ADVERTISEMENT

ಕಡಲ ಕಿನಾರೆಗೆ ಪ್ರಶಸ್ತಿಯ ಗರಿ

ಕಠಿಣ ಮಾನದಂಡಗಳನ್ನು ಜಯಿಸಿರುವ ನಮ್ಮ ರಾಜ್ಯದ ಎಂಟು ಕಡಲ ಕಿನಾರೆಗಳು ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸುವ ಮೂಲಕ ಹೆಮ್ಮೆ ಮೂಡಿಸಿವೆ

ಗುರುರಾಜ್ ಎಸ್.ದಾವಣಗೆರೆ
Published 29 ಅಕ್ಟೋಬರ್ 2020, 19:31 IST
Last Updated 29 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನಮ್ಮ ಐದು ರಾಜ್ಯಗಳ ಎಂಟು ಕಡಲ ಕಿನಾರೆಗಳು ಡೆನ್ಮಾರ್ಕ್‌ನ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯಾದ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಷನ್ ನೀಡುವ, ಸ್ವಚ್ಛ ಸಮುದ್ರ ತೀರಗಳಿಗೆಂದೇ ಮೀಸಲಾದ ‘ಬ್ಲೂಫ್ಲ್ಯಾಗ್’ ಪ್ರಶಸ್ತಿ ಗಳಿಸಿ, ಸಮುದ್ರ ತೀರ ವಿಹಾರಿಗಳಿಗೆ ಮತ್ತು ಪರಿಸರಪ್ರಿಯರಿಗೆ ಸಂತಸದ ಸುದ್ದಿ ನೀಡಿವೆ.

ಭಾಗವಹಿಸಿದ ಮೊದಲ ಸ್ಪರ್ಧೆಯಲ್ಲೇ ಎಂಟೂ ಬೀಚ್‍ಗಳು ಪ್ರಶಸ್ತಿ ಗಳಿಸಿರುವುದು ವಿಶ್ವದಾಖಲೆಯಾಗಿದ್ದು, ನಾವು ತೀರ ಸಂರಕ್ಷಣೆ, ಸ್ವಚ್ಛತೆ ಮತ್ತು ಸುಸ್ಥಿರ ಅಭಿವೃದ್ಧಿಯ ಸರಿಯಾದ ದಾರಿಯಲ್ಲಿದ್ದೇವೆ ಎಂಬ ಸಂದೇಶ ರವಾನಿಸಿವೆ. ಯುನೈಟೆಡ್‌ ನೇಷನ್ಸ್‌ ಎನ್ವಿರಾನ್‍ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ), ಯುನೈಟೆಡ್‌ ನೇಷನ್ಸ್‌ ವರ್ಲ್ಡ್‌ ಟೂರಿಸಂ ಆರ್ಗನೈಸೇಷನ್ (ಯುಎನ್‌ಡಬ್ಲ್ಯುಟಿಒ), ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಆಫ್‌ ನೇಚರ್‌ (ಐಯುಸಿಎನ್) ಮತ್ತು ಫೌಂಡೇಷನ್ ಫಾರ್ ಎನ್ವಿರಾನ್‍ಮೆಂಟಲ್ ಎಜುಕೇಷನ್‍ನ (ಎಫ್‌ಇಇ) ತಜ್ಞರು ಇರುವ ತೀರ್ಪುಗಾರರ ಮಂಡಳಿ ಈ ಪ್ರಶಸ್ತಿಗೆ ವಿಶ್ವದ ನಾನಾ ಕಡೆಯಿಂದ ಭಾಗವಹಿಸುವ ಆಯಾ ದೇಶಗಳು ಆಯ್ಕೆ ಮಾಡಿ ಕಳಿಸಿರುವ ಸಮುದ್ರತೀರ, ವಿಹಾರಕ್ಕೆಂದೇ ಮೀಸಲಾದ ಮರೀನಾ ಬೀಚ್ ಮತ್ತು ದೋಣಿ ಆಪರೇಟರ್‌ಗಳ ಪಟ್ಟಿಯನ್ನು ಪರಿಶೀಲಿಸಿ, ಒಟ್ಟು 33 ಕಠಿಣ ಮಾನದಂಡಗಳ ಆಧಾರದ ಮೇಲೆ ಪ್ರಶಸ್ತಿಯನ್ನು ನಿರ್ಧರಿಸುತ್ತವೆ.

ಈ ಸಾಲಿನ ಸ್ಪರ್ಧೆಯಲ್ಲಿ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು ಮತ್ತು ಉಡುಪಿ ಜಿಲ್ಲೆಯ ಪಡುಬಿದ್ರಿ, ಕೇರಳದ ಕಪ್ಪಡ್, ಗುಜರಾತ್‍ನ ಶಿವರಾಜ್‍ಪುರ್, ದಿಯು- ದಾಮನ್‍ನ ಘೋಗ್ಲ, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಅಂಡಮಾನ್ ಮತ್ತು ನಿಕೊಬಾರ್‌ನ ರಾಧಾನಗರ ಬೀಚ್‍ಗಳುಪ್ರಶಸ್ತಿ ಗಳಿಸಿದ್ದು ಪ್ರಮುಖ ಪ್ರವಾಸೀ ತಾಣಗಳಾಗಲಿವೆ. ಸ್ಪರ್ಧೆಯಲ್ಲಿ ಭಾಗವಹಿಸುವ ಬೀಚ್‍ಗಳು ಉತ್ತಮ ಗುಣಮಟ್ಟದ ಸ್ನಾನಯೋಗ್ಯ ನೀರು, ಪರಿಸರ ಶಿಕ್ಷಣ ಮತ್ತು ಮಾಹಿತಿ, ಸಾಗರ ತೀರದ ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರ ಸುರಕ್ಷತೆ- ಸೇವೆಯ ವಿಷಯದಲ್ಲಿ ಉತ್ಕೃಷ್ಟತೆ ಹೊಂದಿರಬೇಕೆಂಬ ನಿಯಮವಿದೆ. ಬೀಚ್‍ನ ನೀರಿಗೆ ಊರಿನ ಅಥವಾ ಉದ್ಯಮದ ಕೊಳೆನೀರು ಬೆರೆಯಲೇಕೂಡದೆಂಬ ನಿಯಮವಿದ್ದು, ಸಮೀಪದಲ್ಲಿ ಹವಳದ ದಿಬ್ಬಗಳಿದ್ದರೆ ಅವುಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸಬೇಕೆಂಬ ಕಠಿಣ ಷರತ್ತಿದೆ. 2001ರಿಂದಲೂ ಸ್ಪರ್ಧೆ ಜಾರಿಯಲ್ಲಿದ್ದು ಪ್ರತೀ ವರ್ಷ ವಿಶ್ವದ ಎಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಎದುರು ನೋಡುತ್ತಿರುತ್ತವೆ.

ADVERTISEMENT

2019ರಲ್ಲಿ ನಮ್ಮ ಸರ್ಕಾರ 13 ಬೀಚ್‍ಗಳನ್ನು ಆಯ್ಕೆ ಮಾಡಿ ಸ್ಪರ್ಧೆಗೆ ಕಳಿಸಿತ್ತು. ಯಾವುದಕ್ಕೂ ಪ್ರಶಸ್ತಿ ಸಿಕ್ಕಿರಲಿಲ್ಲ. ಕೋಸ್ಟಲ್ ರೆಗ್ಯುಲೇಶನ್ ಝೋನ್ ಸಂಸ್ಥೆಯ ನಿಬಂಧನೆಗಳನ್ನು ಚಾಚೂ ತಪ್ಪದೆ ಪಾಲಿಸುವ ಸಮುದ್ರ ಕಿನಾರೆಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಹೈಟೈಡ್ ಲೈನ್‌ನಿಂದ 10 ಮೀಟರ್ ದೂರದಲ್ಲಿದ್ದು ಸೋಲಾರ್ ವಿದ್ಯುತ್ ಘಟಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ ಘಟಕ, ಮೊಬೈಲ್ ಶೌಚಾಲಯ, ಕಿನಾರೆ ತಲುಪಲು ಸರಿಯಾದ ದಾರಿ, ಪ್ರಥಮ ಚಿಕಿತ್ಸಾ ಘಟಕ, ಸುರಕ್ಷತಾ ವೀಕ್ಷಣಾ ಗೋಪುರಗಳು, ಸಿ.ಸಿ ಟಿ.ವಿ ಕ್ಯಾಮೆರಾ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಕುಳಿತುಕೊಳ್ಳಲು ಬೆತ್ತದಿಂದ ತಯಾರಿಸಿದ ಆಸನ ವ್ಯವಸ್ಥೆ, ಸಿಟ್-ಔಟ್ ಕೊಡೆಗಳು, ಬೀಚ್‍ನ ಪೂರ್ಣ ಮ್ಯಾಪ್, ಪರಿಸರ ಮಾಹಿತಿ, ಎಂಟ್ರಿ ಗೇಟ್, ಪ್ರವಾಸಿ ಮಾಹಿತಿ ಕೇಂದ್ರ, ಹೊರಾಂಗಣ ಕ್ರೀಡೆಗೆ ಬೇಕಾದ ವ್ಯವಸ್ಥೆ, ಬಳಸಿದ ನೀರಿನ ಶುದ್ಧೀಕರಣ ಘಟಕ, ಲ್ಯಾಂಡ್ ಸ್ಕೇಪಿಂಗ್ (ಭೂದೃಶ್ಯ), ಸಸ್ಯ ಬೇಲಿಗಳನ್ನು ಹೊಂದಿರುವ ಬೀಚ್‍ಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತವೆ.

ಬ್ಲೂಫ್ಲ್ಯಾಗ್ ಪ್ರಶಸ್ತಿ ನೀಡುವ ಎಫ್‍ಇಇಗೆ 77 ರಾಷ್ಟ್ರಗಳ ಸದಸ್ಯತ್ವವಿದೆ. ಪ್ರಶಸ್ತಿಯನ್ನು ಇದುವರೆಗೆ ವಿಶ್ವದ 51 ದೇಶಗಳ ಬೀಚ್‍ಗಳು ಪಡೆದಿದ್ದು ಸ್ಪೇನ್ ಒಂದರಲ್ಲೇ 578 ಬ್ಲೂಫ್ಲ್ಯಾಗ್ ಬೀಚ್‍ಗಳಿವೆ. ಬ್ಲೂಫ್ಲ್ಯಾಗ್ ಅಲ್ಲದೆ ಇಕೊಸ್ಕೂಲ್, ಯಂಗ್ ರಿಪೋರ್ಟರ್ ಫಾರ್ ದಿ ಎನ್ವಿರಾನ್‍ಮೆಂಟ್, ಲರ್ನಿಂಗ್ ಅಬೌಟ್ ಫಾರೆಸ್ಟ್ಸ್ ಮತ್ತು ಗ್ರೀನ್ ಕೀ ಇಂಟರ್‌ನ್ಯಾಷನಲ್ ಪ್ರಶಸ್ತಿಗಳನ್ನೂ ನೀಡುವ ಎಫ್‍ಇಇ, ಸಮುದ್ರ ತೀರದ ಸ್ವಚ್ಛತೆ ಕಾಪಾಡಿ ಮಾಲಿನ್ಯ ತಡೆಯುವಲ್ಲಿ ಭಾರತ ವಿನೂತನ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ‘ಇಂಟರ್‌ನ್ಯಾಷನಲ್ ಬೆಸ್ಟ್ ಪ್ರಾಕ್ಟೀಸಸ್’ ಹೆಸರಿನಲ್ಲಿ ಮೂರನೆಯ ಬಹುಮಾನವನ್ನು ಸಹ ನೀಡಿದೆ.‌

ಕೇಂದ್ರ ಸರ್ಕಾರವು ಇಂಟಿಗ್ರೇಟೆಡ್ ಕೋಸ್ಟಲ್ ಝೋನ್ ಮ್ಯಾನೇಜ್‍ಮೆಂಟ್ ಯೋಜನೆಯ ಅಡಿಯಲ್ಲಿ ಬೀಮ್– ‘ಬೀಚ್ ಎನ್ವಿರಾನ್‍ಮೆಂಟ್ ಆ್ಯಂಡ್‌ ಏಸ್ಥೆಟಿಕ್ಸ್ ಮ್ಯಾನೇಜ್‍ಮೆಂಟ್ ಸರ್ವಿಸ್’ ಎಂಬ ಕಾರ್ಯಕ್ರಮ ಹಾಕಿಕೊಂಡು, ಎಲ್ಲ ಸಮುದ್ರ ತೀರಗಳೂ ಆದಷ್ಟೂ ಸ್ವಚ್ಛವಾಗಿರಬೇಕು, ಮಾಲಿನ್ಯಮುಕ್ತವಾಗಿರಬೇಕು ಮತ್ತು ನಮ್ಮ ಬ್ಲೂಫ್ಲ್ಯಾಗ್ ಬೀಚ್‍ಗಳ ಸಂಖ್ಯೆ 2025ಕ್ಕೆ ನೂರಕ್ಕೇರಬೇಕು ಎಂದಿದೆ. 1992ರ ರಿಯೊ ಶೃಂಗಸಭೆಯಲ್ಲಿ ಜನಿಸಿದ ಸಂಯೋಜಿತ ಕರಾವಳಿ ವಲಯ ನಿರ್ವಹಣಾ ಯೋಜನೆಗೆ ವಿಶ್ವ ಬ್ಯಾಂಕ್ ಹಣಕಾಸಿನ ನೆರವು ನೀಡುತ್ತದೆ. ಅನುಷ್ಠಾನಗೊಳಿಸಲು ಚೆನ್ನೈನ ನ್ಯಾಷನಲ್ ಸೆಂಟರ್ ಫಾರ್ ಸಸ್ಟೇನಬಲ್ ಕೋಸ್ಟಲ್ ಮ್ಯಾನೇಜ್‍ಮೆಂಟ್ ಸಂಸ್ಥೆಯು ವೈಜ್ಞಾನಿಕ ಮತ್ತು ತಾಂತ್ರಿಕ ಸಲಹೆ ಸೂಚನೆಗಳನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.