ADVERTISEMENT

ಸಂಗತ: ಇವ ಆಗಂತುಕನಲ್ಲ, ಅಪರೂಪದ ಅತಿಥಿ

‘ಗ್ರೀನ್ ಕಾಮೆಟ್’ ಎಂಬ ಧೂಮಕೇತು ಇದೀಗ ಧರೆಯ ಅತಿಥಿ

ಬಿ.ಎಸ್.ಭಗವಾನ್
Published 3 ಫೆಬ್ರುವರಿ 2023, 19:30 IST
Last Updated 3 ಫೆಬ್ರುವರಿ 2023, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಾಲ, ಉಬ್ಬರವಿಳಿತ ಯಾರಿಗೂ ಕಾಯವು. ಅಂತೆಯೇ ಆಗಾಗ ಭೂಮಿಯತ್ತ ಬರುವ ಧೂಮಕೇತುಗಳು. ನಮ್ಮ ಬದುಕನ್ನು ಧೂಮಕೇತುವಿಗೆ ಹೋಲಿಸುವುದಿದೆ. ರಾತ್ರಿಯ ಆಗಸದಲ್ಲಿ ಬಹುತೇಕ ಯಾರೂ ಗಮನಿಸದಂತೆ ಧೂಮಕೇತು ಹಾದುಹೋಗಿ ರುತ್ತದೆ. ಧೂಮಕೇತುಗಳು ಅಥವಾ ಬಾಲಚುಕ್ಕಿಗಳು ಸೌರವ್ಯೂಹದ ವಿಶಿಷ್ಟ ಸದಸ್ಯ ಕಾಯಗಳು. ವಿಶೇಷವಾಗಿ ಮಂಜು, ಮೀಥೇನ್, ಕಾರ್ಬನ್ ಡೈ ಆಕ್ಸೈಡ್, ದೂಳು ಹೊತ್ತ ಅವು ‘ಕೊಳಕು ಹಿಮಬಂಡೆಗಳು’.

‘ಕೋಮಾ’ ಎಂಬ ಬೀಜಕೇಂದ್ರ (ತಲೆ), ಸೂರ್ಯನ ಬಳಿ ಬಂದಂತೆ ಬೆಳೆಸಿಕೊಳ್ಳುವ ಉದ್ದನೆಯ ಬಾಲ, ಚಿತ್ರವಿಚಿತ್ರ ಚಹರೆ ಮುಂದೇನು ವಿಪತ್ತೋ ಎಂಬ ಭಯ ಹುಟ್ಟಿಸುತ್ತದೆ. ಆದರೆ ವಾಸ್ತವವೆಂದರೆ, ಧೂಮಕೇತುವನ್ನೂ ಒಳಗೊಂಡಂತೆ ಭೂಮಿಯನ್ನು ಬಾಧಿಸುವ ಯಾವುದೇ ಖಗೋಳ ವಿದ್ಯಮಾನಗಳಿಲ್ಲ. ಬದಲಿಗೆ ಅವೆಲ್ಲ ನಮ್ಮ ಕುತೂಹಲ ಸೆರೆಹಿಡಿಯುವ ಹಾಗೂ ನಾವು ನೋಡಿ ಆನಂದಿಸಿ, ಅರಿಯಬಹುದಾದ ಅಪೂರ್ವ ಅವಕಾಶಗಳು. ಧೂಮಕೇತುವೊಂದು ಗೋಚರಿಸಲಿದೆಯೆಂದರೆ ಜ್ಞಾನದ ಬುತ್ತಿಯೇ ತೇಲಿಬರುತ್ತಿದೆ ಎಂದರ್ಥ.

ಇದೀಗ ‘ಗ್ರೀನ್ ಕಾಮೆಟ್’ ಎಂಬ ಧೂಮಕೇತು ಧರೆಯ ಅತಿಥಿ. ಸ್ಯಾಂಡಿಯಾಗೊದ ಒರೆಗಾನ್ ಖಗೋಳ ವೀಕ್ಷಣಾಲಯದಲ್ಲಿ ‘ಜೇಮ್ಸ್ ವೆಬ್ ಟೆಲಿಸ್ಕೋಪ್’ ಎಂಬ ಅತ್ಯಾಧುನಿಕ ದೂರದರ್ಶಕ ಬಳಸಿ ವಿಜ್ಞಾನಿಗಳು 2022ರ ಮಾರ್ಚ್ 2ರಂದು ಈ ಧೂಮಕೇತುವನ್ನು ಪತ್ತೆಹಚ್ಚಿದರು. ಒಂದೂವರೆ ಕಿ.ಮೀ. ಅಡ್ಡಗಲದ ತಲೆಯುಳ್ಳ ಈ ಧೂಮಕೇತುವಿನ ಬಾಲವು ಲಕ್ಷಾಂತರ ಕಿ.ಮೀ.ತನಕ ಬೆಳೆಯಬಹುದು. ಪ್ರತೀ 50,000 ವರ್ಷಗಳಿಗೊಮ್ಮೆ ಅದು ಸೂರ್ಯನನ್ನು ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಬಳಸುತ್ತದೆ.

ADVERTISEMENT

ಹಿಂದಿನ ಬಾರಿ ಈ ಹಸಿರು ಬಾಲಕೇತು ಬಂದಿದ್ದಾಗ ಸುಮಾರು ಒಂದು ಲಕ್ಷ ವರ್ಷಗಳಷ್ಟು ಹಿಂದೆ ಜೀವಿಸಿದ್ದ ನಿಯಾಂಡರ್ತಲ್ ಅಥವಾ ಪ್ರಾಗ್ ಶಿಲಾಯುಗದ ಮಾನವರು ಭೂಗ್ರಹದಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿದ್ದರು. ನೇರ ನಡೆಯಲೂ ಬಾರದ ಅವರು ಆಗತಾನೆ ಆಫ್ರಿಕಾದಿಂದ ಹೊರಬಂದಿದ್ದರು. ಅವರಾದರೋ ಅತಿಥಿಯನ್ನು ಕಂಡಿದ್ದರು ಎನ್ನುವಂತಿಲ್ಲ. ಏಕೆಂದರೆ ದುರ್ಬೀನು, ದೂರದರ್ಶಕಗಳು ಅವರಿಗೆ ಎಲ್ಲಿಂದ ಬರಬೇಕು? ಗ್ರೀನ್ ಕಾಮೆಟ್‍ನ ಕಕ್ಷೆಯ ಉತ್ಕೇಂದ್ರತೆ (eccentricity) ಎಷ್ಟು ಅಧಿಕವೆಂದರೆ, ಅದು ಮತ್ತೆ ಭೂಮಿಯತ್ತ ಬರುವ ಸಾಧ್ಯತೆ ಅತ್ಯಲ್ಪ. ಹಾಗಾಗಿ ಈ ಹಸಿರು ನೆಂಟನನ್ನು ಕಣ್ತುಂಬಿಕೊಳ್ಳುವ ಯೋಗ ಹಾಲಿ ಮತ್ತು ಕೊನೆಯ ಮಾನವ ಪೀಳಿಗೆ ನಮ್ಮದೆನ್ನೋಣ.

ಕೆಲ ಧೂಮಕೇತುಗಳಿಗೆ ಶಿರೋಭಾಗದಲ್ಲಿ ಹಸಿರು ಕಾಂತಿ ಏಕೆ? ವಿವರಣೆಗೆ ಖಗೋಳ ವಿಜ್ಞಾನಿಗಳು ತೊಂಬತ್ತು ವರ್ಷಗಳವರೆಗೆ ಹೆಣಗಾಡಿದರು. ಕಡೆಗೆ ಧರೆಯಲ್ಲೇ ಕ್ಷಣಿಕವಾಗಿ ಅಸ್ತಿತ್ವವಿದ್ದು ಇಲ್ಲವಾಗುವ, ಗ್ರಹಿಕೆಗೆ ನಿಲುಕದ ಅಣುವೊಂದು ಒಗಟು ಬಿಡಿಸಲು ಕೀಲಿಕೈಯಾಯಿತು. ಹಸಿರು ಪಚ್ಚೆಯ ಬಣ್ಣ ಧೂಮಕೇತುವಿನ ರಾಸಾಯನಿಕ ರಚನೆಯನ್ನು ಬಿಂಬಿಸುವುದು. ಸೂರ್ಯರಶ್ಮಿ ಮತ್ತು ‘ಕೋಮಾ’ದಲ್ಲಿನ ಇಂಗಾಲ ಮೂಲ ಅಣುಗಳ ಸಂಘರ್ಷದ ಪರಿಣಾಮವೇ ಕಣ್ಣಿಗೆ ತಂಪೆರೆಯುವ ಆಕರ್ಷಕ ಹಸಿರು.

‘ಕಾಮೆಟ್ ಗ್ರೀನ್’ ಜನವರಿ ಕೊನೆಯ ವಾರದಿಂದಲೇ ಗೋಚರಿಸಲಾರಂಭಿಸಿದೆ. ಮುಸ್ಸಂಜೆಯ ನಂತರ ಮರುದಿನದ ಮುಂಬೆಳಗಿನ ತನಕ ವೀಕ್ಷಿಸಲು ಯುಕ್ತ ಸಮಯ. ಫೆಬ್ರುವರಿ 2ರಂದು ಉತ್ತರಾರ್ಧ ಗೋಳಾಕಾಶದಲ್ಲಿ 45 ಡಿಗ್ರಿ ಎತ್ತರದಲ್ಲಿ ಅತಿಥಿಯನ್ನು ಕಾಣಬಹುದಿತ್ತು. ಫೆಬ್ರುವರಿ ಮೊದಲ ವಾರದವರೆಗೆ ಅದನ್ನು ವೀಕ್ಷಿಸಬಹುದು. ನಂತರ ಅದು ‘ದೀರ್ಘಕಂಠ’ ಎಂದು ಗುರುತಿಸಲ್ಪಡುವ ಮಸುಕಾದ ನಕ್ಷತ್ರಪುಂಜದ ಹಿನ್ನೆಲೆಯಲ್ಲಿ ಪಯಣಿಸುತ್ತದೆ. ವಿರಳಾತೀತ ಮಿತ್ರನನ್ನು ಬೀಳ್ಕೊಡದೇ ವಿಧಿಯಿಲ್ಲ.

ದುರ್ದೈವವೆಂದರೆ, ಆಕಾಶ ನೋಡುವುದಕ್ಕೆ ನೂಕುನುಗ್ಗಲೇಕೆ ಎನ್ನುವ ದಿನಗಳು ಈಗಿಲ್ಲ. ಪ್ರಕೃತಿಕೃತ ಅಡೆತಡೆಗಳಿಗೆ ಏನೂ ಮಾಡಲಾಗದು. ಆದರೆ ನಮ್ಮ ಕೈಯಾರೆ ಆಗುವ ವಿಘ್ನಗಳು? ಮನುಷ್ಯಕೃತ ಪರಿಸರ ಮಾಲಿನ್ಯಗಳ ಯಾದಿಗೆ ಬೆಳಕಿನ ಮಾಲಿನ್ಯವೂ ಸೇರಿಬಿಟ್ಟಿದೆ. ಸೂರ್ಯ, ಚಂದ್ರರ ಉದಯ, ಅಸ್ತಗಳನ್ನು ಸವಿಯಲು ನಗರಪ್ರದೇಶಗಳನ್ನು ಬಿಟ್ಟು ದೂರ ಹೋದರೂ ಕತ್ತಲೆಯ ಅಭಾವ ಅಟ್ಟಿಸಿಕೊಂಡು ಬಂದಿರುತ್ತದೆ! ಹಾಗಾಗಿ ಮಾಧ್ಯಮದಲ್ಲಿ ವರದಿಯಾಗುವ ಆಗಸದ ಅಚ್ಚರಿಗಳನ್ನು ಕಂಡು ರೋಚಕಗೊಳ್ಳಬೇಕಷ್ಟೆ.

ಸೌರವ್ಯೂಹದ ರಚನೆಯ ನಿಗೂಢತೆ ಭೇದಿಸಲು ಧೂಮಕೇತುಗಳ ವಿಸ್ತೃತ ಅಧ್ಯಯನ ಅನಿವಾರ್ಯ. ಇತಿಹಾಸದಾದ್ಯಂತ ಘಟಿಸಿದ ಅನಾಹುತ, ಅನರ್ಥ, ವಿಪತ್ತುಗಳಿಗೆಲ್ಲ ಧೂಮಕೇತುಗಳನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಇತಿಹಾಸಕಾರ ರಿರಲಿ, ಖಗೋಳತಜ್ಞರೂ ಕಾಕತಾಳೀಯಕ್ಕೆ ಮಾರುಹೋಗಿದ್ದುಂಟು! ಆಗಸ ಆಪ್ತವಾಗಬೇಕೆ ವಿನಾ ಆತಂಕಕ್ಕೆ ಎಡೆಯಾಗಬಾರದು.

ಅಂತರಿಕ್ಷ ತೆರೆದ ಮನಸ್ಸಿನ ಪ್ರತಿರೂಪ. ಈ ವಿರಾಟ್ ರಂಗಸ್ಥಳದಲ್ಲಿ ಪ್ರತ್ಯಕ್ಷವಾಗಿ ನೇಪಥ್ಯಕ್ಕೆ ಸರಿಯುವ ಧೂಮಕೇತುಗಳು ಬದುಕಿನ ನಶ್ವರತೆಯನ್ನು ಬೋಧಿಸುತ್ತವೆ. ಬಾನ ಗುಡಿಸುವ ಪೊರಕೆಗಳೆಂದರೂ ಸರಿಯೆ, ಒಂದಷ್ಟು ಸಂದೇಶ ಬಿತ್ತುತ್ತವೆ ಅವು. ಎಮರ್ಸನ್ ಮಹಾಕವಿಯ ಉದ್ಗಾರ ‘ಆಕಾಶದಂತಹ ಆಖೈರು ಚಿತ್ರಶಾಲೆ ಮತ್ತೊಂದಿಲ್ಲ’.

ತಮ್ಮ ಆಯುಷ್ಯದ ಮುಂದೆ ಮನುಷ್ಯನದು ಅತ್ಯಲ್ಪ, ನಗಣ್ಯ ಎಂದು ಸಾರುವ ಧೂಮಕೇತುಗಳಿಗೂ ಅಳಿವು ತಪ್ಪಿದ್ದಲ್ಲ. ಸೌರವ್ಯೂಹದ ಅನ್ಯ ಬಲಶಾಲಿ ಆಕಾಶಕಾಯಗಳಿಗೆ ಬಡಿದೊ, ಗುರುತ್ವಕ್ಕೆ ಸ್ವತಃ ಛಿದ್ರಗೊಂಡೊ, ಇಲ್ಲವೆ ತಮ್ಮಲ್ಲಿನ ಬಾಷ್ಪಶೀಲ
ಸಾಮಗ್ರಿಗಳನ್ನು ಕಳೆದುಕೊಂಡೊ ಅವು ಕಾಲಾಂತರ ದಲ್ಲಿ ಅವಸಾನ ಹೊಂದಲೇಬೇಕು, ಹೊಂದುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.