ADVERTISEMENT

ಮತಭ್ರಮಣೆ

ಲಿಂಗರಾಜು ಡಿ.ಎಸ್
Published 19 ಅಕ್ಟೋಬರ್ 2021, 18:40 IST
Last Updated 19 ಅಕ್ಟೋಬರ್ 2021, 18:40 IST
ಚುರುಮುರಿ
ಚುರುಮುರಿ   

‘ಸಾ ಮತ, ಮೌಢ್ಯ ಅಂದರೇನು?’ ಅಂತ ಹಳೇ ಪ್ರಶ್ನೆಯ ಹೊಸದಾಗಿ ಕೇಳಿದೆ.

‘ನೋಡ್ರಲಾ ಅದು ನೀವು ತಿಳಕಂಡಂಗಲ್ಲ. ಹಳೇ ರಾಜಕಾರಣಿಗಳು ಕೊಡೋ ಹೊಸಾ ಭರವಸೆ ನಂಬಿ ನಾವು ಮತ ಹಾಕ್ತೀವಲ್ಲ ಅದು ಮೌಢ್ಯ’ ಅಂತ ವಿವರಣೆ ಕೊಟ್ಟರು.

‘ಇದೊಂದ ಸರಿಯಾಗಿ ಯೇಳಿದೆ ಕಲಾ. ಇವು ನಮ್ಮನ್ನ ಜಾತಿ, ಧರ್ಮದ ಲೆಕ್ಕದಲ್ಲಿ ಮತಭ್ರಮಣೆ ಮಾಡ್ತವೆ’ ಯಂಟಪ್ಪಣ್ಣ ನೊಂದ್ಕತು.

ADVERTISEMENT

‘ಪಕ್ಸಗಳಲ್ಲಿ ಭಿನ್ನಮತ ಜಾಸ್ತಿಯಾಗಿ ಸಾಸಕರು ಆತ್ಮಾಹುತಿ ಮಾಡಿಕ್ಯಂಡು ವೀರಗಲ್ಲಾಯ್ತಲೇ ಇರತರೇ! ಪಾಪದ ಕುಮಾರಣ್ಣ ಪಕ್ಸದ ತಳಿ ಸಂವರ್ಧನೆ ಮಾಡಿಕ್ಯಂಡಿದ್ರೆ ರಾತ್ರೋರಾತ್ರಿ ಕುದುರೆಗಳನ್ನ ಎಪ್ಪೆಸ್ ಮಾಡೋರು ಜಾಸ್ತಿಯಾಗ್ಯವರೆ. ಬೀಜೆಪಿ ಲಾಯದೇಲಿ ಜಾಗ ಸಾಕಾಗದೇ ಹೋರಿಗಳು ಗುಟುರು ಹಾಕುತ್ಲೇ ಇರತವೆ’ ಅಂತ ಚಂದ್ರು ಒಗ್ಗರಣೆ ಹಾಕಿದ.

‘ಸರ್ಕಾರಿ ಉದ್ಯಮಗಳು, ರೋಡುಗಳು ನಮ್ಮ ಮತದ ಥರವೇ ಕುಲಗೆಟ್ಟೋಗ್ಯವೆ. ಭರವಸೆಗಳು ಬಿಲ್ಡಿಂಗ್ ಥರಾ ಕುಸೀತಾವೆ. ರಾಜಕೀಯದ ಖೇಲು ಮೊದಲೇ ತಿಳಕಣಕೆ ಏನಾದ್ರೂ ಒಂದು ದಾರಿ ಹೇಳಿ ಗುರುವೇ?’ ನಾನು ಹೊಸ ವಿಚಾರ ತೆಗೆದೆ.

‘ನಮ್ಮೂರಗೆ ವಿಳೇದೆಲೆ ಮ್ಯಾಲೆ ಅಂಜನ ಹಾಕಿ ನೋಡೋನು ಒಬ್ಬವನೆ ಕಯ್ಯಾ! ಭೂಮಂಡಲದ ಯಾವ ಕೊಯ್‍ಮೂಲೇಲಿ ಏನೇ ನಡೆದ್ರೂ ಅವನಿಗೆ ಕರ್ಣಪಿಶಾಚಿಗಳು ಕಿವೀಲಿ ಬಂದು ಹೇಳ್ತವಂತೆ. ಆಯಪ್ಪನ್ನ ತಕ್ಕೋಗಿ ಅಂಜನ ಹಾಕ್ಸಿ ರಾಜಕಾರಣಿಗಳ ಮಳ್ಳಿ ಆಟ ತಿಳಕಬೋದು ಕನಿರ್ಲಾ’ ತುರೇಮಣೆ ತಮ್ಮ ಆಲೋಚನೆ ತಿಳಿಸಿದರು.

‘ಅಲ್ಲಸಾ, ನಾನೇಳದು ಆಯಪ್ಪನ್ನ ಮೋದಿ ಮಾವಾರು ಮಿಲಿಟರಿಗೆ ನೇಮಿಸಿಕ್ಯಂದ್ರೆ ಚೀನಾದವು ಯಾವಾಗ ಗಡಿ ದಾಟಿ ಬತ್ತವೆ, ಉಗ್ರಿಗಳು ಯಾವಾಗ ಬುಲೆಟ್ ಹಾರಿಸ್ತವೆ ಅಂತ ತಿಳಕಂದು ತಡೆ ಹೊಡಿಸಬೌದು. ಪಕ್ಸಗಳಲ್ಲಿ ಜಾಸ್ತಿ ನಿಗರಾಡೋರಿಗೆ ಇಡ ಮಾಡಬೌದು!’ ನನ್ನ ವಿಚಾರಧಾರೆಯನ್ನ ಕೇಳಿ ಎಲ್ಲಾರು ಕೈಗೆ ಮೆಟ್ಟು ತಗತಿದ್ದಂಗೆ ನಾನು ಚಂಗನೆ ಪಂಗನೆ ನೆಗೆದು ಹೊಂಟೋದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.