ಪುರುಷರ ಹಕ್ಕುಗಳ ಬಗೆಗಿನ ಚರ್ಚೆಯು ಇಂದು ನಿನ್ನೆಯದಲ್ಲ. ಅದು ಹೊಸತೂ ಅಲ್ಲ. ಆದರೆ ಇತ್ತೀಚೆಗೆ ಅಲ್ಲಲ್ಲಿ ಕಂಡುಬರುತ್ತಿರುವ ಕೆಲವು ಕೌಟುಂಬಿಕ ಅಪರಾಧ ಪ್ರಕರಣಗಳು ಮತ್ತು ಪುರುಷರ ಆತ್ಮಹತ್ಯೆ ಪ್ರಕರಣಗಳು ಪುರುಷರ ಹಕ್ಕಿನ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿವೆ. 2024ರ ಏಪ್ರಿಲ್‌ನಲ್ಲಿ ಭಾರತೀಯ ಪುರುಷರ ಹಕ್ಕುಗಳ ಸಂಘದವರು ದೇಶದ ಕೆಲವು ನಗರಗಳಲ್ಲಿ ಪ್ರತಿಭಟಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಪುರುಷರ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ಮಹಿಳೆಯರನ್ನು ಕಡೆಗಣಿಸುತ್ತಿದ್ದೇವೆ ಎಂದಲ್ಲ. ಹೆಣ್ಣಿನ ಸ್ಥಾನಮಾನ ಮತ್ತು ಹಕ್ಕುಗಳ ಬಗ್ಗೆ ಮಾತನಾಡುವಾಗ ಗಂಡಿನ ಪ್ರಸ್ತಾಪ ಹಾಗೂ ಪುರುಷರಿಂದ ಮಹಿಳೆಯರು ಅನುಭವಿಸಬೇಕಾಗಿ ಬರುವ ಕಷ್ಟಗಳ ಬಗ್ಗೆ ಮಾತನಾಡುವಾಗ ಅಲ್ಲಿ ಹೆಣ್ಣಿನ ಮಾತು ಬರುವುದು ಸಹಜ.
ನೂರಾರು ವರ್ಷಗಳ ಕಾಲ ಹೆಣ್ಣಿನ ಮೇಲೆ ನಡೆದ ದಬ್ಬಾಳಿಕೆ, ಶೋಷಣೆ, ಅವಳನ್ನು ನಡೆಸಿಕೊಂಡ ರೀತಿಗೆ ಯಾವ ನಾಳೆಗಳೂ ನಮ್ಮನ್ನು ಕ್ಷಮಿಸಲಾರವು. ಅವಳ ರಕ್ಷಣೆ, ಅವಳಿಗೆ ಕೊಡಬೇಕಾದ ಹಕ್ಕುಗಳು, ಸ್ವಾತಂತ್ರ್ಯದಂತಹವುಗಳ ಬಗ್ಗೆ ನಾವು ಇನ್ನೂ ಸಮಾಧಾನಕರ ಅನ್ನಿಸುವಷ್ಟನ್ನು ಸಾಧಿಸಿಲ್ಲ ಎಂಬುದು ನಿಜಕ್ಕೂ ಖೇದಕರ. ಅದಿನ್ನೂ ಬಾಕಿ ಇರುವಾಗಲೇ ಪುರುಷರ ಹಕ್ಕುಗಳ ಬಗೆಗಿನ ಹೋರಾಟ ಶುರುವಾಗಿದೆ.
ಪುರುಷನನ್ನು ಅತಿಯಾಗಿ ಮೆರೆಸಿದ್ದೇ ಹೆಣ್ಣಿನ ಸ್ಥಾನಮಾನ ಕುಸಿದುಹೋಗಲು ಕಾರಣ. ಅದು ಎಷ್ಟರಮಟ್ಟಿಗೆ ಹೋಗಿದೆ ಅಂದರೆ, ಗಂಡು ಇರಬೇಕಾದದ್ದೇ ಹಾಗೆ ಅನ್ನುವಷ್ಟರ ಮಟ್ಟಿಗೆ ಅದು ರೂಪುಗೊಂಡಿದೆ.
‘ಪುರುಷ’ ಎಂಬುವನು ಹುಟ್ಟುವುದಿಲ್ಲ, ಅವನನ್ನು ರೂಪಿಸಲಾಗುತ್ತದೆ. ಗಂಡು ಮಗುವಿನ ಮೇಲೆ ‘ಪುರುಷ ನಡವಳಿಕೆ’ಗಳನ್ನು ಆರೋಪಿಸಲಾಗುತ್ತದೆ. ಅವನು ಅಳಬಾರದು, ಯಾವುದಕ್ಕೂ ಕುಗ್ಗಬಾರದು, ಹೆಚ್ಚು ಭಾವುಕನಾಗಬಾರದು, ಅವನಲ್ಲಿ ಒಂದು ಬಗೆಯ ದರ್ಪ ಇರಬೇಕು, ಹೆಚ್ಚು ದುಡಿಯಬೇಕು, ಹೆಚ್ಚು ಜವಾಬ್ದಾರಿ ಹೊರಬೇಕು, ಅವನು ಹೆಚ್ಚು ಕಷ್ಟಸಹಿಷ್ಣು, ಹೆಣ್ಣನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು... ಹೀಗೆ ಹಲವು ವಿಚಾರಗಳನ್ನು ಅವನ ಮೇಲೆ ಹೇರುತ್ತಾ ಹೋದಾಗ ಒಬ್ಬ ನಿರ್ಭಾವುಕ ‘ಪುರುಷ’ ರೂಪುಗೊಳ್ಳುತ್ತಾನೆ. ಅವನೊಳಗಿನ ಪುರುಷಾಹಂಕಾರ ಎದ್ದು ಕೂರುತ್ತದೆ.
ಅವನೊಳಗೆ ಈ ಬಗೆಯ ಮನೋಭಾವ ಬಿತ್ತುವವರು ಗಂಡಸರಷ್ಟೇ ಆಗಿರುವುದಿಲ್ಲ, ಹೆಂಗಸರೂ ಇರುತ್ತಾರೆ. ಹೆಂಡತಿಯನ್ನು ಹೇಗೆ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಅನ್ನುವ ಹಲವು ಪಾಠಗಳಲ್ಲಿ ಒಂದು ಪಾಠವು ಆ ಪತಿಯ ಅಮ್ಮನಿಂದಲೂ ಬಂದಿರಬಹುದು. ಗಂಡು ತನ್ನ ಈಗಿನ ‘ಪುರುಷ’ ಹೆಗ್ಗಳಿಕೆಯ ವ್ಯಕ್ತಿತ್ವವನ್ನು ಕಳೆದುಕೊಂಡರೆ ಅದು ಹೆಣ್ಣಿಗೆ ಇಷ್ಟವಾಗುವುದೇ?
ಈ ಪುರುಷ ಪ್ರಾಬಲ್ಯದಿಂದ ಹೆಣ್ಣು ಅನುಭವಿಸಿದ್ದು ಕಡಿಮೆಯೇನಲ್ಲ. ನೂರಾರು ವರ್ಷಗಳ ಕಾಲ ಹೆಣ್ಣು ಅನುಭವಿಸಿದ ನೋವಿಗೆ ಈಗ ಕಾನೂನಿನ ಮುಲಾಮು ಇದೆ. ಇಂತಹ ಕಾನೂನಿನ ದುರ್ಬಳಕೆ ಬಗ್ಗೆ ನಾವು ಈ ಸಂದರ್ಭದಲ್ಲಿ ಯೋಚಿಸಬೇಕಾಗುತ್ತದೆ.
ಉದಾಹರಣೆಗೆ ಹೇಳುವುದಾದರೆ, ಮಹಿಳೆಯು ಪತಿ ಹಾಗೂ ಪತಿಯ ಮನೆಯವರಿಂದ ದೌರ್ಜನ್ಯ ಅಥವಾ ಕ್ರೌರ್ಯಕ್ಕೆ ಒಳಗಾದಲ್ಲಿ ಶಿಕ್ಷಿಸುವ ಅವಕಾಶ ಇರುವ ಐಪಿಸಿ ಸೆಕ್ಷನ್ 498ಎ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಪದೇ ಪದೇ ವ್ಯಕ್ತಪಡಿಸಿದ ಕಳವಳವನ್ನು ಇಲ್ಲಿ ಪ್ರಸ್ತಾಪಿಸಬಹುದು. ದುರುದ್ದೇಶ ಪೂರಿತ ದೂರುಗಳ ಸಾಧ್ಯತೆ ಇರುವುದರಿಂದ ಪ್ರಕರಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವನ್ನು ಅದು ಒತ್ತಿ ಹೇಳಿದೆ. ಸುಮಾರು ಶೇ 20ರಷ್ಟು ಪ್ರಕರಣಗಳು ನಿಜವಲ್ಲದವು ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ನಿರಪರಾಧಿ ಪುರುಷರು ಸಾಮಾಜಿಕ ಕಳಂಕ, ನ್ಯಾಯ ಪ್ರಕ್ರಿಯೆಯಲ್ಲಿನ ವಿಳಂಬ ಹಾಗೂ ಮಾನಸಿಕ ಆತಂಕದಿಂದ ಬಳಲಬೇಕಾಗುತ್ತದೆ.
ಭಾರತೀಯ ಸಮಾಜದಲ್ಲಿ ಪುರುಷರು ‘ಕುಟುಂಬದ ಪೋಷಕ’ ಮತ್ತು ‘ಭಾವನಾತ್ಮಕವಾಗಿ ಬಲವಾದ’ ವ್ಯಕ್ತಿಯಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ. ಹಣಕಾಸಿನ ಸಮಸ್ಯೆ, ವೈವಾಹಿಕ ಸಂಬಂಧಗಳಲ್ಲಿ ಸಂವಹನದ ಕೊರತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಸಹಾಯ ಕೇಳಲು ಸಾಧ್ಯ ವಾಗದಿರುವುದು– ಇವೆಲ್ಲವೂ ಪುರುಷರನ್ನು ನಿರಾಶೆಗೊಳಿಸುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಾರ 2021ರಲ್ಲಿ ದೇಶದಲ್ಲಿ ದಿನಕ್ಕೆ ಸರಾಸರಿ 32 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಅನೇಕರು ವೈವಾಹಿಕ ಸಮಸ್ಯೆಗಳು ಅಥವಾ ಕಾನೂನು ಸಮಸ್ಯೆಗಳನ್ನು ಉಲ್ಲೇಖಿಸಿರುತ್ತಾರೆ.
‘ಬಿಡು, ಇಷ್ಟು ದಿನ ಹೆಣ್ಣು ಅನುಭವಿಸಲಿಲ್ಲವೇ?’ ಅನ್ನುವ ಪ್ರಶ್ನೆಯು ಈಗ ಪುರುಷ ಎದುರಿಸುವ ಕೆಲವು ಸಂಕಷ್ಟಗಳಿಗೆ ಉತ್ತರವಲ್ಲ. ಆಗ ಅವರು, ಈಗ ಇವರು ಅನ್ನುವುದು ಪರಿಹಾರವಲ್ಲ. ಗಂಡಾಗಲಿ, ಹೆಣ್ಣಾಗಲಿ ಸಂಕಟವಿಲ್ಲದೆ ಬದುಕಬೇಕು.
ನಾವು ಸ್ತ್ರೀಸಂವೇದನೆಯನ್ನು ಹೆಣ್ಣಿನಲ್ಲಿ ಹುಡುಕ ಬಯಸುತ್ತೇವೆ. ಅದು ಪುರುಷರಲ್ಲೂ ಮಹಿಳೆಯರಲ್ಲೂ ಇರಬೇಕು. ಹೆಣ್ಣಿನ ಬಗ್ಗೆ ಗಂಡಿನ ಎದೆಯಲ್ಲಿ ಬಿತ್ತಬೇಕಾದ ಅರಿವಿನ ಬಗ್ಗೆ ಯೋಚಿಸಬೇಕಾಗುತ್ತದೆ. ಹೆಣ್ಣಿನಲ್ಲಿ ಗಂಡಿನ ಕುರಿತಾದ ಚಿಂತನೆಯನ್ನು ರೂಪಿಸಬೇಕಾಗುತ್ತದೆ. ಈ ದಿಸೆಯಲ್ಲಿ ನಮ್ಮ ಶಿಕ್ಷಣ ಕ್ರಮ ಬಲವಾಗಬೇಕು. ಸ್ತ್ರೀ ಸಮಾನತೆ ಮತ್ತು ಪುರುಷ ಸಮಾನತೆ ಅನ್ನುವ ಬದಲು ನಾವು ಲಿಂಗ ಸಮಾನತೆಯ ಕಡೆ ನೋಡಬೇಕಾಗುತ್ತದೆ. ಪ್ರಕೃತಿಯ ದೃಷ್ಟಿಯಲ್ಲಿ ಯಾರೂ ಹೆಚ್ಚಲ್ಲ, ಕಡಿಮೆಯೂ ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.