ADVERTISEMENT

ಟೆಂಪಲ್ ರನ್: ವಿಜ್ಞಾನಿಗಳ ಸರದಿ

ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ
Published 23 ಜುಲೈ 2019, 19:39 IST
Last Updated 23 ಜುಲೈ 2019, 19:39 IST
New Sangatha 24-07-2019
New Sangatha 24-07-2019   

2019ರ ಲೋಕಸಭಾ ಚುನಾವಣೆಯಲ್ಲಿ ತಾವೇ ಗೆಲ್ಲಬೇಕು, ಉಳಿದವರು ಮಣ್ಣು ಮುಕ್ಕಬೇಕು ಎಂದು ಹೆಚ್ಚು ಕಡಿಮೆ ಎಲ್ಲಾ ಅಭ್ಯರ್ಥಿಗಳು ಕಂಡಕಂಡ ದೇವಸ್ಥಾನಗಳಿಗೆ ನುಗ್ಗಿ, ವಿಶೇಷ, ಅತಿವಿಶೇಷ ಪೂಜೆ, ಹೋಮ, ಹವನಗಳನ್ನು ಮಾಡಿಸಿದರು. ಆದರೂ ಗೆದ್ದವರು ಗೆದ್ದಿದ್ದು ಮತದಾರರು ಒಂದು ಯಂತ್ರದ ಗುಂಡಿ ಒತ್ತಿದ್ದರಿಂದ ಎಂಬುದು ಹಗಲಿನ ಬೆಳಕಿನಷ್ಟೇ ಸ್ಪಷ್ಟ. ಆದರೂ ರಾಜ್ಯ ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿ, ಮಳೆ ದೇವರನ್ನು ಓಲೈಸಲು ಶೃಂಗೇರಿ ಸೇರಿದಂತೆ ರಾಜ್ಯದ ನೂರಾರು ದೇವಸ್ಥಾನಗಳಲ್ಲಿ ಪರ್ಜನ್ಯ ಜಪವನ್ನು ಜನ ಬೆವರು ಹರಿಸಿ ದುಡಿದ ಹಣದಲ್ಲಿ ನಡೆಸಿತು. ಆದರೆ, ಮಳೆ ಮಾತ್ರ ಬರಲಿಲ್ಲ. ರಾಜಕಾರಣಿಗಳದ್ದಾಯಿತು, ಆನಂತರ ‘ಟೆಂಪಲ್ ರನ್’ ಶುರುವಾಗಿದ್ದು ವಿಜ್ಞಾನಿಗಳದ್ದು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಕೆ.ಶಿವನ್‍ ಅವರು ಈ ತಿಂಗಳ 7ರಂದು ಪತ್ನಿ ಮತ್ತು ಮಗನೊಂದಿಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಹೋಗಿ, ದೇವರ ದರ್ಶನ ಪಡೆದರು. ಇದು ಅವರ ಖಾಸಗಿ ಭೇಟಿಯಾಗಿದ್ದರೆ ಯಾರಿಗೂ ಯಾವ ಆತಂಕವೂ ಇರಬೇಕಾಗಿರಲಿಲ್ಲ. ಆದರೆ ಅವರೊಂದಿಗೆ ಇಸ್ರೊದ ಇನ್ನೂ ನಾಲ್ವರು ಅಧಿಕಾರಿಗಳಿದ್ದರು. ಅಲ್ಲದೆ ಅವರು ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದು ತಮ್ಮ ಕುಟುಂಬದವರ ಕ್ಷೇಮಾಭಿವೃದ್ಧಿಗಾಗಿ ಅಲ್ಲ, ಬದಲಿಗೆ ಅಲ್ಲಿನ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಯನ್ನು ಪಡೆದಿದ್ದು ‘ಇಸ್ರೊ ಸಂಸ್ಥೆಯ ವಿಜ್ಞಾನಿಗಳು ಸೇರಿ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯ ಉಡಾವಣೆಗೆ ತಯಾರಾಗಿದ್ದೇವೆ. ಇದರ ಯಶಸ್ಸಿಗೆ ನಿಮ್ಮ ಅನುಗ್ರಹ ಬೇಕು’ ಎಂದು! ಕೊಲ್ಲೂರು ಮೂಕಾಂಬಿಕೆ ಹಾಗೂ ತಿರುಪತಿ ತಿಮ್ಮಪ್ಪ ದೇಗುಲಗಳಲ್ಲಿಯೂ ಚಂದ್ರಯಾನ-2ರ ಯಶಸ್ಸಿಗಾಗಿ ಶಿವನ್‌ ಅವರು ವಿಶೇಷ ಪೂಜೆ ಸಲ್ಲಿಸಿದರು. ಆದರೂ, ಹೀಗೆ ಮಾಡಿದವರಲ್ಲಿ ಇವರು ಮೊದಲಿಗರೇನೂ ಅಲ್ಲ!

ಈ ಹಿಂದೆ ಇಸ್ರೊ ಅಧ್ಯಕ್ಷರಾಗಿದ್ದ ಡಾ. ರಾಧಾಕೃಷ್ಣನ್ ಕೂಡ 2013ರ ನವೆಂಬರ್‌ನಲ್ಲಿ ಮಂಗಳಯಾನ ಯೋಜನೆಯ ಯಶಸ್ಸಿಗಾಗಿ ರಾಕೆಟ್‌ನ ಮಾದರಿ ಸಹಿತ ತಿರುಪತಿ ತಿಮ್ಮಪ್ಪನಿಗೆ ಶರಣಾಗಿದ್ದರು. ಯಾವುದೇ ಮಠದ ಸ್ವಾಮೀಜಿ, ದರ್ಗಾದ ಮುಲ್ಲಾ, ಚರ್ಚಿನ ಪಾದ್ರಿ ತಮ್ಮ ದೈವಿಕ ಶಕ್ತಿಯಿಂದ ಈ ಭೌತಿಕ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯನ್ನೂ ಒಂದು ಮಿಲಿಮೀಟರ್ ಎತ್ತರಕ್ಕೂ ಎತ್ತುವುದಕ್ಕೆ ಸಾಧ್ಯವಿಲ್ಲ ಎಂಬುದು ಈ ಎಲ್ಲಾ ವಿಜ್ಞಾನಿ ಶ್ರೇಷ್ಠರಿಗೂ ಗೊತ್ತು. ಆದರೂ ಲಕ್ಷಾಂತರ ಪ್ಯಾರಾಮೀಟರುಗಳು, ಕ್ಲಿಷ್ಟಕರ ಲೆಕ್ಕಾಚಾರ, ಅತ್ಯಂತ ನಿಖರ ತಂತ್ರಜ್ಞಾನದ ಫಲವಾಗಿ ಸಾಕಾರಗೊಂಡ, ಹಲವು ಬಗೆಯ ಶೋಧನಾ ಯಂತ್ರೋಪಕರಣಗಳನ್ನು ಹೊತ್ತು, ಲಕ್ಷಾಂತರ ಕಿ.ಮೀ ದೂರ ಪಯಣಿಸಬೇಕಾಗಿರುವ ಚಂದ್ರಯಾನದ ಜಿಎಸ್‍ಎಲ್‍ವಿ– ಮಾರ್ಕ್ 3 ರಾಕೆಟ್‍ ಯೋಜನೆಯ ಯಶಸ್ಸು ಸ್ವಾಮೀಜಿಯ ಅನುಗ್ರಹದಿಂದ ಸಾಧ್ಯವೇ?

ADVERTISEMENT

ಈ ಭೌತಿಕ ಜಗತ್ತಿನ ಯಾವುದೇ ವಸ್ತು ಮತ್ತು ಕ್ರಿಯೆ ನಡೆಯುವುದು ಕೇವಲ ವಿಶ್ವ ನಿಯಮಗಳ ಪ್ರಕಾರ. ಅದರ ಹೊರತಾಗಿ ನಡೆಯುವುದೆಲ್ಲ ಆಸೆ, ಕನಸು, ಭ್ರಮೆ, ಕಥೆ, ಪುರಾಣಗಳಲ್ಲಿ ಮಾತ್ರ. ಬಾಹ್ಯಾಕಾಶ ಸಂಶೋಧನೆಯು ವಿಜ್ಞಾನ– ತಂತ್ರಜ್ಞಾನದ ಅತ್ಯಂತ ಕ್ಲಿಷ್ಟಕರ, ಅಷ್ಟೇ ನಿಖರವಾದ ಕಾರ್ಯಯೋಜನೆ. ಜಗತ್ತಿನ ನೂರಾರು ಶ್ರೇಷ್ಠ ವಿಜ್ಞಾನಿಗಳು, ತಂತ್ರಜ್ಞರು, ಸಹಾಯಕರು ಇಸ್ರೊದಲ್ಲಿ ಇರುವುದರಿಂದಲೇ ಇಂದು ಭಾರತವು ಬಾಹ್ಯಾಕಾಶ ಜಗತ್ತಿನಲ್ಲಿ ಹೆಸರು ಮಾಡಿದೆ. ಅವಲೋಕನ, ಅನುಮಾನ, ಪ್ರಶ್ನೆ, ಪರಿಶೀಲನೆ, ಪ್ರಯೋಗ, ಫಲಿತಾಂಶ, ಮರುಪ್ರಯೋಗ- ಇವು ಡಾ.ರಾಧಾಕೃಷ್ಣನ್ ಮತ್ತು ಕೆ.ಶಿವನ್‍ ಅವರೂ ಸೇರಿದಂತೆ ಜಗತ್ತಿನ ಎಲ್ಲ ವಿಜ್ಞಾನಿಗಳೂ ಸಹಜವಾಗಿಯೇ ಅನುಸರಿಸುವ ವೈಜ್ಞಾನಿಕ ವಿಧಾನ. ಅಷ್ಟೇ ಯಾಕೆ, ವಿಜ್ಞಾನದ ವಿಧಾನವನ್ನು ಅನುಸರಿಸದೇ ಇದ್ದರೆ ಅಡುಗೆ ಮನೆಯಲ್ಲಿ ರುಚಿಕರವಾದ ತಿಳಿಸಾರನ್ನೂ ತಯಾರಿಸಲು ಸಾಧ್ಯವಿಲ್ಲವೆನ್ನಿ!

ಭಾರತ ಸಂವಿಧಾನದ ವಿಧಿ 51 ಎ(ಎಚ್)ನಲ್ಲಿ ನಮಗೆ ನಾವೇ ಒಪ್ಪಿಸಿಕೊಂಡಿರುವ ‘ಪ್ರತಿ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯ’ಗಳಲ್ಲಿ ‘ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸಿ
ಕೊಳ್ಳುವುದು’ ಕೂಡ ಸೇರಿವೆ. ಈ ವಿಜ್ಞಾನಿಗಳು ತಮ್ಮ ಯೋಜನೆಗಳ ಯಶಸ್ಸಿಗಾಗಿ ದೇಗುಲ, ಮಠಗಳ ಮೊರೆ ಹೋಗುವುದು ಸಂವಿಧಾನದ ಯಾವ ವಿಧಿಯ ಪ್ರಕಾರ? ಸಂವಿಧಾನದ ವಿಧಿ 25, ತಮಗೆ ಬೇಕಾದ ಧರ್ಮ, ನಂಬಿಕೆಗಳನ್ನು ಅನುಸರಿಸುವ ಮೂಲಭೂತ ಹಕ್ಕನ್ನು ನಾಗರಿಕರಿಗೆ ನೀಡುತ್ತದೆ. ಆದರೆ ಇದು ವ್ಯಕ್ತಿಗಳಿಗೆ ನೀಡಲಾಗಿರುವ ಅವಕಾಶವೇ ವಿನಾ ಸರ್ಕಾರ, ಸಂಸ್ಥೆಗಳಿಗಲ್ಲ. ಸರ್ಕಾರಿ ಸಂಸ್ಥೆಗಳ ಹೊಣೆ ಹೊತ್ತಿರುವವರು, ಸಾರ್ವಜನಿಕರ ಹಣದಲ್ಲಿ ಯೋಜನೆಗಳನ್ನು ಜಾರಿಗೊಳಿಸುವವರು ಸಂವಿಧಾನಕ್ಕೆ ಬದ್ಧರಾಗಿರಬೇಕು. ಸಾರ್ವಭೌಮ ನಾಗರಿಕರಿಗೆ ಉತ್ತರದಾಯಿಗಳಾಗಿರಬೇಕು.

ಶಿವನ್‍ ಅವರ ದೇವಸ್ಥಾನ ದರ್ಶನಗಳ ನಂತರವೂ ಜುಲೈ 15-16ರ ನಡುವೆ ಮಧ್ಯರಾತ್ರಿ ಆಗಬೇಕಾಗಿದ್ದ ಉಡಾವಣೆಯನ್ನು, ತುಂಬಾ ಚಿಕ್ಕದಾದರೂ ಮಹತ್ವದ ತಾಂತ್ರಿಕ ದೋಷದಿಂದಾಗಿ ಮುಂದೂಡಲಾಗಿತ್ತು. ನಮ್ಮ ವಿಜ್ಞಾನಿಗಳು ದೋಷ ಸರಿಪಡಿಸಿದ ಬಳಿಕ ಸೋಮವಾರ ರಾಕೆಟ್‌ ನಭಕ್ಕೆ ಹಾರಿದೆ. ಚಂದ್ರಯಾನ ಉಡ್ಡಯನವು ಯಶಸ್ವಿಯಾಗಿ ನಡೆದಿರುವುದು ಖಂಡಿತವಾಗಿಯೂ ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ಪರಿಣತಿ ಹಾಗೂ ಪರಿಶ್ರಮದ ಫಲವಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.