಣಾದ ಹಲವು ಜಾನುವಾರುಗಳಿಗೆ ಚಿಕಿತ್ಸೆ ನೀಡಿರುವುದರಿಂದ ಪರಿಣಾಮದ ತೀವ್ರತೆಯನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿಯೇ ಅವನ ಈ ಕಾರ್ಯ ಹಿರಿದಾಗಿ ಕಂಡಿದ್ದು ಜೊತೆಗೆ ಅಭಿಮಾನವೂ ಉಕ್ಕಿ ಬಂದಿದ್ದು.

ಗಾಂಧಿ ಜಯಂತಿಯನ್ನು ಸ್ವಚ್ಛತೆ, ಶ್ರಮದಾನ ದಂತಹ ಕಾರ್ಯಗಳ ಮೂಲಕ ಆಚರಿಸುವುದು ಎಲ್ಲೆಡೆಯ ವಾಡಿಕೆ. ಅದರಲ್ಲೂ ಕೇವಲ ಪ್ರಚಾರಕ್ಕಾಗಿ ಅಂದು ಪೊರಕೆ ಹಿಡಿಯುವವರೇ ಹೆಚ್ಚು! ಆದರೆ ಯಾವುದೇ ಗುರುತಿಸುವಿಕೆ, ಪ್ರತಿಫಲದ ಅಪೇಕ್ಷೆ
ಯಿಲ್ಲದೆ, ಯಾರಲ್ಲೂ ಹೇಳಿಕೊಳ್ಳದೆ ತನ್ನಷ್ಟಕ್ಕೇ ತಾನು ನಿಸರ್ಗದಲ್ಲಿನ ಅಪಾಯಕಾರಿ ಕಸವನ್ನು ಕಡಿಮೆ ಮಾಡಲು ಸಂಕಲ್ಪ ತೊಟ್ಟಿರುವ ಹೆರಬೈಲು ಮಹೇಶನಂತಹ ವ್ಯಕ್ತಿಗಳು ತೀರಾ ಅಪರೂಪ. ಬರೀ ಗಾಂಧಿ ಜಯಂತಿಯಂದು ಅಲ್ಲ, ಸಮಯ ಆದಾಗಲೆಲ್ಲಾ ಮದ್ಯದ ಶೀಷೆ, ಪ್ಲಾಸ್ಟಿಕ್ ಕಸ ಆಯುವ ಹವ್ಯಾಸ ರೂಢಿಸಿಕೊಂಡಿರುವ ಈ ಯುವಕ ನಿಜ ಅರ್ಥದಲ್ಲಿ ಸ್ವಚ್ಛತೆಯ ರಾಯಭಾರಿ. ಪ್ರತೀ ಹಳ್ಳಿಯಲ್ಲೂ ಇಂತಹ ಒಬ್ಬೊಬ್ಬರಿದ್ದರೂ ಸಾಕು ಸ್ವಚ್ಛ ಭಾರತದ ಕನಸು ನಿಧಾನವಾಗಿಯಾದರೂ ಕೈಗೂಡೀತು.

ಸಿಲಿಕ ಎಂಬ ನೈಸರ್ಗಿಕ ವಸ್ತುವಿನಿಂದ ತಯಾರಾಗುವ ಗಾಜಿನ ಬಳಕೆ ಎಲ್ಲ ರಂಗಗಳಲ್ಲೂ ಇದೆ. ಸಿದ್ಧ ಆಹಾರ, ಪಾನೀಯ, ಔಷಧ ಸಂಗ್ರಾಹಕಗಳು, ರೋಗಪತ್ತೆ ಪರಿಕರಗಳು, ವಾಹನೋದ್ಯಮ, ಕೈಗಾರಿಕೆ ಗಳು, ಸಂಪರ್ಕ ಸಾಧನಗಳು, ಗೃಹಬಳಕೆಯ ವಸ್ತುಗಳು ಎಂದೆಲ್ಲಾ ಗಾಜು ಸರ್ವವ್ಯಾಪಿ. ಸುರಕ್ಷತೆ ಮತ್ತು
ಕಡಿಮೆ ವೆಚ್ಚ ಈ ಜನಪ್ರಿಯತೆಗೆ ಪ್ರಮುಖ ಕಾರಣ. ಪ್ರಕೃತಿಯಲ್ಲಿ ಸಾವಿರಾರು ವರ್ಷಗಳು ಹಾಗೆಯೇ ಉಳಿದರೂ ಪ್ಲಾಸ್ಟಿಕ್ ರೀತಿಯಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ವಿಸರ್ಜಿಸದು. ಆದರೆ ತುಂಬಾ ನಾಜೂಕಾದ ಕಾರಣ ಬಳಕೆಯಲ್ಲಿ ಜಾಗರೂಕತೆ ಬೇಕು. ಎಚ್ಚರ ತಪ್ಪಿದರೆ ಒಡೆದು ಚೂರಾಗುವುದು ಗಾಜಿನ ಗುಣ.

ನಿರ್ಜನ ಜಾಗಗಳು, ಪ್ರವಾಸಿ ತಾಣಗಳು, ಶಾಲಾ ವಠಾರಗಳು, ಕಾಡಂಚು, ಹಳ್ಳಿಯ ಪರಿಸರದಲ್ಲಿ ಮೋಜು ಮಸ್ತಿ ಮಾಡುವ ಚಾಳಿ ಹೆಚ್ಚುತ್ತಿದೆ. ಕುಡಿದು ಮತ್ತೇರಿಸಿಕೊಂಡು ಬಾಟಲ್‍ಗಳನ್ನು ಪುಡಿ ಮಾಡಿ ವಿಕೃತಾನಂದ ಪಡೆಯುವ ಪ್ರವೃತ್ತಿ ಸಾಂಕ್ರಾಮಿಕದಂತೆ ಹಳ್ಳಿಗಳಿಗೂ ವ್ಯಾಪಿಸಿರುವುದು ಆತಂಕಕಾರಿ.
ಸೊಪ್ಪು, ದರಗು, ಕಟ್ಟಿಗೆಗೆಂದು ಕಾಡಿಗೆ ಹೋಗುವ ಕೃಷಿಕರು, ಜಾನುವಾರುಗಳು, ವನ್ಯಜೀವಿಗಳು, ಶಾಲೆಗೆ ಹೋಗುವ ಪುಟ್ಟ ಮಕ್ಕಳಿಗೆ ಗಾಜಿನ ತ್ಯಾಜ್ಯ ಕಂಟಕಕಾರಿ.

ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲೊಂದಾದ ಮದ್ಯಕ್ಕಂತೂ ಕಡಿವಾಣ ಹಾಕಲಾಗದು. ಆದರೆ ಕುಡಿದ ನಂತರ ಬಾಟಲ್‍ಗಳನ್ನು ಎಲ್ಲೆಂದರಲ್ಲಿ ಎಸೆಯುವ, ಒಡೆದು ಚೂರಾಗಿಸುವ ವಿಕೃತಿಗೆ ಬ್ರೇಕ್ ಹಾಕದಿದ್ದರೆ ಎಲ್ಲೆಡೆಯೂ ಈ ಅಪಾಯಕಾರಿ ಕಸವೇ ತುಂಬಿಕೊಂಡೀತು.

ಖಾಲಿ ಬಾಟಲ್‍ಗಳನ್ನು ಕಡ್ಡಾಯವಾಗಿ ಮರಳಿಸುವಂತಹ ಕಠಿಣ ನಿಯಮದ ಅಗತ್ಯ ಖಂಡಿತಾ ಇದೆ. ಇಲ್ಲವೇ ಮದ್ಯವನ್ನು ಗಾಜಿನ ಬಾಟಲ್‍ಗಳ ಬದಲಾಗಿ ಟಿನ್‍ಗಳಲ್ಲಿ ಮಾರುವಂತಹ ನೀತಿ ರೂಪಿಸಿದರೆ ಪರಿಸರದಲ್ಲಿ ಶೀಷೆಗಳ ತ್ಯಾಜ್ಯ ತುಸು ಕಡಿಮೆಯಾದೀತು. ಜನ, ಜಾನುವಾರುಗಳು, ನಿಸರ್ಗದ ಸ್ವಾಸ್ಥ್ಯದ ದೃಷ್ಟಿಯಿಂದ ಸರ್ಕಾರ ಗಂಭೀರವಾಗಿ ಚಿಂತಿಸಿ ಕಾರ್ಯತತ್ಪರವಾಗುವುದು ಒಳಿತು.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.