ADVERTISEMENT

ಚುರುಮುರಿ: ಪಿ.ಜಿ. ಗಂಡ

ತುರುವೇಕೆರೆ ಪ್ರಸಾದ್
Published 22 ಜುಲೈ 2022, 19:29 IST
Last Updated 22 ಜುಲೈ 2022, 19:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅಬ್ಬಬ್ಬಾ! ಎಂಥ ಪುಣ್ಯವಂತ?’ ಎಂದು ಪೇಪರ್ ಹಿಡಿದು ಲೊಚಗುಟ್ಟಿದ ಪರ್ಮೇಶಿ.

‘ಯಾರ‍್ರೀ ಅದು ಅಂತಹ ಮಹಾನ್ ಪುಣ್ಯವಂತ’ ಕಾಫಿ ಹಿಡಿದು ಬಂದರು ಪದ್ದಮ್ಮ.

‘ಪಿ.ಜಿ. ಗಂಡ ಕಣೆ... ಏನ್ ಅದೃಷ್ಟನೇ ಇವನದ್ದು?’

ADVERTISEMENT

‘ಏನು? ಪೋಸ್ಟ್ ಗ್ರಾಜುಯೇಷನ್ ಮಾಡ್ಬಿಟ್ರೆ ಅದೊಂದು ಅದೃಷ್ಟದ ವಿಷಯನಾ? ಇವತ್ತು ಕಾಲಿಗೊಂದು ಕೊಸರಿಗೊಂದು ಡಿಜಿಟಲ್ ಯೂನಿವರ್ಸಿಟಿಗಳಿವೆ. ಯಾರ್ ಬೇಕಾದ್ರೂ ಪಿ.ಜಿ. ತಗೊಂಡು ಮದ್ವೆ ಆಗಿ ಪಿ.ಜಿ. ಗಂಡ ಆಗ್ಬಹುದು...’

‘ಅಯ್ಯೋ ಪಿ.ಜಿ. ಗಂಡ ಅಂದ್ರೆ ಅದಲ್ವೇ? ಅಹಮದಾಬಾದಲ್ಲಿ ಒಬ್ಬ ಗಂಡ ಮನೆ ಬಿಟ್ ಹೋಗಿ ಪಿ.ಜಿ. ಸೇರ್ಕೊಂಡಿದಾನಂತೆ’.

‘ಎಲ್ಲಾ ನಿಮ್ ತರ ಮನೇಲೇ ಕೂತಿರ‍್ತಾರಾ? ದೂರದೂರಲ್ಲಿ ಕೆಲಸ ಅಂದ್ಮೇಲೆ ಹೆಂಡ್ತಿ, ಮನೆ ಬಿಟ್ಟು ಪಿ.ಜಿಗೆ ಸೇರ್ಕೊಳ್ಳೇಬೇಕು’.

‘ಅಯ್ಯೋ! ಕೆಲಸಕ್ಕೆ ಅಂತ ಅಲ್ಲ ಕಣೆ, ಅತ್ತೆ– ಸೊಸೆ ಜಗಳ ನೋಡಿ ರೋಸಿ ಮನೆ ಬಿಟ್ಟು ಹೋಗಿ ಪಿ.ಜಿ. ಸೇರ್ಕೊಂಡಿದಾನಂತೆ’.

‘ಅಯ್ಯೋ ದೇವರೇ.. ಅವನ್ಗೇನ್ರೀ ಬಂತು ? ಹೆಂಡ್ತಿ, ಅಮ್ಮನ್ ಬಿಟ್ ಹೋಗಿದಾನಲ್ಲ’.

‘ಅವನನ್ಯಾಕೇ ಬೈತೀಯ? ಅತ್ತೆ– ಸೊಸೆ ಜಗಳ ಎಷ್ಟೂ ಅಂತ ಕೇಳ್ತಾನೆ?’

‘ಹೋದ್ರೆ ಹೋಗ್ತಾನೆ ಬಿಡ್ರೀ. ಅವನನ್ನ ನೆಚ್ಕೊಂಡೇ ಬದುಕ್ಬೇಕಾ? ಹೆಂಡ್ತಿನೂ ಆರಾಮಾಗಿ ಇರ್ತಾಳೆ’.

‘ಅಲ್ಲೇ ಇರೋದು ಸಮಸ್ಯೆ? ಗಂಡನೇ ಇಲ್ಲ ಅಂದ್ಮೇಲೆ ನಿಂಗೇನ್ ಕೆಲಸ ಇಲ್ಲಿ, ನೀನೂ ಮನೆ ಖಾಲಿ ಮಾಡು ಅಂತ ಅತ್ತೆ, ನಾನ್ ಮಾಡಲ್ಲ ಅಂತ ಸೊಸೆ, ಇಬ್ರೂ ಕೋರ್ಟ್ ಮೆಟ್ಲು ಹತ್ತಿದಾರಂತೆ’.

‘ಸರಿ ಮತ್ತೆ, ಅವಳು ಕೋರ್ಟಲ್ಲಿ ಕೇಳ್ತಾಳೆ: ನನ್ನ ಗಂಡನು ತಾಟಕಿ ಅಂತ ಅವರಮ್ಮನ ಕೈಗೆ ನನ್ನನ್ನ ಕೊಟ್ಟು ತಾನು ಸುಖವಾಗಿದಾನೆ. ಇದು ಡೊಮೆಸ್ಟಿಕ್ ವಯಲೆನ್ಸು. ನನ್ ಗಂಡನ್ ವಾಪಸ್ ಮನೆಗೆ ಬರೋ ಹಾಗ್ ಆದೇಶ ಮಾಡಿ ಅಂತ’.

‘ಇವರು ಕೇಳುದ್ರು ಅಂತ ನ್ಯಾಯಾಧೀಶರು ಆದೇಶ ಮಾಡಿಬಿಡ್ತಾರಾ?

‘ಮಾಡ್ಲೇ ಬೇಕು. ಇಲ್ಲ ಅಂದ್ರೆ ನ್ಯಾಯಾಧೀಶರ ಶ್ರೀಮತಿ ಚೀಫ್ ಜಸ್ಟಿಸ್ ಸುಮ್ನೆ ಬಿಟ್‌ಬಿಡ್ತಾರಾ?’ ನಕ್ಕರು ಪದ್ದಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.