ADVERTISEMENT

ಸಂಗತ | ಮಾನವ ಕಳ್ಳಸಾಗಣೆ: ಜಾಗೃತಿ ಅಗತ್ಯ

ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಲುಕುವವರ ಕನಸಿನ ಬದುಕು ಛಿದ್ರವಾಗುತ್ತದೆ. ಇದರ ಜತೆಗೆ ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆಗೂ ಅವರು ಒಳಗಾಗುತ್ತಾರೆ.

ಡಾ.ಜ್ಯೋತಿ
Published 29 ಜುಲೈ 2022, 19:30 IST
Last Updated 29 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರತಿವರ್ಷ ಜುಲೈ 30ರಂದು ‘ಮಾನವ ಕಳ್ಳಸಾಗಣೆ ತಡೆ ದಿನ’ ಆಚರಿಸಲಾಗುತ್ತಿದೆ. 2013ರಲ್ಲಿ ವಿಶ್ವ ಸಂಸ್ಥೆಯು ಮಾನವ ಕಳ್ಳಸಾಗಣೆ ಎನ್ನುವ ಮನುಷ್ಯ ಲೋಕದ ಅಮಾನುಷ ಆರ್ಥಿಕ ದಂಧೆ ವಿರುದ್ಧ ಜನ ಜಾಗೃತಿ ಮೂಡಿಸಲು ಹಾಗೂ ಇದರಲ್ಲಿ ಸಿಲುಕುವ ಸಂತ್ರಸ್ತರ ಮಾನವ ಹಕ್ಕು ರಕ್ಷಣೆಯ ಕುರಿತು ಅರಿವು ಮೂಡಿಸಲು ಈ ದಿನವನ್ನು ಅಧಿಕೃತವಾಗಿ ಘೋಷಿ ಸಿತು. ಇದಕ್ಕೆ ಪೂರ್ವಭಾವಿಯಾಗಿ 2010ರಲ್ಲಿ, ಮಾನವ ಕಳ್ಳಸಾಗಣೆಯನ್ನು ಕೊನೆಗಾಣಿಸಲು ಜಾಗತಿಕ ಕ್ರಿಯಾ‌ಯೋಜನೆಯನ್ನು ಅಳವಡಿಸಿಕೊಂಡು, ವಿಶ್ವ ದಾದ್ಯಂತ ಸರ್ಕಾರಗಳು ಸಂಘಟಿತವಾಗಿ ಪ್ರಯತ್ನ ಮಾಡಬೇಕೆಂದೂ ವಿಶ್ವಸಂಸ್ಥೆ ಆಗ್ರಹಿಸಿತ್ತು. ಸಂತ್ರಸ್ತರ ಕ್ಷೇಮಾಭಿವೃದ್ಧಿಗಾಗಿ ವಿಶ್ವಮಟ್ಟದ ಸಹಾಯನಿಧಿಯನ್ನು ಸ್ಥಾಪಿಸುವುದು, ಈ ಯೋಜನೆಯ ಪ್ರಮುಖ ನಿಬಂಧನೆ ಗಳಲ್ಲಿ ಒಂದಾಗಿತ್ತು.

ಈ ಹಿನ್ನೆಲೆಯಲ್ಲಿ ನಮಗೆ ಎದುರಾಗುವ ಪ್ರಮುಖ ಪ್ರಶ್ನೆಗಳು: ಮಾನವ ಕಳ್ಳಸಾಗಣೆಯ ವ್ಯಾಪ್ತಿಯಲ್ಲಿ ನಡೆಯುವ ದೌರ್ಜನ್ಯಗಳ ವಿವಿಧ ಆಯಾಮಗಳೇನು? ಇದನ್ನು ನಿಗ್ರಹಿಸಲು ಇರುವ ಮಾರ್ಗೋಪಾಯಗಳೇನು? ಅದರಲ್ಲಿ ಜವಾಬ್ದಾರಿಯುತ ಸಮಾಜದ ಪಾತ್ರವೇನು?

ಮೊದಲನೆಯದಾಗಿ, ಮಾನವ ಕಳ್ಳಸಾಗಣೆ ಎಂದರೆ ಮಕ್ಕಳು, ಮಹಿಳೆ ಮತ್ತು ಪುರುಷರನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಳ್ಳಸಾಗಣೆ ಮಾಡುವುದು. ಸಾಮಾನ್ಯ ವಾಗಿ, ಉದ್ಯೋಗ ಗಿಟ್ಟಿಸುವ ಅಥವಾ ಹೇಗಾದರೂ ಬದುಕು ಕಂಡುಕೊಳ್ಳುವ ಭರವಸೆಯಲ್ಲಿ ಜನರು ಸುಲಭವಾಗಿ ಈ ಜಾಲಕ್ಕೆ ಸಿಲುಕುತ್ತಾರೆ.

ADVERTISEMENT

ಮಾನವ ಕಳ್ಳಸಾಗಣೆ ಜಾಲಗಳು ಪ್ರತಿಯೊಂದು ದೇಶದಲ್ಲಿಯೂ ಸಕ್ರಿಯವಾಗಿ, ಗುಪ್ತವಾಗಿ ಕೆಲಸ ಮಾಡುತ್ತಿವೆ ಎಂಬ ವರದಿಗಳಿವೆ. ಈ ದಿಸೆಯಲ್ಲಿ, ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಕೆಲವು ಅಂಕಿ–ಅಂಶಗಳ ವಿಶ್ಲೇಷಣೆ ಗಮನಾರ್ಹವೆನಿಸುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಳ್ಳಸಾಗಣೆ ಜಾಲಕ್ಕೆ ಬಲಿಯಾಗುತ್ತಾರೆ. ಬಲವಂತದ ಗುಲಾಮಗಿರಿಗೆ ಅನಾಥ ಮತ್ತು ಬಡ ಕುಟುಂಬದ ಮಕ್ಕಳು, ಅಂಗಾಂಗ ದಂಧೆಗೆ ಅಸಹಾಯಕ ವೃದ್ಧರು ಗುರಿಯಾಗುತ್ತಿದ್ದಾರೆ.

ಲೈಂಗಿಕ ಶೋಷಣೆಗಾಗಿ ಹೆಣ್ಣುಮಕ್ಕಳನ್ನು ಹಾಗೂ ಬಲವಂತದ ದುಡಿಮೆಗೆ ಗಂಡು ಮಕ್ಕಳನ್ನು ಅಕ್ರಮವಾಗಿ ದೇಶದೊಳಗೆ ಮತ್ತು ಹೊರ ದೇಶಗಳಿಗೆ ಸಾಗಣೆ ಮಾಡುವ ಜಾಲಗಳು ನಮ್ಮ ದೇಶದಲ್ಲೂ ಸಕ್ರಿಯವಾಗಿವೆ. ವಿಶೇಷವಾಗಿ ಮಕ್ಕಳನ್ನು ಕೈಗಾರಿಕೆ, ಮನೆಕೆಲಸ, ಭಿಕ್ಷಾಟನೆ, ಭಯೋತ್ಪಾದನೆ ಹಾಗೂ ಶಸ್ತ್ರಾಸ್ತ್ರ ತರಬೇತಿಗಾಗಿ ಬಳಸಿಕೊಳ್ಳಲು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಗುರುತಿಸಲಾಗಿದೆ. ಹೊರದೇಶಗಳಿಗೆ ಉದ್ಯೋಗ ಅರಸಿ ವಲಸೆ ಹೋಗಬಯಸುವ ಕಡಿಮೆ ವಿದ್ಯಾರ್ಹತೆ ಅಥವಾ ಕೌಶಲ ಹೊಂದಿದ ಜನರು ಕಳ್ಳಸಾಗಣೆ ಜಾಲದಲ್ಲಿ ಸಿಲುಕಿಕೊಳ್ಳುವ ಅಪಾಯ ಜಾಸ್ತಿ. ಇವರನ್ನು ಹೆಚ್ಚಿನ ಸಂದರ್ಭಗಳಲ್ಲಿ ಕಡಿಮೆ ಸಂಬಳ ಅಥವಾ ಸಂಬಳವಿಲ್ಲದೆ ದುಡಿಸಿಕೊಳ್ಳುತ್ತಾರೆ. ಇವರ ಚಲನವಲನದ ಮೇಲೆ ಸಂಪೂರ್ಣ ನಿರ್ಬಂಧ ಇರುತ್ತದೆ. ದೈಹಿಕ ಅಥವಾ ಲೈಂಗಿಕ ದೌರ್ಜನ್ಯ ಹಾಗೂ ಗುಲಾಮಗಿರಿಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು.

ಈ ರೀತಿ ಕಳ್ಳಸಾಗಣೆ ಜಾಲಕ್ಕೆ ಸಿಲುಕುವ ಜನರ ಕನಸಿನ ಬದುಕು ಬಹುಬೇಗ ಛಿದ್ರವಾಗುತ್ತದೆ. ಅವರು ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾಗುತ್ತಾರೆ. ಹಾಗಾದರೆ, ಈ ಅಮಾನವೀಯ ದೇಹದಂಧೆಯನ್ನು ನಿಗ್ರಹಿಸುವುದು ಹೇಗೆ? ಮಾನವ ಕಳ್ಳಸಾಗಣೆ ಮಾಡುವವರಿಗೆ 7 ವರ್ಷಗಳವರೆಗಿನ ಕಠಿಣ ಜೈಲು ಶಿಕ್ಷೆ ವಿಧಿಸಲುಭಾರತದ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಕಾನೂನು ಒಂದರ ಮೂಲಕವೇ ಇದನ್ನು ಪೂರ್ತಿ ನಿಗ್ರಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರೇತರ ಸಂಘ– ಸಂಸ್ಥೆಗಳು ಮತ್ತು ಸೇವಾ ಮನೋಭಾವದ ಜನರ ಬೆಂಬಲದ ಅಗತ್ಯವಿದೆ. ಹಾಗೆಯೇ, ಈ ಜಾಲಕ್ಕೆ ಸಿಲುಕಿದವರನ್ನು ರಕ್ಷಿಸುವುದರೊಂದಿಗೆ, ಸಂತ್ರಸ್ತರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸಬೇಕಾದ ಅಗತ್ಯವಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಮಾನವ ಕಳ್ಳಸಾಗಣೆ ದಂಧೆಯ ಹಿಂದಿರುವ ವಿಕೃತ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಂತಹ ಹೀನ ವರ್ತನೆಗೆ ಹಣ ಗಳಿಸುವುದೊಂದೇ ಕಾರಣ ಆಗಿರಲಾರದು. ವ್ಯಕ್ತಿತ್ವ ದೋಷ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗೆಗೂ ಅಧ್ಯಯನ ಆಗಬೇಕು. ಮಕ್ಕಳ ಭವಿಷ್ಯದ ಬಗ್ಗೆ ಅತ್ಯಂತ ಕಾಳಜಿ ವಹಿಸುವ ನಾವು, ಇನ್ನೊಂದು ಮಗುವನ್ನು ಭಿಕ್ಷಾಟನೆಗೋ, ವೇಶ್ಯಾವೃತ್ತಿಗೋ, ಅಂಗ ಕೀಳುವುದಕ್ಕೋ ಅಥವಾ ಬಲವಂತದ ದುಡಿಮೆಗೋ ತಳ್ಳಿ, ಅವರ ಜೀವನದ ಕನಸುಗಳನ್ನು ಹೊಸಕಿ ಹಾಕಲು ಮುಂದಾಗುವ ಮನೋಧೋರಣೆ ಅತ್ಯಂತ ಭಯಾನಕವಾದುದು.

ಮಾನವ ಕಳ್ಳಸಾಗಣೆಯನ್ನು ಈ ಕಾಲದ ಸಮಸ್ಯೆ ಮಾತ್ರ ಎಂದು ಭಾವಿಸಬೇಕಾಗಿಲ್ಲ. ಈ ರೀತಿ ಮನುಷ್ಯನ ಸಾಗಾಟವಾಗಿ ತಲುಪುವ ಗುಲಾಮಗಿರಿ ಅಥವಾ ವೇಶ್ಯಾವಾಟಿಕೆಯ ಕೇಂದ್ರಗಳು ತಲೆತಲಾಂತರಗಳಿಂದ ನಮ್ಮ ನೆಲದಲ್ಲಿ ಅಸ್ತಿತ್ವದಲ್ಲಿವೆ. ಪ್ರಸಕ್ತ, ಇದರ ಪ್ರಮಾಣ ಹೆಚ್ಚಾಗಿರಬಹುದಷ್ಟೆ. ನಾವಿಂದು ಮಾನವ ಹಕ್ಕುಗಳ ಬಗ್ಗೆ ಮಾತನಾಡಬಹುದಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಎಷ್ಟೆಲ್ಲಾ ಪ್ರಗತಿ ಸಾಧಿಸಿದ್ದೇವೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅಂತೆಯೇ ಈ ಪ್ರಗತಿಯ ಫಲವನ್ನು ಸ್ವತಂತ್ರವಾಗಿ, ನಿರ್ಭಯವಾಗಿ ಅನುಭವಿಸುವ ಹಕ್ಕು ಎಲ್ಲಾ ಮನುಷ್ಯರಿಗೂ ಇದೆ ಎನ್ನುವ ಜನಜಾಗೃತಿ ಮೂಡಿಸುವುದು ಹಿಂದೆಂದಿಗಿಂತ ಈಗ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.