ADVERTISEMENT

ಒಲಿಸಿಕೊಳ್ಳಬೇಕು ಅಗ್ನಿ ಮಹಾರಾಜನ!

ಅಡವಿಗೆ ಬೆಂಕಿ ಬೀಳುವುದನ್ನು ತಪ್ಪಿಸಲು ಮತ್ತು ಅಗ್ನಿ ಮಹಾರಾಜನನ್ನು ಒಲಿಸಿಕೊಳ್ಳಲು, ಮೊದಲು ಅರಣ್ಯ ಇಲಾಖೆಯ ಸಾಮರ್ಥ್ಯ ಹೆಚ್ಚಿಸಬೇಕು

ಡಾ.ರಾಜೇಗೌಡ ಹೊಸಹಳ್ಳಿ
Published 11 ಮಾರ್ಚ್ 2019, 20:08 IST
Last Updated 11 ಮಾರ್ಚ್ 2019, 20:08 IST

ಪಂಚಭೂತಗಳಲ್ಲಿ ಒಬ್ಬ ಅಗ್ನಿ ಮಹಾರಾಜ. ಒಲಿದರೆ ಗೆಳೆಯ. ಮಲೆತರೆ ರಾಕ್ಷಸ. ಅಂದು ಅರಗಿನ ಮನೆ, ಖಾಂಡವ ದಹನ, ಯಜ್ಞಯಾಗಾದಿಗಳಿಂದ ಕಾಡು ಸುಡುಗಾಡಾಯಿತು. ಹುಲ್ಲು, ಸೊಪ್ಪು, ಲಂಟಾನ, ಉರಾಳುಗಿಡ ಇವೆಲ್ಲವೂ ಸುಡುಬೆಂಕಿಯ ಗೆಳೆಯರಾಗುವುದುಂಟು. ಬೆಂಗಳೂರು, ತಮಿಳುನಾಡು ಸೇರಿದಂತೆ 500 ಕಾರುಗಳ ದಹನ. ಬಂಡೀಪುರ ಹಾಗೂ ರಾಜ್ಯದ ಎಲ್ಲಾ ಕಡೆ 10 ಸಾವಿರ ಎಕರೆ ಅಡವಿ ಜೀವ ಜಾಲ ದಹನ. ಇಂದು ಅಡವಿ ಇಲಾಖೆಯಲ್ಲಿ ನೂರಾರು ಜನ ಐ.ಎಫ್‌.ಎಸ್ ಅಧಿಕಾರಿಗಳು ತಣ್ಣಗೆ ಕುಳಿತು ಸುದ್ದಿ ಓದುತ್ತಿದ್ದಾರೆ. ಹೆಸರಿಗೊಬ್ಬರು ಮಂತ್ರಿ. ತಲೆಯಾಡಿಸಲು ಅನೇಕ ಅಧಿಕಾರಿಗಳು, ಹೀಗಿದೆ ನರಸತ್ತ ಇಲಾಖೆ. ಇತ್ತ ಬಿಡಿಎ, ನಗರಸಭೆ ಇತ್ಯಾದಿಗಳು ಸಹ ಹಸಿರುತ್ಪಾದನೆ ಮಾಡುತ್ತಿಲ್ಲ.

ಅಡವಿ ಇಲಾಖೆ ದೇಶದಲ್ಲಿ ಪ್ರಮುಖ ಸ್ಥಾನದಲ್ಲಿರಬೇಕಾಗಿತ್ತು. ಅದರ ಸೊತ್ತು ಈಗ ತೆರೆದ ಖಜಾನೆ. ಚೋರರು, ಕಿಡಿಗೇಡಿ ನಾಗರಿಕರಿಗೆ ಒಳಸಂಧಾನ. ಹಾಗಾಗಿ ಹೊಸಕೋಟೆ ಮೂಲದ ಕಟ್ಟಿಗೇನಹಳ್ಳಿಯಂತಹವಕ್ಕು ವೀರಪ್ಪನ ತಾಣವಾಗಿದ್ದ ಅಡವಿಗೂ ಬಿಡಿಸಲಾರದ ನಂಟು. ಕಾಡು ಸುಟ್ಟರೆ ಅದು ಪುನಃ ಯಥಾಸ್ಥಿತಿಗೆ ಬರಲು ದಶಕಗಳೇ ಬೇಕು. ಬಂಡೀಪುರದಂತಹವು ಉದುರೆಲೆ ಅಡವಿ. ಈಗಂತೂ ಬೆಂಕಿ ತಗುಲಿದರೆ ತುದಿಗಾಲಿನ ವೇಗ. ತರತರದ ಪ್ರಾಣಿ ಪಕ್ಷಿಗಳ ಮಾರಣಹೋಮವಾಗಿದೆ. ಈಗ ಏನಾಗಿದೆ ಎಂದರೆ ಆದಿವಾಸಿಗಳು ಚೋರರ ಗಾಳದ ಮೀನುಗಳಾಗಿದ್ದಾರೆ. ಮಾನವ ಸೂತ್ರ ಹರಿದು ಬಿಟ್ಟಿದ್ದಾನೆ. ತನ್ನ ಅಂತಿಮ ಸಾವಿಗೆ ಏಣಿ ಒಡ್ಡಿಕೊಂಡಿದ್ದಾನೆ. ಕಬಿನಿಯಂತಹವು ಜೀವ ತುಂಬಿಕೊಳ್ಳಲು ಅಡವಿ ನೀರು ಚಿಲುಮೆ ಒಸರುತ್ತಿರಬೇಕು. ಅವು ಹರಿದು ಮನುಷ್ಯನ ಹಮ್ಮುಬಿಮ್ಮುಗಳನ್ನು ಸಲಹಬೇಕು. ಇದಾವುದೂ ವರ್ತಮಾನಕ್ಕೆ ಅರ್ಥವಾಗುತ್ತಿಲ್ಲ. ದೂರದೃಷ್ಟಿ, ಪರಿಸರ ಪ್ರಜ್ಞೆ ಆಳುವ ನೇತಾರರಿಗೆ ಬೇಕು.

ಇದೆಲ್ಲವೂ ನೋವಿನ ಸಂಗತಿಯಾಯ್ತು. ಹಾಗಾದರೆ ಏನು ಮಾಡಬೇಕು? ಬೆಂಕಿ ಬಿದ್ದಾಗ ಸೊಪ್ಪಿನ ಕೋಲು ಹಿಡಿದು ಅಗ್ನಿಮಹಾರಾಜನನ್ನು ಬೆದರಿಸಲಾಗುವುದಿಲ್ಲ. ಆತ ಖಾಂಡವ ದಹನದ ಅರ್ಜುನನ ಗೆಳೆಯ ಇಂದ್ರನ ಸಖ. ಪೂಜಿಸಿ ಒಲಿಸಿಕೊಳ್ಳ
ಬೇಕು. ಆ ಪೂಜೆಯು ಇಲಾಖಾ ಸಾಮರ್ಥ್ಯದಿಂದಾಗಬೇಕು. ಪ್ರಜೆಗಳು ಸಹಕರಿಸಬೇಕು. ಆ ಪೂಜಾ ನಿಯಮ ನವೆಂಬರ್‌ನಿಂದಲೇ ಪ್ರಾರಂಭವಾಗಬೇಕು. ಸರಿಯಾದ ಫೈರ್‌ಲೈನ್ ಮಾಡಿ ತಡೆ ಒಡ್ಡಬೇಕು. ಹೆಚ್ಚುವರಿಯಾಗಿ ಜನರನ್ನು ನೇಮಿಸಿಕೊಳ್ಳಬೇಕು. ಅಡವಿಗೆ ಹೋಗುವವರಿಗೆ ನೀರು, ಆಹಾರ ತಯಾರಿಸುವವರು ಬೇಕು. ಆದಿವಾಸಿಗಳು ಹಾಗೂ ಹೊರಗಿನವರ ನೆರವು ಪಡೆಯಬೇಕು. ಅವರುಗಳಲ್ಲಿ ಪರಸ್ಪರ ವೈರತ್ವ ಉಂಟಾಗದಂತೆ ಕೂಲಿನಾಲಿ ಕಲ್ಪಿಸುವುದರಲ್ಲಿ ಜಾಣತನ ತೋರಿಸಬೇಕು. ವೃತ್ತಿಯಾಗಿ ಮಾಡಿಕೊಂಡಿರುವ ಚೋರರ ಸಾಂಗತ್ಯ ತೊರೆಯುವಂತೆ ಸ್ಥಳೀಯರನ್ನು ಗೆಳೆತನದಲ್ಲಿ ಇರಿಸಿಕೊಳ್ಳಬೇಕು. ಕಿಡಿಗೇಡಿತನಕ್ಕೆ ಕಣ್ಣಿಟ್ಟಿರಬೇಕು. ಹೆಚ್ಚುವರಿ ನೀರು ಟ್ಯಾಂಕರುಗಳು, ಜೀಪುಗಳಿಗೆ ಡೀಸೆಲ್ ಮುಂತಾದವನ್ನು ದಾಸ್ತಾನಿಡಬೇಕು. ಇದೆಲ್ಲವನ್ನು ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಗೆ ಬಲ ತುಂಬಲು ಅರಣ್ಯ ಭವನದ ಅಧಿಕಾರಿಗಳು ಹಣದ ಥೈಲಿ ಸಮೇತ ಅಲ್ಲಿರಬೇಕು. ಅವರಲ್ಲಿ ಪ್ರಕೃತಿ ಆರಾಧಿಸುವ ಪ್ರಾಮಾಣಿಕತೆ ಇರಬೇಕು. ಇದು ಯುದ್ಧ ರೀತಿಯ ತಯಾರಿ.

ADVERTISEMENT

ಸಮರ್ಪಕ ಸಂಖ್ಯೆಯ ಅರಣ್ಯ ವಾಚರ್‌ಗಳು, ಗಾರ್ಡ್‌ಗಳು ಈಗಿಲ್ಲ. ಇಷ್ಟರಲ್ಲೂ ಬೆಂಕಿ ಬಿದ್ದರೆ ಅಗ್ನಿಯೊಡನೆ ಸಂಧಾನ ಮಾಡಲಾಗುವುದಿಲ್ಲ. ಬೆಂಕಿ ಬಿದ್ದು ಹರಡುತ್ತಿದ್ದರೆ ಏರ್‌ಫೋರ್ಸ್ ಸಹಾಯ ಕೇಳಬೇಕು. ಈ ಎಲ್ಲವೂ ಮೇಲಿನ ನಿಷ್ಠಾವಂತ ಅಧಿಕಾರಿಗಳಿಂದ ಆಗುತ್ತದೆ. ಸ್ಥಳೀಯ ಮುಂಗಡವಾಗಿ ಹಣ, ಜನ, ಅಭಯಗಳೆಲ್ಲವೂ ಬೇಕು. ಇದೆಲ್ಲವನ್ನೂ ಪರಿಶೀಲಿಸುವ ಸರ್ಕಾರವು ಇಲಾಖೆಯನ್ನು ಕಡೆಯ ದರ್ಜೆಗೆ ನೂಕಿದೆ. ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವುದಿಲ್ಲ. ಸ್ಥಳೀಯ ಅಧಿಕಾರಿಗಳು ಸಾಲಸೋಲ ಮಾಡಿ ಹೋರಾಡುವ ಸ್ಥಿತಿ ಅಲ್ಲಿದೆಯಂತೆ. ಅದರ ಹಣ ಖಜಾನೆಯಿಂದ ಬಿಲ್ಲಾಗಿ ಬರುವವರೆಗೆ ಆತ ಬಡ್ಡಿ ಕೊಡಬೇಕಂತೆ. ಹೀಗಿರುವಾಗ ಸಮಸ್ಯೆ ಬಿಡಿಸುವುದೆಂತು! ಬಡಪಾಯಿ ಕೆಳನೌಕರರ ಜೀವ ಅಗ್ನಿಯ ಹಿಡಿತದಲ್ಲಿರುತ್ತದೆ. ಹಾಗಾಗಿ ಇದೇ ಬಂಡೀಪುರದ ಬೇಗೂರು ಅರಣ್ಯದಲ್ಲಿ ಬೆಂಕಿಯೊಡನೆ ಗಾರ್ಡ್ ಒಬ್ಬ ಸುಟ್ಟು ಹೋದ. ಇದಾವುದೂ ಸರ್ಕಾರದ ನಜರಿನಲ್ಲಿಲ್ಲ. ಸರ್ಕಾರದ್ದೇನಿದ್ದರೂ ಬಫರ್‌ ವಲಯ ಹರಿದು ಹಂಚುವುದು, ಸುಳ್ಳು ಭರವಸೆ ನೀಡಿ ಆದಿವಾಸಿಗಳನ್ನು, ನಗರವಾಸಿಗಳನ್ನು ಅಡವಿ ಶತ್ರುಗಳಾಗಿಸುವುದು.

ಕಾನೂನು ಕಟ್ಟಲೆಗಳ ಮೂಲಕ ಅಡವಿ ಜನರನ್ನು ಎತ್ತಂಗಡಿ ಮಾಡಿ ಅರಣ್ಯ ಉಳಿಸಿಕೊಳ್ಳಲು ಪ್ರಯತ್ನಿಸಬಹುದು. ಇದಾವುದರಿಂದಲೂ ಅಡವಿ ಉಳಿಯುವುದಿಲ್ಲ. ಮನುಷ್ಯನಿಗೆ ಇರಬೇಕಾದ ಪ್ರಕೃತಿ ಪ್ರೇಮ, ಅಡವಿ ಪ್ರೇಮ ಬಹುದೊಡ್ಡದು. ಅದರೊಳಗೆ ಜಗತ್ತಿನ ಉಳಿವಿನ ಕಿಡಿಗಳಿರುತ್ತವೆ. ಆ ಕಿಡಿಗಳು ತಣ್ಣಗೆ ದೀಪ ಬೆಳಗುವ ರೀತಿಯಾಗಬೇಕೇ ಹೊರತು ದಹನ ಮಾಡುವ ಕೊಳ್ಳಿಯಾಗಬಾರದು. ಇದನ್ನೇ ಗಾಂಧೀಜಿ ಮಾತಿನಲ್ಲಿ ಹೇಳುವುದೆಂದರೆ ‘ತಾಯಿ ಹೆಚ್ಚು ಬಲಶಾಲಿ ಆದುದರಿಂದ ರೊಟ್ಟಿಯನ್ನು ತಾನೇ ತಿಂದು ಹಾಕಳು. ಮನುಷ್ಯರ ಪರಸ್ಪರ ಸಂಬಂಧದಲ್ಲೂ ಹೀಗೇ ಎಂದು ತಿಳಿಯಬೇಕು’. ಈ ತಾಯಿ ಎಂಬ ಮಾತು ಅಡವಿ ತಾಯಿಗೂ ಅನ್ವಯಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.