ADVERTISEMENT

ಸರ್ವರಿಗೂ ಒಂದೇ ಕುಲನಾಮ!

ರವಿಚಂದ್ರ ಎಂ.
Published 26 ಜೂನ್ 2019, 18:58 IST
Last Updated 26 ಜೂನ್ 2019, 18:58 IST
ಸಂಗತ
ಸಂಗತ   

ಇದು 1977 ರಲ್ಲಿ ನಡೆದ ಘಟನೆ. ಬೆಂಗಳೂರಿನ ಶೇಷಾದ್ರಿಪುರಂ ಬಡಾವಣೆಯ ಲಿಂಕ್ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾಗಲು ನಾಲ್ಕು ವರ್ಷದ ಮಗುವನ್ನು ಅದರ ಅಜ್ಜಿ ಮತ್ತು ತಾಯಿ ಕರೆ ತಂದಿದ್ದರು. ಮಗುವಿನ ಹೆಸರನ್ನು ಸಿ.ಎಂ.ರವಿಚಂದ್ರ ಗೌಡ ಎಂದು ಅಜ್ಜಿ ತಿಳಿಸಿದರು. ಆಗ ಶಾಲೆಯ ಶಿಕ್ಷಕಿ ‘ಬೇಡ ತಾಯಿ, ಮಗುವಿನ ಹೆಸರಿನ ಆರಂಭದಲ್ಲಿರುವ ‘ಸಿ’- ಚೊಟ್ಟನಹಳ್ಳಿ ಮತ್ತು ಕೊನೆಯಲ್ಲಿರುವ ‘ಗೌಡ’ ಎಂಬುದನ್ನು ತೆಗೆದುಬಿಡಿ. ಅವನ್ನು ಸೇರಿಸಿದರೆ, ಮುಂದೆ ಉದ್ಯೋಗಕ್ಕೆ ಅರ್ಜಿ ಹಾಕುವಾಗ ಕೆಲಸಕ್ಕೆ ಪರಿಗಣಿಸದೇ ಇರುವ ಸಾಧ್ಯತೆಗಳೇ ಹೆಚ್ಚು. ‘ಗೌಡ’ ಅಂದ್ರೆ ಸ್ವಲ್ಪ ಮಂದಬುದ್ಧಿಯ ಜನ ಎಂಬ ಅನಿಸಿಕೆ ಜನರಲ್ಲಿ ಮನೆಮಾಡಿದೆ’ ಎಂದು ತಿಳಿ ಹೇಳಿದರು. ನಂತರ ಆ ಮಗುವಿನ ಹೆಸರನ್ನು ರವಿಚಂದ್ರ ಎಂ. ಎಂದು ಚುಟುಕುಗೊಳಿಸಿ ಮರುನಾಮಕರಣ ಮಾಡಿದ್ದರು. ಆ ಹುಡುಗನೇ ನಾನು.

ಆ ಟೀಚರ್ ಹೆಸರು ಪರಿಮಳಾ. ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಪರಿಮಳಾ ಟೀಚರ್ ಆ ಶಾಲೆಯಲ್ಲಿನ ಸಾವಿರಾರು ಮಕ್ಕಳ ಬದುಕಿನಲ್ಲಿ ಇಂದಿಗೂ ಪ್ರಾತಃಸ್ಮರಣೀಯರು. ಇವರು ತೀರಾ ಇತ್ತೀಚಿನ ದಿನಗಳವರೆಗೂ ನನ್ನ ಕುಟುಂಬದೊಡನೆ ಒಡನಾಟ ಹೊಂದಿದ್ದರು ಸಹ.

ರಾಜ್ಯದವರಾದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಒಕ್ಕಲಿಗ ಸಮಾಜದ ಒಂದು ಸಭೆಯಲ್ಲಿ ತಾವು ಈ ಸಮಾಜದವರು ಎಂದು ಗುರುತಿಸಿಕೊಳ್ಳುವ ಭರದಲ್ಲಿ ‘ನಾನು ಗೌಡ ಆಗಿರುವುದಕ್ಕೇ ಮುಖ್ಯಮಂತ್ರಿ ಆದೆ. ಇಂದು ಸಚಿವನೂ ಆಗಿರುವೆ’ ಎಂದು ಬಾಯಿತಪ್ಪಿ ಹೇಳಿದರು. ಈ ಮಾತು ಆ ಪಕ್ಷದ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿ, ‘ಸದಾ ಹಸನ್ಮುಖಿ’ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಪಾಪ ಪೇಚಿಗೆ ಸಿಕ್ಕಿದ್ದು ಮತ್ತು ಸ್ಪಷ್ಟನೆ ನೀಡಿದ್ದು ಎಲ್ಲವೂ ಆಯಿತು. ಸದಾನಂದ ಗೌಡರನ್ನು ಕುಟುಕಿದ ಅಸಂಖ್ಯ ನೆಟ್ಟಿಗರು ‘ನೀವು ಗೆದ್ದಿರುವುದು ಮೋದಿ ಹೆಸರಿನ ಬಲದಿಂದ’ ಎಂದು ಅವರಿಗೆ ನೆನಪಿಸಿದ್ದೂ ಆಯಿತು.

ADVERTISEMENT

ಕರ್ನಾಟಕದಿಂದ ಜಯಶೀಲರಾಗಿರುವ ಬಿಜೆಪಿಯ ಎಲ್ಲಾ 25 ಸಂಸದರೂ ನರೇಂದ್ರ ಮೋದಿ ಅವರ ಅಲೆಯನ್ನು ನೆಚ್ಚಿ ದಡ ಸೇರಿದವರೇ ಎಂಬ ಮಾತು ಸ್ವತಃ ಆ ಸಂಸದರೂ ಸೇರಿದಂತೆ ಇಡೀ ಕರ್ನಾಟಕದ ಜನತೆಗೆ ತಿಳಿದಿರುವ ವಿಚಾರವೇ. ಆದರೆ, ಒಬ್ಬ ಸಚಿವ ತನ್ನ ಸಮುದಾಯದೊಡನೆ, ಅದೂ ಆ ಸಮುದಾಯದ ಸಭೆಯಲ್ಲಿ ಗುರುತಿಸಿಕೊಂಡಿದ್ದನ್ನೇ ಸಹಿಸದ ಸ್ಥಿತಿಗೆ ನಾವು ಇಂದು ಮುಟ್ಟಿರುವುದು ‘ಏಕತೆಯಲ್ಲಿ ವಿಭಿನ್ನತೆ’ ಅಡಿಪಾಯದ ಮೇಲೆ ನಿಂತಿರುವ ಈ ಬೃಹತ್‌ ದೇಶಕ್ಕೆ ಶುಭಸೂಚಕವಂತೂ ಅಲ್ಲ. ನಾಳೆ
ದಿನ ‘ನಾನು ಕನ್ನಡಿಗ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಹ ‘ಹುಸಿ ಭಾರತೀಯತೆ’ ಅಡ್ಡ ಬರಬಹುದು.

ನಾನು ಇಲ್ಲಿ ಜಾತಿ ತುಷ್ಟೀಕರಣದಲ್ಲಿ ತೊಡಗಿಲ್ಲ. ಆದರೆ, ತಮ್ಮ ಬೇರು ಯಾವುದು ಎಂದು ಬಹಿರಂಗವಾಗಿ ಒಬ್ಬ ಸಚಿವರೇ ಹೇಳಿಕೊಳ್ಳಲು ತಿಣುಕಾಡಬೇಕಾಗಿ ಬಂದರೆ, ನಮ್ಮ ಅಸ್ಮಿತೆಗೆ ಬೆಲೆ ಸಿಗುತ್ತದೆಯೇ? ನಾನು ತಿಳಿದ ಮಟ್ಟಿಗೆ ಒಕ್ಕಲಿಗ ಸಮಾಜದಲ್ಲಿ ‘ಗೌಡ’ ಎಂಬ ಉಪನಾಮವನ್ನು ತಮ್ಮ ಹೆಸರಿಗೆ ಅಂಟಿಸಿಕೊಳ್ಳುವ ಚಾಳಿಯು ದೇವೇಗೌಡರು ಪ್ರಧಾನಿ ಆದ ಮೇಲೆ ಹೆಚ್ಚಾಯಿತು. ಅಲ್ಲಿಯವರೆಗೂ ತಮ್ಮ ಜಾತಿ ಬಗ್ಗೆ ಕೀಳರಿಮೆ ಉಳ್ಳ ಮಂದಿಯೇ ಈ ಸಮುದಾಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ವಿಚಾರ ಸಹ ಇಲ್ಲಿ ಉಲ್ಲೇಖನಿಯ.

ಬಹಳ ಸೋಜಿಗದ ವಿಚಾರವೆಂದರೆ, ನಮ್ಮ ಆಟೊ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ವಾಹನಗಳ ಮೇಲೆ ‘ಗೌಡ’, ‘ನಾಯಕ’, ‘ಕುರುಬ’, ‘ವಿಶ್ವಕರ್ಮ’, ‘ವೀರಶೈವ’, ‘ರೆಡ್ಡಿ’ ಮುಂತಾದ ಕುಲಸೂಚಕವನ್ನು ರಾಜಾರೋಷವಾಗಿ ನಮೂದಿಸಿಕೊಳ್ಳಬಲ್ಲರಾದರೂ ನಮ್ಮ ಸಂಸದರು ಮತ್ತು ಸಚಿವರು ಮಾತ್ರ ‘ಚೌಕೀದಾರ್’ ಎಂಬ ಸೂಚಕದಾಚೆ ಸುಳಿಯಲೂ ಆಗುತ್ತಿಲ್ಲ!

ತಮಾಷೆಯ ಸಂಗತಿಯೆಂದರೆ, ತಮ್ಮ ಹೆಸರಿನ ಜೊತೆ ಜಾತಿ ಸೂಚಕವನ್ನು ಬಳಸುವುದರಲ್ಲಿ ಉತ್ತರ ಭಾರತೀಯರೇ ಹೆಚ್ಚು. ‘ಮೋದಿ’, ‘ಶಾ’, ‘ಶರ್ಮಾ’, ‘ಗೋಯಲ್’, ‘ಗಡ್ಕರಿ’, ‘ಸಿಂಗ್’...ಗಳ ಮಧ್ಯೆ ನಮ್ಮ ‘ಅಂಗಡಿ’, ‘ಗೌಡ’, ‘ಹೆಗಡೆ’, ‘ಜೋಷಿ’ಗಳು ಕಳೆದುಹೋಗುವ ಸಾಧ್ಯತೆಯೇ ಹೆಚ್ಚು. ಉತ್ತರದವರಿಂದ ಹಿಂದಿ ಭಾಷೆ ಕಲಿತದ್ದೂ ಆಯಿತು, ಅರಗಿಸಿಕೊಂಡದ್ದೂ ಆಯಿತು. ಈಗ ‘ನಿಮ್ಮ ಕುಲನಾಮ ಬಳಸಬೇಡಿ’ ಎಂಬ ಪಾಠ ಕಲಿಯುವ ಸಮಯ ಬಂದಿದೆ. ಮುಂದೊಂದು ದಿನ ಒಂದೇ ದೇಶ, ಒಂದೇ ಭಾಷೆ, ಒಂದೇ ಚುನಾವಣೆಯ ಜೊತೆಗೆ ಒಂದೇ ಧರ್ಮ ಒಂದೇ ಕುಲಸೂಚಕವನ್ನೂ ನಾವೆಲ್ಲಾಪಡೆದುಕೊಳ್ಳಬೇಕಾಗಿ ಬರಬಹುದು!

- ಲೇಖಕ: ಸಹಾಯಕ ಪ್ರಾಧ್ಯಾಪಕ, ಸಪ್ತಗಿರಿ, ಎಂಜಿನಿಯರಿಂಗ್‌ ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.