ADVERTISEMENT

ಸಂಗತ– ನೀತಿ: ಯಾರಿಂದ ಯಾರು ಕಲಿಯಬೇಕು? ವಿಸ್ಮೃತಿಗಳಿಂದ ಶಾಲೆಗಳನ್ನ ದೂರ ಇರಿಸಬೇಕು

ಎಲ್ಲ ಬಗೆಯ ವಿಕೃತಿಗಳಿಂದ, ವಿಸ್ಮೃತಿಗಳಿಂದ ಶಾಲೆಗಳನ್ನು ದೂರ ಇರಿಸಬೇಕಿದೆ

ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ
Published 22 ಏಪ್ರಿಲ್ 2022, 19:30 IST
Last Updated 22 ಏಪ್ರಿಲ್ 2022, 19:30 IST
   

ಮಕ್ಕಳು, ಮೋಡ ಕರಗಿ ಹನಿಗಟ್ಟಿ ನೆಲದತ್ತ ಸುರಿದ ಶುಭ್ರವಾದ ನೀರಿನಂತೆ. ನೆಲಕ್ಕೆ ಬಿದ್ದ ನಂತರವೇ ನೀರ ಹನಿ ಆಯಾ ನೆಲದ ಗುಣವನ್ನು ಪಡೆದು ಅಶುದ್ಧವಾಗುತ್ತದೆ. ಹಾಗೇ ಹುಟ್ಟುವಾಗ ಅಪ್ಪಟ ವಿಶ್ವಮಾನವ ಮರಿಯಾಗಿ ಹುಟ್ಟಿದ ಮಗುವಿಗೆ, ಆದಷ್ಟು ಬೇಗ ಒಂದು ಜಾತಿಗೆ ಸೇರಿದ ಹೆಸರನ್ನು ಕೊಟ್ಟು, ಅದನ್ನು ಒಂದು ಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಅದಕ್ಕೆ ಆ ಮಗು
ವಿನ ಸಹಮತಿಯನ್ನೂ ತೆಗೆದುಕೊಳ್ಳಲಾಗದು. ಇದು ಮನುಷ್ಯನ ಮೇಲೆ ವಿಧಿವತ್ತಾಗಿ ಆಗುವ ಮೊದಲ ಮಾನವ ಹಕ್ಕುಗಳ ಉಲ್ಲಂಘನೆ.

ಮನೆ, ಮೊಹಲ್ಲಾ, ಕೇರಿಯನ್ನು ಬಿಟ್ಟು ಮೊದಲ ಬಾರಿಗೆ ಶಾಲೆಗೆ ಬಂದಾಗಷ್ಟೇ ಅದಕ್ಕೆ ತಾನಿರುವ ಸಮಾಜದಲ್ಲಿ ಹಲವು ನಂಬಿಕೆ, ಆಚರಣೆಗಳುಳ್ಳ ಸಹಜೀವಿಗಳಿದ್ದಾರೆ ಎಂಬ ಅರಿವು ಮೂಡುತ್ತದೆ. ಮನೆಯಲ್ಲಿ ಬೆಳೆದ ಸಂಕುಚಿತ ಮನೋಭಾವದಿಂದ ಹೊರಬಂದು ಮತ್ತೊಮ್ಮೆ ಮಗು ಸಹಜವಾದ ಸೌಹಾರ್ದವನ್ನು ರೂಢಿಸಿಕೊಳ್ಳುತ್ತದೆ. ಇಂಥ ಮುಗ್ಧ ಮಕ್ಕಳಿಗೆ ಈಗ ಸರ್ಕಾರವು ಶಾಲೆಗಳಲ್ಲಿ ‘ನೀತಿ’ಯನ್ನು ಕಲಿಸಲು ಹೊರಟಿದೆ. ಈ ಮಕ್ಕಳಿಗೆ ನೀತಿ ಕಲಿಸುವವರು ಯಾರು? ಸಮಾಜದ ಭ್ರಷ್ಟತೆ, ಕೋಮುವಾದ, ಲಾಭಕೋರ
ತನದಲ್ಲಿ ಮುಳುಗಿ ಎದ್ದಿರುವ ವಿವಿಧ ಬಗೆಯ ಹಿರಿಯರು. ಮಕ್ಕಳು ಸಾಮಾನ್ಯವಾಗಿ ಏನನ್ನಾದರೂ ಕಲಿಯುವುದು ಮೊದಲು ಅನುಕರಣೆಯಿಂದ. ಈಗ ಸಮಾಜದಲ್ಲಿ ಅವರ ಸುತ್ತ ಇರುವ ಮಾದರಿಗಳನ್ನು ಗಮನಿಸಿದರೆ, ಭಾವಿ ನಾಗರಿಕರಾಗಿ ಅರಳಲಿರುವ ಮಕ್ಕಳನ್ನು ಈ ಮಾದರಿಗಳಿಂದ ದೂರ ಇಡುವುದು ಹೇಗೆ ಎಂದು ಜವಾಬ್ದಾರಿಯುತ ಸರ್ಕಾರ ಯೋಚಿಸಬೇಕಾಗಿತ್ತು.

ಈಗಾಗಲೇ ಶಾಲಾ ಪಠ್ಯದಲ್ಲಿ ಮೂರು ಭಾಷೆ, ನಾಲ್ಕು ವಿಷಯಗಳ ಹೊರೆ. ಆಟೋಟ, ಸಂಗೀತ, ನಾಟಕ, ಸಂವಹನದಂಥ ಕಲೆ ಕೌಶಲಗಳನ್ನು ಕಲಿಯಲು ಹೆಚ್ಚಿನ ಅವಕಾಶವಿಲ್ಲ. ಇರುವುದನ್ನೇ ಕಲಿಸಲು ಶಿಕ್ಷಕರ ಕೊರತೆ, ಗೌರವಯುತವಾಗಿ ಶೌಚಕ್ಕೂ ಹೋಗಲು ಸಾಧ್ಯವಾಗದಂಥ ಸ್ಥಿತಿ ಸಾವಿರಾರು ಶಾಲೆಗಳಲ್ಲಿ ಇದೆ. ಇದಕ್ಕೆ ಪರಿಹಾರ ಹುಡುಕುವುದಕ್ಕಿಂತ ನೀತಿಯನ್ನು ಕಲಿಸುವುದು ಸರ್ಕಾರದ ಆದ್ಯತೆಯಾದಂತೆ ತೋರುತ್ತದೆ.

ADVERTISEMENT

ಅವಷ್ಟಕ್ಕೇ ಬಿಟ್ಟರೆ ಮಕ್ಕಳು ಮನುಷ್ಯಸಹಜವಾದ ನೀತಿಯಿಂದ ಸೌಹಾರ್ದ ಹೊಂದಿರುತ್ತವೆ. ಸರ್ಕಾರವು ಪಟ್ಟಿ ಮಾಡಲು ನೋಡುವ ಎಲ್ಲಾ ಗ್ರಂಥಗಳ ಸಾರವನ್ನು ಹಿಂಡಿ ಕಲಿಸಲು ಹೊರಟಿರುವ ‘ನೀತಿ’ಗಳು ಯಾವುವು ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿಲ್ಲ. ಹೇಳಿದ್ದರೆ, ಅವು ಈಗ ಮಕ್ಕಳಲ್ಲಿ ಇಲ್ಲವೇ ಎಂಬ ವಿಮರ್ಶೆಯನ್ನು ಮಾಡಬಹುದಿತ್ತು. ಇದರ ಮೇಲೆ, ಶಾಲೆಗಳಲ್ಲಿ ಯಾವ ಧರ್ಮದ ಮಕ್ಕಳು ಶೇ 90ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೋ ಆ ಧರ್ಮದ ನೀತಿಗಳನ್ನು ಕಲಿಸಲಾಗುವುದು ಎಂದಿದ್ದಾರೆ. ಎಂದಾಗ ಇವರು ಏನನ್ನು ಕಲಿಸಲು ಹೊರಟಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಳವಾದ ಸಂಶೋಧನೆಯೇನೂ ಬೇಕಾಗಿಲ್ಲ.

ನಮ್ಮ ಧರ್ಮಗ್ರಂಥಗಳು ಆಯಾ ಕಾಲ, ದೇಶ, ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ತಮ್ಮ ಧರ್ಮವೇ ಶ್ರೇಷ್ಠ, ಅದನ್ನು ಅನುಸರಿಸುವುದೇ ಪರಮಕರ್ತವ್ಯವೆಂದು ಬೋಧಿಸುತ್ತವೆ. ಕೆಲವು ತಿಂಗಳಿಂದ ಶಿಕ್ಷಣ ಸಂಸ್ಥೆಯಿಂದಲೇ ಶುರುವಾದ ಧಾರ್ಮಿಕ ಅಸಹಿಷ್ಣುತೆಯ ಕಿಡಿ ಇಡೀ ರಾಜ್ಯವನ್ನು ಹೇಗೆ ಕಾಳ್ಗಿಚ್ಚಿನಂತೆ ಸುಡುತ್ತಿದೆ ಎಂಬುದು ನಮಗೆ ತಿಳಿದಿಲ್ಲವೇ?

ಇದ್ದವರನ್ನು ನೋಡಿ ಇಲ್ಲದವರು ಕಲಿಯಬೇಕು. ಎಲ್ಲರೊಂದಿಗೆ ಒಡನಾಡಿ ಸಂತೋಷವಾಗಿ ಆಡುವ,ನಲಿಯುವ, ಓದುವ ಮಕ್ಕಳನ್ನು ನೋಡಿ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರ್ಕಾರ ನೀತಿಯನ್ನು ಕಲಿಯುವುದು ಒಳ್ಳೆಯದು.

ನಮ್ಮದು ಮತಧರ್ಮ ನಿರಪೇಕ್ಷ ದೇಶ. ಸರ್ಕಾರ ಧಾರ್ಮಿಕ ನೀತಿಗಳ ಉಸಾಬರಿಗೆ ಹೋಗಬಾರದು. ಅದೇನಿದ್ದರೂ ಆಯಾ ಧರ್ಮದ ಸಮುದಾಯಗಳಿಗೆ ಬಿಟ್ಟಿದ್ದು, ಅವರು ಬೇಕಾದರೆ ಮಾಡಿಕೊಳ್ಳಲಿ. ಶಾಲೆಗಳನ್ನಾದರೂ ಇವೆಲ್ಲ ವಿಕೃತಿಗಳಿಂದ, ವಿಸ್ಮೃತಿಗಳಿಂದ ದೂರವಿರಿಸಬೇಕಿದೆ.

ಒಮ್ಮೆ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಿ ನೋಡಿ. ನಾವು ಹೇಗೆ ಬದುಕಬೇಕು ಎಂಬುದಕ್ಕೆ ಅದು ದಾರಿದೀಪವಾಗಿದೆ. ಈ ಉತ್ಕೃಷ್ಟ ಪ್ರಸ್ತಾವನೆಯ ಭಿತ್ತಿಚಿತ್ರವನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸಬೇಕು; ಪ್ರಸ್ತಾವನೆಯನ್ನು ಬೆಳಗಿನ ಸಮಾವೇಶದಲ್ಲಿ ಮಕ್ಕಳ ಕೈಲಿ ಹೇಳಿಸಬೇಕು ಎಂಬ ಪ್ರಗತಿಪರ ಹೆಜ್ಜೆಯನ್ನಿಟ್ಟ ಬಿಜೆಪಿ ನೇತೃತ್ವದ ಸರ್ಕಾರವೇ ತನ್ನದೇ ನೀತಿಯನ್ನು ಅವಹೇಳನ ಮಾಡುವುದು ಬೇಡ. ಮಕ್ಕಳು ಇದನ್ನು ಸಂಸ್ಕೃತ ಶ್ಲೋಕದಂತೆಯೋ ಅರಬ್ಬಿಯ ಆಯಾದಂತೆಯೋ ಅರ್ಥವಾಗದೆ ಯಾಂತ್ರಿಕ ಮಂತ್ರದಂತೆ ಹೇಳುವುದರ ಬದಲಿಗೆ ಅದರ ಅರಿವನ್ನು ಮೂಡಿಸಿಕೊಳ್ಳುವ ಪ್ರಯತ್ನವಾಗಬೇಕು. ಅದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಸಾಂವಿಧಾನಿಕ ಮೌಲ್ಯಗಳು ಜೀವಂತವಾಗಿರಬೇಕು. ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಸುವ ಹಲವಾರು ಬಗೆಯ ಯೋಜನೆಗಳನ್ನು ಜನಸಂಘಟನೆಗಳ ಸಹಯೋಗದೊಂದಿಗೆ ಮಾಡಬಹುದು.

ಈಗ ಸಮಾಜದಲ್ಲಿ ಹಬ್ಬಿರುವ ಕೋಮುದ್ವೇಷ, ಅಸಹಿಷ್ಣುತೆಯನ್ನು ನೋಡುವಾಗ, ಸಂವಿಧಾನ ಸಾಕ್ಷರತೆಯ ಆಂದೋಲನದಲ್ಲಿ ತೊಡಗಿರುವ ನಮ್ಮಂಥವರಿಗೆ ‘ಮಕ್ಕಳಿಗೆ, ಅವರ ಪೋಷಕರಿಗೆ, ಯುವಜನರಿಗೆ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ಹೇಳಿಕೊಡುವುದರಲ್ಲಿ ತುಂಬ ತಡ ಮಾಡಿಬಿಟ್ಟೆವೇನೋ’ ಎಂಬ ಪಶ್ಚಾತ್ತಾಪವಾಗುತ್ತದೆ. ಇದೇ ಪ್ರಾಮಾಣಿಕ ಪಶ್ಚಾತ್ತಾಪ ಶಿಕ್ಷಣ ಇಲಾಖೆಗೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು?.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.