ADVERTISEMENT

ಪ್ರೊಫೆಸರ್ ಬೆಕ್ಕಣ್ಣ!

ಸುಮಂಗಲಾ
Published 31 ಜನವರಿ 2021, 19:31 IST
Last Updated 31 ಜನವರಿ 2021, 19:31 IST
.
.   

ಬೆಕ್ಕಣ್ಣ ಕೋವಿಡ್ ಕುರಿತ ಲೇಖನ, ಸುದ್ದಿಗಳನ್ನು ತೆಗೆತೆಗೆದು, ಮೊಗೆಮೊಗೆದು ಓದುತ್ತ, ಟಿಪ್ಪಣಿ ಮಾಡುತ್ತಿತ್ತು. ‘ಏನಲೇ... ಇಂಟರ್‌ನ್ಯಾಷನಲ್ಕಾನ್ಫರೆನ್ಸಿಗೆ ಹೊಂಟೀಯೇನ್’ ಎಂದು ಕಿಚಾಯಿಸಿದೆ.

‘ಕನ್ನಡಮ್ಮನ ಹೆಮ್ಮೆಯ ಮಗಾ ನಾ. ಹಾವೇರಿ ಸಾಹಿತ್ಯ ಸಮ್ಮೇಳನದಾಗೆ ಕೊರೊನಾ ಗೋಷ್ಠಿ ಇರತೈತಿ ಅಂದಾರ. ಕೊರೊನಾಪೀಡಿತರು, ಕೊರೊನಾಲಾಭಿತರು, ಕೊರೊನಾನಷ್ಟಿತರು, ಹಿಂಗ ಬ್ಯಾರೆಬ್ಯಾರೆ ಮಂದಿದು ಅನುಭವ, ಅಂಕಿಸಂಖ್ಯೆ ಸೇರಿಸಿ ಸಕಲೆಂಟು ಸಂಕಟಗಳ ಲೇಖನ ಬರೆದು, ಗೋಷ್ಠಿವಳಗ ವೋದ್ತೀನಿ’ ಎಂದಿತು.

‘ಅಲ್ಲಿ ಗಂಭೀರ ಸಾಹಿತ್ಯದ ಮಂದಿ ಬಂದಿರ್ತಾರ. ಲಾಭಿತರು, ನಷ್ಟಿತರು ಇಂತಾ ಪದಪ್ರಯೋಗ ಮಾಡಬಾರದು...’ ನನ್ನ ಮಾತನ್ನು ಅರ್ಧಕ್ಕೇ ತುಂಡರಿಸಿ, ‘ಇವೆಲ್ಲ ಕೊರೊನಾಕಾಲದ ಪದಗಳು’ ಎಂದು ವಾದಿಸಿತು.

ADVERTISEMENT

‘ಹಿಂತಾ ಅಡ್ನಾಡಿ ಲೇಖನನೆಲ್ಲ ತಗಳಂಗಿಲ್ಲ’ ಎಂದೆ. ‘ಈ ಲೇಖನ ತಗಳದಿದ್ರೆ, ಇದ್ರಾಗೆ ಅಂಕಿಸಂಖ್ಯೆ ತೆಗದು, ಒಂದಿಷ್ಟು ಕಣ್ಣೀರು ಚಿಮುಕಿಸಿ, ವಾಕ್ಯಗಳನ್ನು ಅರ್ಧರ್ಧಕ್ಕೆ ಕತ್ತರಿಸಿ, ಕವನ ಮಾಡಿ, ಕಾವ್ಯಗೋಷ್ಠಿಗೆ ಕಳಿಸ್ತೀನು’ ಎಂದು ಭಲೇ ವಿಶ್ವಾಸದಿಂದ ಹೇಳಿತು. ಆಮೇಲೆ ಕುಳಿತು ಪ್ರೊಫೈಲ್ ಸಿದ್ಧಮಾಡುತ್ತ, ‘ನಿರಾಣಿಮಾಮ ಗಣಿಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸ್ತೀವಿ ಅಂದಾನ. ನಾ ಪ್ರೊಫೆಸರ್ ಪೋಸ್ಟಿಗೆ ಅರ್ಜಿ ಹಾಕತೀನಿ’ ಎಂದಿತು.

‘ನಿಂಗೇನು ಅನುಭವ ಐತಲೇ’.

‘ಇಲಿ, ಹೆಗ್ಗಣ ಬಿಲ ಹೆಂಗ ಅಗಿತಾವು, ಹಂತಾ ಬಿಲದೊಳಗೆ ನುಗ್ಗಿ ಹೆಂಗ ಬ್ಯಾಟೆ ಆಡೂದಂತ ನನಗ ಗೊತ್ತದ. ಗಣಿಗಾರಿಕೆ ವಿ.ವಿಗೆ ಗಾಲಿರೆಡ್ಡಿ ಮಾಮಾನನ್ನೇ ಕುಲಪತಿ ಮಾಡೂಹಂಗ ಕಾಣ್ತದ. ಅಲ್ಲಿ ಸೇರೋರಿಗೆ ಬೇಕಾಗಿರದು ಪಿಎಚ್ಡಿ ಅಲ್ಲ, ಗಣಿಗಾರಿಕೆ ಮಾಡಿದ ಪ್ರಾಕ್ಟಿಕಲ್ ಅನುಭವ. ಎಲ್ಲಾ ಥರದ ಗಣಿಗಾರಿಕೆ ಹೆಂಗ ಮಾಡೂದು, ಆಮ್ಯಾಲದನ್ನ ಹೆಂಗ ಅರಗಿಸಿಕೊಳ್ಳೂದು, ಇವೂ ಸಿಲಬಸ್ಸಿನೊಳಗ ಇರತೈತಿ. ಡಿಕೆಶಿ ಮಾಮಾನೂ ಸೇರಿದಂತೆ ಭಾಳ ಮಂದಿ ರಾಜಕಾರಣಿಗಳು ವಿ.ವಿಗೆ ವಿಸಿಟಿಂಗ್ ಪ್ರೊಫೆಸರ್ ಆಗತಾರಂತ’ ಎನ್ನುತ್ತ ಅರ್ಜಿ ಕಳಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.