ADVERTISEMENT

ಸಮಾಜ ಕೆಟ್ಟಿಲ್ಲ, ಬದಲಾಗಲಿ ದೃಷ್ಟಿಕೋನ

ನೈಜ ಮಾನವೀಯ ಪ್ರಸಂಗಗಳು ಬದುಕಿನಲ್ಲಿ ಭರವಸೆ ಉಳಿಸುತ್ತವೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:45 IST
Last Updated 20 ಆಗಸ್ಟ್ 2019, 19:45 IST
   

‘ಜಗತ್ತು ಕೆಟ್ಟಿದೆ’ ಎಂದು ಕೆಲವರು ಹಲುಬುವುದನ್ನು ಕಂಡಾಗಲೆಲ್ಲ, ‘ಸಮಾಜ ಖಂಡಿತ ಕೆಟ್ಟಿಲ್ಲ, ಅದನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಗಬೇಕಾಗಿದೆ’ ಎಂಬುದಕ್ಕೆ ನಿದರ್ಶನವಾಗಿ ಕೆಲವು ನೈಜ ಘಟನೆಗಳು ನೆನಪಾಗುತ್ತವೆ.

ಎರಡು ವರ್ಷಗಳ ಹಿಂದೆ ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಲಾಯಿಸಿಕೊಂಡು ಹೊರಟಿದ್ದೆ. ನನ್ನ ಮುಂದಿದ್ದ ಇನೋವಾ ಕಾರಿನ ಡ್ರೈವರ್‌ ರಸ್ತೆಉಬ್ಬು ಗಮನಿಸದೆ ತಕ್ಷಣ ಬ್ರೇಕ್ ಹಾಕಿದ. ನನ್ನ ಕಾರು ನಿಯಂತ್ರಣಕ್ಕೆ ಸಿಗದೆ ಆ ಕಾರಿಗೆ ಗುದ್ದಿತು. ಇನೋವಾದಲ್ಲಿ ಕಾರಿನ ಮಾಲೀಕರಾದ ಅಜ್ಜ, ಅಜ್ಜಿ ಇದ್ದರು. ಹುಬ್ಬಳ್ಳಿಯ ಹೋಟೆಲೊಂದರ ಮಾಲೀಕರು ಎಂದು ಡ್ರೈವರ್ ಹೇಳಿದ. ನಾನು ಅವರ ಬಳಿ ‘ಕ್ಷಮಿಸಿ, ನಿಮ್ಮ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ನನಗೆ ಕಂಟ್ರೋಲ್ ಸಿಗಲಿಲ್ಲ. ನಿಮ್ಮ ಕಾರನ್ನು ರಿಪೇರಿ ಮಾಡಿಸಿ
ಕೊಡುತ್ತೇನೆ’ ಎಂದೆ.

ಅದಕ್ಕೆ ಅವರು ‘ನಾವು ಉಡುಪಿಗೆ ಹೊರಟಿದ್ದೇವೆ. ನಾಲ್ಕು ದಿನಗಳ ನಂತರ ಹುಬ್ಬಳ್ಳಿಗೆ ಬಂದ ಮೇಲೆ, ರಿಪೇರಿಗೆ ಆಗುವ ಖರ್ಚನ್ನು ಕೊಡಿ’ ಎಂದು ನನ್ನ ವಿಳಾಸ, ಮೊಬೈಲ್ ನಂಬರ್ ಪಡೆದುಕೊಂಡರು. ಎಂಟು ದಿನಗಳ ನಂತರ ಒಂದು ಬೆಳಿಗ್ಗೆ ಹುಬ್ಬಳ್ಳಿಯ ನನ್ನ ಕಚೇರಿಯಲ್ಲಿ ಕುಳಿತಿದ್ದೆ. ಆ ಇನೋವಾ ಕಾರಿನ ಡ್ರೈವರ್ ಬಂದು ‘ಸರ್, ಸಾಹೇಬರು ಕರೆಯುತ್ತಿದ್ದಾರೆ’ ಎಂದ. ನಾನು ಜೇಬಿಗೆ ನಾಲ್ಕೈದು ಸಾವಿರ ರೂಪಾಯಿ ಕತ್ತರಿ ಬಿತ್ತು ಎಂದುಕೊಳ್ಳುತ್ತಲೇ ಹೊರಗೆ ಹೋದೆ. ಕಾರಿನಲ್ಲಿದ್ದ ಮಾಲೀಕರು ‘ನಾನು ಕಾರು ರಿಪೇರಿ ಮಾಡಿಸಿದ್ದೇನೆ. ಏನೋ ಆಕಸ್ಮಿಕವಾದ ಘಟನೆ ಅದು. ನಮ್ಮ ಡ್ರೈವರ್‌ ಬಂದು ಕಾರು ರಿಪೇರಿ ಮಾಡಿಸಿದ ಹಣ ಕೇಳಿದರೆ ಕೊಡಬೇಡಿ, ನಾನು ಎಲ್ಲಾ ಕೊಟ್ಟಿದ್ದೇನೆ. ಈ ಡ್ರೈವರ್‌ಗಳು ಹೀಗೆಲ್ಲಾ ಹಣ ಪಡೆಯುತ್ತಾರೆ, ಅದನ್ನೇ ತಿಳಿಸಿ ಹೋಗೋಣ ಅಂತ ಬಂದೆ’ ಎಂದರು.

ADVERTISEMENT

ಸರ್ಕಾರಿ ಶಾಲೆ ಮಕ್ಕಳು ‘ಶಾಲೆ ತಪ್ಪಿಸುವುದರ ಹಿಂದಿನ ಕತೆ’ ಕುರಿತು ವರ್ಷದ ಹಿಂದೆ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದೆ. ಮನೆ ಕಟ್ಟಲು ಮಾಡಿದ ಸಾಲ ತೀರಿಸಲು ಅಪ್ಪನಿಗೆ ನೆರವಾಗಲು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದುದನ್ನು ಪ್ರಸ್ತಾಪಿಸಿದ್ದೆ. ಆ ಲೇಖನ ಓದಿದ ದೊಡ್ಡಬಳ್ಳಾಪುರದ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ‘ಆ ಬಾಲಕನ ಪ್ರಸಂಗ ಓದಿ ಮನಸ್ಸಿಗೆ ನೋವಾಯಿತು. ಅವನ ಅಪ್ಪನ ಸಾಲದ ಹೊರೆ ಕಡಿಮೆ ಮಾಡಲು ನಾನು ₹ 25 ಸಾವಿರ ಕೊಡುತ್ತೇನೆ. ಆ ಹುಡುಗನ ಬ್ಯಾಂಕ್ ವಿವರ ಕೊಡಿ’ ಎಂದು ಕೇಳಿ ಪಡೆದು, ತಕ್ಷಣವೇ ಆ ಹುಡುಗನ ಖಾತೆಗೆ ಹಣ ಜಮಾ ಮಾಡಿದರು. ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಮತ್ತೆ ಕರೆ ಮಾಡಿ, ಆ ಹುಡುಗನಿಗೆ ಈ ವರ್ಷವೂ ಇಪ್ಪತ್ತೈದು ಸಾವಿರ ಹಣ ಕಳುಹಿಸುವುದಾಗಿ ತಿಳಿಸಿದರು. ಗುರುತಿಲ್ಲ, ಪರಿಚಯವಿಲ್ಲ, ಲೇಖನ ನೋಡಿ ವಿದ್ಯಾರ್ಥಿಗೆ ಸಹಾಯ ಮಾಡಿದ ಅವರ ಸೇವಾ ಮನೋಭಾವ ಉಲ್ಲೇಖನೀಯ.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಸ್ಕಾಲರ್‌ಶಿಪ್‌ ಪ್ರೋಗ್ರಾಂನಡಿ, ಬಡ ಮಕ್ಕಳಿಗೆ ಧಾರವಾಡದ ಕಾಲೇಜೊಂದರಲ್ಲಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ ಮತ್ತು ದಾನಿಗಳ ಸಹಕಾರದಿಂದ ಉಚಿತ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ ಧಾರವಾಡದ ಭಾರತ ಬುಕ್ ಡಿಪೊದ ಮಾಲೀಕರು ಐವರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿದ್ದರು. ಈ ವರ್ಷ ಹಳ್ಳಿಯ ಅಪ್ಪ– ಮಗಳು ಭಾರತ ಬುಕ್ ಡಿಪೊಕ್ಕೆ ಬಂದು ಎರಡನೇ ಪಿಯುಸಿ ಪುಸ್ತಕ ಖರೀದಿಸುತ್ತಿದ್ದಾಗ ಅಂಗಡಿಯ ಮಾಲೀಕರು ‘ಮಗಳು ಯಾವ ಕಾಲೇಜು’ ಎಂದು ವಿಚಾರಿಸಿದರಂತೆ. ಆಕೆಯ ತಂದೆ ‘ಹಂಚಿನಮನಿ ಕಾಲೇಜಿನಲ್ಲಿ ಸ್ಕಾಲರ್‌ಶಿಪ್‌ ಪ್ರೋಗ್ರಾಂನಡಿ ಓದುವ ಅವಕಾಶ ನನ್ನ ಮಗಳಿಗೆ ಸಿಕ್ಕಿದೆ. ಕಳೆದ ವರ್ಷ ನೀವು ಉಚಿತವಾಗಿ ಪುಸ್ತಕ ಕೊಟ್ಟಿದ್ದವರಲ್ಲಿ ಇವಳೂ
ಒಬ್ಬಳಾಗಿದ್ದಳು’ ಅಂದರಂತೆ. ಅಂಗಡಿಯ ಮಾಲೀಕರು, ‘ಆ ಸಂಸ್ಥೆಯವರು ಎರಡನೇ ಪಿಯುಸಿಗೂ ಉಚಿತವಾಗಿ ಪುಸ್ತಕ ನೀಡುತ್ತಾರೆ. ನೀವು ಯಾಕೆ ಹಣ ಕೊಟ್ಟು ಕೊಂಡುಕೊಳ್ಳುತ್ತೀರಿ’ ಎಂದರಂತೆ. ಅದಕ್ಕೆ ಅವರು ‘ಕಳೆದ ವರ್ಷ ನನ್ನ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಈ ವರ್ಷ ಸ್ವಲ್ಪ ಸುಧಾರಿಸಿದೆ. ನಾನು ಹಣ ಕೊಟ್ಟು ಪುಸ್ತಕ ಖರೀದಿಸುತ್ತೇನೆ. ನಮಗಿಂತ ಬಡ ಮಕ್ಕಳಿಗೆ ಪುಸ್ತಕಗಳು ಸಿಗುವಂತಾಗಲಿ’ ಎಂದು ಹೇಳಿದರಂತೆ.

ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರ ಶಾಲೆಗೆ ಊರವರು ತಾವು ಬೆಳೆದ ತರಕಾರಿ, ಹಾಲು, ಮೊಸರು, ಮಜ್ಜಿಗೆ ಮುಂತಾದವನ್ನು ಉಚಿತವಾಗಿ ನೀಡುತ್ತಾರೆ. ತಮ್ಮ ಮಕ್ಕಳು ಆ ಶಾಲೆಗೆ ಹೋಗದೇ ಇದ್ದರೂ, ಅವನ್ನೆಲ್ಲ ಶಾಲೆಗೆ ಕೊಟ್ಟು ಸಂತೋಷಪಡುತ್ತಾರೆ. ಹೀಗೇ ಒಮ್ಮೆ ಆ ಶಾಲೆಯ ಮಕ್ಕಳಿಗಾಗಿ ಮನೆಯಿಂದ ಮಜ್ಜಿಗೆ ತೆಗೆದುಕೊಂಡು ಹೊರಟಿದ್ದ ಅಜ್ಜಿಯೊಬ್ಬಳನ್ನು ‘ನೀನು ಹಾಲನ್ನು ಡೈರಿಗೆ ಕೊಟ್ಟರೆ ಹಣ ಸಿಗುತ್ತದಲ್ಲವೇ?’ ಎಂದೆ. ಅದಕ್ಕೆ ಆಕೆ ‘ಹೌದಪ್ಪಾ, ಡೈರಿಗೆ ಕೊಟ್ಟರೆ ಹಣ ಸಿಗುತ್ತೆ. ಶಾಲೆಗೆ ಕೊಟ್ಟರೆ ಪುಣ್ಯ ಸಿಗುತ್ತೆ’ ಅಂದಳು. ಎಂತಹ ಮಾತು? ಆ ಅಜ್ಜಿ ಹೆಚ್ಚು ಶಿಕ್ಷಣ ಪಡೆದಿಲ್ಲ ಅನ್ನಿಸಿತು. ಯಾಕೆಂದರೆ, ಆಧುನಿಕ ಶಿಕ್ಷಣದ ಪರಿಣಾಮ ನೋಡಿದರೆ, ಶಿಕ್ಷಣ ಪಡೆದಿದ್ದರೆ ಇಂಥ ನಿಸ್ವಾರ್ಥ ಮನಸ್ಸು ಇರುತ್ತಿರಲಿಲ್ಲವೇನೋ ಅನ್ನಿಸಿತು!

ಹೀಗೆ ಹುಡುಕಿ ನೋಡಿದರೆ, ಜಗತ್ತಿನಲ್ಲಿ ಒಳಿತಿನ ಕಣಜವೇ ಇದೆ. ನಕಾರಾತ್ಮಕ ಸುದ್ದಿಗಳನ್ನು ಕೇಳಿ, ಜಗತ್ತು ಕೆಟ್ಟು ಹೋಗಿದೆ ಎಂದುಕೊಳ್ಳುವಾಗಲೆಲ್ಲಾ ಇಂತಹ ಪ್ರಸಂಗಗಳು ನೆನಪಾಗಿ, ಬದುಕಿನಲ್ಲಿ ಭರವಸೆ ಉಳಿಸುತ್ತವೆ. ಮಾನವೀಯತೆಗೆ ಕನ್ನಡಿಯಾಗುತ್ತವೆ. ಬದುಕನ್ನು ಮತ್ತಷ್ಟು ಪ್ರೀತಿಸುವ ಆಸೆ ಚಿಗುರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.