ADVERTISEMENT

ಚುರುಮುರಿ | ಇದು ಕಿಕ್‌– 90

ಮಣ್ಣೆ ರಾಜು
Published 21 ಏಪ್ರಿಲ್ 2020, 20:15 IST
Last Updated 21 ಏಪ್ರಿಲ್ 2020, 20:15 IST
ಚುರುಮುರಿ
ಚುರುಮುರಿ   

‘ಲಾಕ್‍ಡೌನ್ ಅನ್ನು ಲೂಸ್ ಮಾಡ್ತೀವಿ ಅಂತ ಹೇಳಿದ್ದ ಸಿಎಂ, ಮತ್ತೆ ಟೈಟ್ ಮಾಡಿದ್ರಲ್ಲ... ಪರಿಸ್ಥಿತಿ ಅಷ್ಟೊಂದು ಟೈಟಾಗಿದೆಯಾ?’ ಸುಮಿ ಕೇಳಿದಳು.

‘ಹೌದು, ಎರಡು ಕಾಯಿಲೆ ನಿವಾರಣೆ ಮಾಡುವ ಸವಾಲು ಸರ್ಕಾರದ ಮುಂದಿದೆ; ಒಂದು ಕೋವಿಡ್-19, ಇನ್ನೊಂದು ಕಿಕ್‌- 90’ ಅಂದ ಶಂಕ್ರಿ.

‘ಕಿಕ್‌- 90 ಹೊಸ ಕಾಯಿಲೆನಾ, ಯಾವ ದೇಶದ ಸೋಂಕು?’

ADVERTISEMENT

‘ಹಳೇ ಕಾಯಿಲೆನೇ, ಸ್ವದೇಶಿ ಸೋಂಕು. ಕೋವಿಡ್- 19ಗಿಂತಾ ಕಿಕ್‌- 90ಗೆ ಬಲಿಯಾದವರೇ ಹೆಚ್ಚು’.

‘ಎಣ್ಣೆ ಸಿಗಲಿಲ್ಲ ಅಂತ ಪ್ರಾಣ ಕಳೆದುಕೊಂಡ ಅಮಲುದಾರರ ವಿಚಾರವೇನ್ರೀ?’

‘ಹೌದು, ಮದ್ಯದಂಗಡಿ ಲಾಕ್ ಮಾಡಿಬಿಟ್ಟರೆ ಅವರು ಬದುಕಲು ಸಾಧ್ಯನಾ?’

‘ಮದ್ಯದಂಗಡಿ ಕಳ್ಳತನ ಜಾಸ್ತಿ ಆಗಿ, ಎಣ್ಣೆ ಅಂಗಡಿಗೆ ಸಿ.ಸಿ. ಟಿ.ವಿ. ಕ್ಯಾಮೆರಾ, ಡ್ರೋನ್‌ ಕ್ಯಾಮೆರಾ, ಪೊಲೀಸ್ ಕಾವಲು ಹಾಕುವ ಸ್ಥಿತಿ ಬಂದಿದೆಯಲ್ಲ’.

‘ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕು, ಒಡವೆ ಅಂಗಡಿಗಿಂತ ಎಣ್ಣೆ ಅಂಗಡಿಗೇ ಮೌಲ್ಯ ಜಾಸ್ತಿ ಆಗಿಬಿಟ್ಟಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರ ಪಡಿತರ ಧಾನ್ಯದ ಜೊತೆ ಎರಡು ತಿಂಗಳ ಮದ್ಯವನ್ನೂ ಹಂಚಬೇಕಾಗುತ್ತೇನೋ’.

‘ಇಂಥಾ ಸ್ಥಿತೀಲಿ ಸರ್ಕಾರ ಹಟ ಬಿಟ್ಟು ಮದ್ಯದಂಗಡಿ ತೆರೆಯಲು ಅನುಮತಿ ಕೊಡಬೇಕು’.

‘ಅದಕ್ಕೆ ಸರ್ಕಾರವೇನೋ ತುದಿಗಾಲಲ್ಲಿ ನಿಂತಿದೆ, ಆದರೆ ಕೊರೊನಾ ಅವಕಾಶ ಕೊಡ್ತಿಲ್ಲ’.

‘ಕೊರೊನಾ ಕಷ್ಟದಿಂದ ಆಗಿರುವ ನಷ್ಟ ತುಂಬಲು ಅಮಲುದಾರರೇ ಆಧಾರ ಅಂತ ಸರ್ಕಾರಕ್ಕೆ ಗೊತ್ತಿಲ್ವಾ?’

‘ಅಮಲುದಾರರ ತ್ಯಾಗ, ಕೊಡುಗೆ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಹೆಂಡ್ತಿ, ಮಕ್ಕಳು, ಕುಟುಂಬಕ್ಕಿಂತಾ ರಾಜ್ಯ, ದೇಶದ ಹಿತ ಕಾಯುವ ಅಮಲುದಾರರು, ಬರ, ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ ಎಂಥದ್ದೇ ಕಠಿಣ ಸಂದರ್ಭದಲ್ಲೂ ದುಡ್ಡು ಹೊಂಚಿ ತಂದು ಖಜಾನೆ ತುಂಬುವ ಉದಾರಿಗಳು. ರೈತರು ದೇಶದ ಬೆನ್ನೆಲುಬು, ಅಮಲುದಾರರು ಸರ್ಕಾರದ ದೊಡ್ಡ ಜೇಬು...’ ಶಂಕ್ರಿ ಮನವರಿಕೆ ಮಾಡಿಕೊಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.