ADVERTISEMENT

ಸಂಗತ: ತೆರೆಯಬೇಕಿದೆ ಕಥಾ ಕಣಜ

ಕಥೆಗಳ ಮೂಲಕ ಬದುಕಿನ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವುದು ಉತ್ತಮ ಪರಿಕಲ್ಪನೆ

ರಾಜಕುಮಾರ ಕುಲಕರ್ಣಿ
Published 2 ಮಾರ್ಚ್ 2025, 19:34 IST
Last Updated 2 ಮಾರ್ಚ್ 2025, 19:34 IST
<div class="paragraphs"><p>ಸಂಗತ: ತೆರೆಯಬೇಕಿದೆ ಕಥಾ ಕಣಜ</p></div>

ಸಂಗತ: ತೆರೆಯಬೇಕಿದೆ ಕಥಾ ಕಣಜ

   

ಶಾಲೆಗಳಲ್ಲಿ ಮಕ್ಕಳಿಗೆ ಕಥೆಗಳನ್ನು ಹೇಳಲು ಅನುಕೂಲವಾಗುವಂತೆ ಸಭಾಭವನಗಳನ್ನು ಕಟ್ಟಿಸಲು ಧನಸಹಾಯ ನೀಡಬೇಕೆಂದು  ಸುಧಾಮೂರ್ತಿ ಅವರು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿ ಗಮನ ಸೆಳೆಯಿತು. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಲು, ಅವರಿಗೆ ಬದುಕಿನ ಮೌಲ್ಯಗಳನ್ನು ಕಥೆಗಳ ಮೂಲಕ ಬೋಧಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ. ಮನೆಗಳಲ್ಲಿ ಅಜ್ಜ– ಅಜ್ಜಿಯಿಂದ ಮತ್ತು ಅಪ್ಪ– ಅಮ್ಮನಿಂದ ಕಥೆ ಕೇಳುವ ವಾತಾವರಣ ಇಲ್ಲದಿರುವ ಈ ದಿನಗಳಲ್ಲಿ, ಸುಧಾಮೂರ್ತಿ ಅವರ ಚಿಂತನೆಯು ಭರವಸೆಯ ಕಿರಣದಂತೆ ಗೋಚರಿಸುತ್ತದೆ.

ವಿಭಕ್ತ ಕುಟುಂಬಗಳ ಈ ಕಾಲಘಟ್ಟದಲ್ಲಿ, ಮಕ್ಕಳಿಗೆ ಮನೆಯಲ್ಲಿ ಕಥೆಗಳನ್ನು ಹೇಳುವ ಹಿರಿಯರು ಇಲ್ಲವಾಗಿದ್ದಾರೆ. ಅಜ್ಜ– ಅಜ್ಜಿ ಹೇಳುವ ಕಥೆಗಳ ಮೂಲಕ ಬದುಕಿನ ಮೌಲ್ಯಗಳನ್ನು ಕಲಿಯಬೇಕಾದ ಮಕ್ಕಳು ಈಗ ಮೊಬೈಲ್‍ ಫೋನ್ ವ್ಯಸನಿಗಳಾಗಿದ್ದಾರೆ. ಮನೆಯಲ್ಲಿ ಮಕ್ಕಳ ಹಟ ಮತ್ತು ತುಂಟಾಟವನ್ನು ನಿಯಂತ್ರಿಸಲು ಪಾಲಕರೇ ಮಕ್ಕಳ ಕೈಗೆ ಫೋನ್‌ ಕೊಡುವುದನ್ನು ರೂಢಿಗೆ ತಂದಿದ್ದಾರೆ. ಧಾವಂತದ ಬದುಕಿನ ಓಟದಲ್ಲಿ ಮಕ್ಕಳಿಗೆ ಕಥೆ ಹೇಳುತ್ತ ಕೂಡುವಷ್ಟು ವ್ಯವಧಾನ ಮತ್ತು ತಾಳ್ಮೆ ಪಾಲಕರಲ್ಲಿ ಇಲ್ಲವಾಗಿದೆ.

ADVERTISEMENT

ವಸತಿಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ನನ್ನ ಪರಿಚಿತರೊಬ್ಬರು ಅಲ್ಲಿನ ಮಕ್ಕಳ ಗುಣಸ್ವಭಾವವನ್ನು ವಿಶ್ಲೇಷಿಸುತ್ತ ಹೀಗೆ ಹೇಳುತ್ತಾರೆ- ‘ಆ ಶಾಲೆಯಲ್ಲಿ ಪ್ರತಿ ತಿಂಗಳು ಕಿರುಪರೀಕ್ಷೆ ನಡೆಸಲಾಗುತ್ತದೆ. ಆಗ ಕಡಿಮೆ ಅಂಕಗಳನ್ನು ಪಡೆದ ಮಕ್ಕಳು ವಿಚಿತ್ರವಾಗಿ ವರ್ತಿಸುತ್ತಾರೆ. ಹೆಚ್ಚು ಅಂಕಗಳನ್ನು ಪಡೆದ ತಮ್ಮ ಸಹಪಾಠಿಗಳನ್ನು ಹಿಂಸಿಸುವುದು, ಅವರ ಪುಸ್ತಕಗಳನ್ನು ಹರಿದುಹಾಕುವುದು, ಅಗತ್ಯದ ವಸ್ತುಗಳನ್ನು ಬಚ್ಚಿಡುವುದು, ಮುನಿಸಿಕೊಳ್ಳುವಂತಹ ದುರ್ವರ್ತನೆಗಳನ್ನು ತೋರುತ್ತಾರೆ’.

ಜೀವನದ ಮೌಲ್ಯಗಳನ್ನು ಕಲಿಸದೇ ಹೋದರೆ ಮಕ್ಕಳಲ್ಲಿ ಇಂತಹ ದುರ್ನಡತೆಗಳು ಕಾಣಿಸಿಕೊಳ್ಳುತ್ತವೆ. ಅಂಕವೇ ಪ್ರಧಾನವಾಗುತ್ತಿರುವ ಶಿಕ್ಷಣ ಪದ್ಧತಿಯಿಂದಾಗಿ ಅಸಂಗತ ಪ್ರಕರಣಗಳು ಸಂಭವಿಸುತ್ತಿವೆ.

ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸವು ಶಿಕ್ಷಣದ ಧ್ಯೇಯವಾಗಿದೆ. ಅದರಲ್ಲಿ ಜೀವನಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಕೂಡ ಒಂದಾಗಿದೆ. ಮಕ್ಕಳಿಗೆ ಮೌಲ್ಯಗಳನ್ನು ಪರಿಚಯಿಸಲು ಕಥೆ ಅತ್ಯಂತ ಸಶಕ್ತ ಮಾಧ್ಯಮ. ಕನ್ನಡದ ಸಮೃದ್ಧವಾದ ಕಥಾಸಾಹಿತ್ಯವನ್ನು ಬಳಸಿಕೊಂಡು ಮಕ್ಕಳಿಗೆ ಮೌಲ್ಯಗಳ ದರ್ಶನ ಮಾಡಿಸುವುದು ಇಂದಿನ ತುರ್ತು ಅಗತ್ಯ.

ಕನ್ನಡ ಭಾಷೆಯಲ್ಲಿ ಮಕ್ಕಳ ಪುಸ್ತಕಗಳು ಸಮೃದ್ಧವಾಗಿ ಪ್ರಕಟಗೊಂಡಿವೆ. ಎಂ.ಎಸ್.ಪುಟ್ಟಣ್ಣನವರ ‘ನೀತಿ ಚಿಂತಾಮಣಿ’, ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಮಕ್ಕಳ ಕೃತಿಗಳಾಗಿವೆ. ಪಂಜೆ ಮಂಗೇಶರಾಯರು, ಶಿವರಾಮ ಕಾರಂತ, ಜಿ.ಪಿ.ರಾಜರತ್ನಂ, ನಾ.ಕಸ್ತೂರಿ, ಚಿ.ಸದಾಶಿವಯ್ಯ, ಸಿಸು ಸಂಗಮೇಶ, ಜಯವಂತ ಕಾಡದೇವರ, ಕಂಚ್ಯಾಣಿ ಶರಣಪ್ಪ ಕನ್ನಡ ಭಾಷೆಯಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸಿದವರಲ್ಲಿ ಪ್ರಮುಖರು.

ಎ.ಆರ್.ಕೃಷ್ಣಶಾಸ್ತ್ರಿ ಅವರ ‘ನಿರ್ಮಲ ಭಾರತಿ’ ಮಕ್ಕಳ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಎಂದು ಪರಿಗಣಿತವಾಗಿದೆ. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಮಕ್ಕಳಿಗಾಗಿ ಬರೆದ 365 ಕಥೆಗಳ ಸಂಪುಟ. ಶಿವರಾಮ ಕಾರಂತರು ‘ಬಾಲ ಪ್ರಪಂಚ’ದ ಮೂಲಕ ಮಕ್ಕಳಿಗಾಗಿ ವಿಜ್ಞಾನಲೋಕದ ವಿಸ್ಮಯಗಳನ್ನು ಮನೆ ಮನೆಗೂ ಮುಟ್ಟಿಸಿದರು.  

ಈ ಹಿಂದೆ ಶಾಲೆಗಳಲ್ಲಿ ಭಾಷಾ ವಿಷಯಗಳನ್ನು ಬೋಧಿಸುವಾಗ ತರಗತಿಗೆ ಅಕ್ಷರಶಃ ರಂಗಭೂಮಿಯ ಕಳೆ ಪ್ರಾಪ್ತವಾಗುತ್ತಿತ್ತು. ಶಿಕ್ಷಕರು ಪಾತ್ರಧಾರಿಗಳಾಗಿ ಸನ್ನಿವೇಶವನ್ನು ಸೃಷ್ಟಿಸಿ ತೋರಿಸುತ್ತಿದ್ದರು. ಕವಿತೆ ಹಾಡಾಗುತ್ತಿತ್ತು, ಕಥೆ ವಾಚನವಾಗುತ್ತಿತ್ತು. ಇರುವೆಯೊಂದು ಪಾರಿವಾಳದ ಜೀವ ಉಳಿಸಿದ್ದು, ಶಿಬಿ ಚಕ್ರವರ್ತಿಯ ತ್ಯಾಗ, ಪುಣ್ಯಕೋಟಿಯ ಪ್ರಾಮಾಣಿಕತೆ, ಗಾಂಧೀಜಿಯ ಸತ್ಯಸಂಧ ನಡೆ... ಇಂತಹ ಕಥೆಗಳನ್ನೆಲ್ಲ ನೀತಿ ಶಿಕ್ಷಣದ ಮೂಲಕ ಬೋಧಿಸಲಾಗುತ್ತಿತ್ತು.

ಈಗ ಕಾಲ ಬದಲಾಗಿದೆ. ವಿವಿಧ ಕೆಲಸಗಳ ಒತ್ತಡಗಳಿಂದಾಗಿ ಶಿಕ್ಷಕರಿಗೆ ಪಾಠ ಮಾಡಲು ಸಮಯವೇ ಇಲ್ಲದಂತಾಗಿದೆ. ಇಂಥ ಸನ್ನಿವೇಶದಲ್ಲಿ ಮಕ್ಕಳಿಗೆ ಕಥೆಗಳನ್ನು ಹೇಳುವ ಮನಃಸ್ಥಿತಿಯನ್ನು ಶಿಕ್ಷಕರು ಮೈಗೂಡಿಸಿಕೊಳ್ಳುವುದು ಅಸಾಧ್ಯದ ಮಾತು. ಶಿಕ್ಷಕರನ್ನು ಬೋಧನೇತರ ಕೆಲಸಗಳಿಂದ ಬಿಡುಗಡೆಗೊಳಿಸಿ ಅವರು ಪೂರ್ಣಪ್ರಮಾಣದಲ್ಲಿ ಬೋಧನೆಯಲ್ಲಿ ತೊಡಗಿಸಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು.

ಜಿ.ಪಿ.ರಾಜರತ್ನಂ ಕೆಲಸ ಇಲ್ಲದೆ ನಿರುದ್ಯೋಗಿಯಾಗಿದ್ದಾಗ ಕುಟುಂಬ ನಿರ್ವಹಣೆಗಾಗಿ ಇಲಾಖೆಯೊಂದರ ತಾತ್ಕಾಲಿಕ ಹುದ್ದೆಗೆ ಸಂದರ್ಶನಕ್ಕೆ ಹೋಗುತ್ತಾರೆ. ಸಂದರ್ಶನ ಸಮಿತಿಯಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ‘ಇದು ನಿಮಗೆ ತಕ್ಕುದಾದ ಹುದ್ದೆಯಲ್ಲ. ಈ ಕೆಲಸದಿಂದ ನಿಮ್ಮ ಬರವಣಿಗೆಗೆ ತೊಡಕಾಗುತ್ತದೆ. ಶಿಕ್ಷಕ ಹುದ್ದೆ ದೊರೆಯುವವರೆಗೆ ನಿಮ್ಮ ಕುಟುಂಬ ನಿರ್ವಹಣೆಗೆ ಅಗತ್ಯವಾದ ಹಣ ಪ್ರತಿ ತಿಂಗಳು ನಿಮ್ಮ ಮನೆಗೆ ತಲುಪುವುದು. ನೀವು ಬರವಣಿಗೆಯಲ್ಲಿ ತೊಡಗಿಕೊಳ್ಳಿ’ ಎಂದು ವಾಪಸ್‌ ಕಳಿಸುತ್ತಾರೆ. ಇಂದು ಶಿಕ್ಷಕರಿಗೆ ಇಂಥ ಪ್ರೋತ್ಸಾಹ ಮತ್ತು ಸಹಕಾರದ ಅಗತ್ಯವಿದೆ.

ಕಥೆಗಳ ಮೂಲಕ ಬದುಕಿನ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವುದು ಉತ್ತಮ ಪರಿಕಲ್ಪನೆ. ಈ ದಿಸೆಯಲ್ಲಿ ಅಗತ್ಯದ ಕಥಾಪುಸ್ತಕಗಳು ಶಾಲೆಗಳಿಗೆ ಪೂರೈಕೆಯಾಗಬೇಕು. ಶಿಕ್ಷಕರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಮತ್ತು ತರಬೇತಿ ನೀಡಲು ಕ್ಲಸ್ಟರ್ ಹಂತದಲ್ಲಿ ಕಥಾಕಮ್ಮಟಗಳನ್ನು ಆಯೋಜಿಸಬೇಕು. ಸ್ಥಳೀಯ ಲೇಖಕರು ಮತ್ತು ಸಾಹಿತ್ಯಾಸಕ್ತರನ್ನು ಸಂಪನ್ಮೂಲ ವ್ಯಕ್ತಿಗಳೆಂದು ನೇಮಕ ಮಾಡಬೇಕು. ಒಟ್ಟಾರೆ, ಮಕ್ಕಳಲ್ಲಿ ಕಥೆಗಳನ್ನು ಆಲಿಸುವ ಮತ್ತು ಓದುವ ಹವ್ಯಾಸ ಬೆಳೆಸಿ, ಆ ಮೂಲಕ ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.