ADVERTISEMENT

ಸಂಗತ: ಉನ್ನತ ಶಿಕ್ಷಣ ಮತ್ತು ಸ್ವತಂತ್ರ ಚಿಂತನೆ

ಉದಾರ ಶಿಕ್ಷಣ ನೀಡುವ ಹೆಬ್ಬಯಕೆಯಿಂದ ಆರಂಭವಾದ ಖಾಸಗಿ ಸಂಸ್ಥೆಗಳ ಪ್ರಾಧ್ಯಾಪಕರು ಅಭಿಪ್ರಾಯ ಹತ್ತಿಕ್ಕಿಕೊಳ್ಳಬೇಕಾದ ಸ್ಥಿತಿ ಬಂದಿರುವುದು ಶೋಚನೀಯ

ಡಾ.ಜ್ಯೋತಿ
Published 25 ಮಾರ್ಚ್ 2021, 19:30 IST
Last Updated 25 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವುದೇ ರಾಜಕೀಯ ವ್ಯವಸ್ಥೆಗೆ ತನ್ನ ನಾಗರಿಕರು ಸ್ವಂತ ಆಲೋಚನೆಯನ್ನು ಬೆಳೆಸಿಕೊಂಡು, ಪ್ರಜ್ಞೆ ಮತ್ತು ಸ್ವಅರಿವಿನ ಮೂಲಕ ಪ್ರಶ್ನೆ ಮಾಡಲು ಆರಂಭಿಸಿ, ಈ ಧೋರಣೆಯನ್ನು ತನ್ನ ಸುತ್ತಲಿನ ಸಮಾಜಕ್ಕೆ ಹರಡಿದರೆ, ಕಳವಳವಾಗುವುದು ಸಹಜ. ಅದಕ್ಕಾಗಿಯೇ, ವ್ಯವಸ್ಥೆ ತನ್ನ ಸಿದ್ಧಾಂತಕ್ಕೆ ಅನುಗುಣವಾದ ಏಕಮುಖ ಚಿಂತನೆಯನ್ನು ಬೆಳೆಸಲು ಬಯಸುತ್ತದೆ. ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಪ್ರೇರಣೆಯಾದ ಗ್ರೀಕ್ ಸಮಾಜವೂ ಇದಕ್ಕೆ ಹೊರತಾಗಿರಲಿಲ್ಲ. ಅದಕ್ಕಾಗಿಯೇ, ಪ್ರಶ್ನೆ ಮಾಡಿದ ಮತ್ತು ಅದನ್ನು ಯುವಜನತೆಗೆ ಹೇಳಿಕೊಟ್ಟ ಸಾಕ್ರಟೀಸ್‌ಗೆ ವಿಷ ಕುಡಿದು ಸಾಯುವ ಶಿಕ್ಷೆ ನೀಡಿತು.

ವೈಯಕ್ತಿಕ ನೆಲೆಯನ್ನು ಮೀರಿ ಉನ್ನತ ಶಿಕ್ಷಣದ ವೇದಿಕೆಗೆ ಬಂದರೆ, ಅಲ್ಲಿ ಮೂಲತಃ ನಡೆಯಬೇಕಾದುದು, ವಿಭಿನ್ನ ಅಭಿಪ್ರಾಯಗಳ ಮಂಡನೆ, ಅವುಗಳ ನಡುವಿನ ಸೌಹಾರ್ದಯುತ ಚರ್ಚೆ ಹಾಗೂ ಇವುಗಳಿಂದ ಉತ್ಪನ್ನವಾಗುವ ಹೊಸ ಅರಿವು. ವಿಷಾದವೆಂದರೆ, ನಮ್ಮ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಅದು ನಡೆಯುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ಉನ್ನತ ಶಿಕ್ಷಣ ಇನ್ನೂ ಸಂಪೂರ್ಣವಾಗಿ ವ್ಯವಸ್ಥೆಯ ಹಿಡಿತದಲ್ಲಿರುವುದು. ಈ ಸಮಸ್ಯೆಗೆ ಅಮೆರಿಕ ತಕ್ಕಮಟ್ಟಿಗೆ ಪರಿಹಾರ ಕಂಡುಕೊಂಡಿದೆ. ಸರ್ಕಾರದ ಹಿಡಿತದಿಂದ ಅಲ್ಲಿನ ಬಹುಪಾಲು ವಿಶ್ವವಿದ್ಯಾಲಯಗಳು ಬಿಡಿಸಿಕೊಂಡಿವೆ. ಉದ್ಯಮಗಳ ಬಂಡವಾಳದ ಸಹಾಯದಿಂದ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆದಿವೆ. ಇಲ್ಲಿನ ವಿಶೇಷವೆಂದರೆ, ಉದ್ಯಮಿಗಳು ಬಂಡವಾಳ ಹಾಕಿದರೂ ವಿಶ್ವವಿದ್ಯಾಲಯಗಳ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಬೇಲಿ ಹಾಕುವುದಿಲ್ಲ. ಹಾಗಾಗಿಯೇ, 91 ವರ್ಷದ ಭಾಷಾಶಾಸ್ತ್ರಜ್ಞ ನೋಮ್ ಚೋಮ್ಸ್‌ಕಿ ಸೇರಿದಂತೆ, ಹೆಚ್ಚಿನ ಪ್ರಾಧ್ಯಾಪಕರು ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಾರೆ. ಈ ಮೂಲಕ ನಿಜಾರ್ಥದ ‘ಉದಾರ ಶಿಕ್ಷಣ’ವನ್ನು, ಅಂದರೆ, ಪ್ರಶ್ನಿಸುವ ಮತ್ತು ಅಭಿಪ್ರಾಯ ಸ್ವಾತಂತ್ರ್ಯ ಹೊಂದಿದ ಶಿಕ್ಷಣವನ್ನು ಈ ಸಂಸ್ಥೆಗಳು ನೀಡುವ ಮೂಲಕ, ಜಗತ್ತಿನಾದ್ಯಂತ ಆಸಕ್ತ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಸೆಳೆಯುತ್ತಿವೆ.

ಇಂತಹ ಹೆಬ್ಬಯಕೆಯಿಂದ, 2014ರಲ್ಲಿ ಹರಿಯಾಣದ ಸೋನಿಪತ್‌ನಲ್ಲಿ ಸುಮಾರು 150 ಉದ್ಯಮಿಗಳ ಬಂಡವಾಳದಿಂದ ಸ್ಥಾಪನೆಯಾದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆ, ಅಶೋಕ ವಿಶ್ವವಿದ್ಯಾಲಯ. ಈ ರೀತಿ ಸ್ವತಂತ್ರ ಚಿಂತನೆ ಮತ್ತು ಪ್ರಶ್ನಿಸುವ ಅರಿವನ್ನು ಜಾಗೃತಗೊಳಿಸುವ ಉದ್ದೇಶದಿಂದ ಸ್ಥಾಪಿತವಾದ ಅಲ್ಪಾವಧಿಯಲ್ಲಿಯೇ ಅಶೋಕ ವಿಶ್ವವಿದ್ಯಾಲಯ ದೇಶದಾದ್ಯಂತ ಮೆಚ್ಚುಗೆ ಗಳಿಸಿತ್ತು. ಮೂಲತಃ, ಶಿಕ್ಷಣ ಸಂಸ್ಥೆಗಳು ಹೆಸರು ಗಳಿಸುವುದು ಅಲ್ಲಿ ಸಿಗುವ ಶ್ರೇಷ್ಠ ಮಟ್ಟದ ಶಿಕ್ಷಣದಿಂದ ಮತ್ತು ಅದನ್ನು ಕೊಡುವ ಶಿಕ್ಷಕರಿಂದ. ಈ ದಿಸೆಯಲ್ಲಿ ಅಶೋಕ ವಿಶ್ವವಿದ್ಯಾಲಯಕ್ಕೆ ಹೆಸರು ತಂದುಕೊಟ್ಟವರಲ್ಲಿ
ಮುಂಚೂಣಿಯಲ್ಲಿರುವ ಹೆಸರು ಪ್ರೊಫೆಸರ್ ಪ್ರತಾಪ್ ಬಾನು ಮೆಹ್ತಾ.

ADVERTISEMENT

ಮೆಹ್ತಾ ಅವರ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಹೇಳುವುದಾದರೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ
ದಲ್ಲಿ ಪದವಿ ಮತ್ತು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಪಿಎಚ್.ಡಿ ಪಡೆದ ಮೆಹ್ತಾ, ಅಶೋಕ ವಿಶ್ವವಿದ್ಯಾಲಯ ಸೇರುವ ಮೊದಲು ನ್ಯೂಯಾರ್ಕ್ ವಿಶ್ವವಿದ್ಯಾಲಯ, ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಭಾರತದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಇವರ ಶೈಕ್ಷಣಿಕ ಸಾಧನೆಯಿಂದಾಗಿಯೇ ಅಶೋಕ ವಿಶ್ವವಿದ್ಯಾಲಯ ಅವರನ್ನು 2017ರಲ್ಲಿ ಕುಲಪತಿಯನ್ನಾಗಿ ನೇಮಿಸಿತು. ತಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ, ತಾತ್ವಿಕವಾಗಿ ಮತ್ತು ಸ್ಪಷ್ಟವಾಗಿ ಇಂಗ್ಲಿಷ್ ದೈನಿಕಗಳಲ್ಲಿ ನಿರಂತರವಾಗಿ ಪ್ರಕಟಿಸುತ್ತಾ ಬಂದ ಮೆಹ್ತಾ, ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿದ್ದಂತೂ ನಿಜ. ಆದ್ದರಿಂದಲೇ 2019ರಲ್ಲಿ, ತಮ್ಮಿಂದಾಗಿ ಸಂಸ್ಥೆಗೆ ಇರುಸುಮುರುಸಾಗಬಾರದು ಆದರೆ, ತಮ್ಮ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು ಎನ್ನುವ ಉದ್ದೇಶದಿಂದ ಕುಲಪತಿ ಹುದ್ದೆಗೆ ರಾಜೀನಾಮೆ ಕೊಟ್ಟು ಪ್ರಾಧ್ಯಾಪಕರಾಗಿ ಮುಂದುವರಿದಿದ್ದರು.

ಆದರೆ, ಕಳೆದ ವಾರ, ಸಂಸ್ಥೆಯ ಸಂಸ್ಥಾಪಕರೊಂದಿಗೆ ನಡೆದ ಮಾತುಕತೆಯ ನಂತರ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಕೊಟ್ಟ ಸಂಕ್ಷಿಪ್ತ ಹೇಳಿಕೆಯೆಂದರೆ, ‘ನನ್ನ ರಾಜಕೀಯ ಅಭಿಪ್ರಾಯಗಳು ಸಂಸ್ಥೆಗೆ ಭಾರವಾಗಿವೆ’. ಆದರೆ, ಅವರ ಮೌನವೇ ಹೆಚ್ಚು ಸಂಗತಿಗಳನ್ನು ಹೇಳುತ್ತಿದೆ. ಹಾಗಂತ, ರಾಜ್ಯಶಾಸ್ತ್ರ ವಿದ್ವಾಂಸರಾದ ಮೆಹ್ತಾ ಅವರ ರಾಜಕೀಯ ವಿಶ್ಲೇಷಣೆಗಳು ಸದಾ ಪಕ್ಷಾತೀತವಾಗಿದ್ದವು. ಈ ಹಿಂದೆ, ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ನೇಮಕಗೊಂಡ ನ್ಯಾಷನಲ್ ನಾಲೆಜ್ ಕಮಿಷನ್ ಸದಸ್ಯತ್ವದಿಂದ ಅಭಿಪ್ರಾಯ ಭಿನ್ನತೆಯಿಂದಾಗಿಯೇ ಹೊರನಡೆದಿದ್ದರು. ಈ ರೀತಿ, ಅವರು ಪಕ್ಷಗಳಿಂದ ಸದಾ ಅಂತರ ಕಾಯ್ದುಕೊಂಡೇ ತಮ್ಮ ಅಭಿಪ್ರಾಯ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದರು.

ಉದಾರ ಶಿಕ್ಷಣ ನೀಡುವ ಹೆಬ್ಬಯಕೆಯಿಂದ ಆರಂಭವಾದ ಖಾಸಗಿ ಸಂಸ್ಥೆಗಳ ಪ್ರಾಧ್ಯಾಪಕರು ಅಭಿಪ್ರಾಯ ಹತ್ತಿಕ್ಕಿಕೊಳ್ಳಬೇಕಾದ ಸ್ಥಿತಿ ಬಂದಿರುವುದು ಶೋಚನೀಯ. ಕೊನೆಯದಾಗಿ, ಯಾವುದೇ ಸಮಾಜದಲ್ಲಿ ಪ್ರಶ್ನಿಸುವ ಪ್ರಜ್ಞೆ ಬೆಳೆಸಿಕೊಂಡ ಬುದ್ಧಿಜೀವಿಗಳ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕೊಡಲಿಯೇಟು ಬಿದ್ದರೆ, ಇನ್ನು ಯಾರ ಅಥವಾ ಯಾವ ವಿಚಾರಗಳಿಗೆ ಬೆಲೆಯಿದೆ ಎನ್ನುವುದು ಇಲ್ಲಿ ಚಿಂತಿಸಬೇಕಾದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.