ADVERTISEMENT

ಸಂಗತ | ಪೌರತ್ವ: ಏಕಪಕ್ಷೀಯ ವ್ಯಾಖ್ಯಾನ

ಸಾಮಾಜಿಕ ನ್ಯಾಯದ ರಾಜಕಾರಣವನ್ನು ಹೋರಾಟಗಾರರು ಮರೆತರೇ?

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 3:47 IST
Last Updated 9 ಜನವರಿ 2020, 3:47 IST
   

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಸಿಡಿದೆದ್ದಿರುವ ಯುವಜನ ಹಾಗೂ ಅವರಿಗೆ ನೈತಿಕ, ತಾತ್ವಿಕ ಬೆಂಬಲ ನೀಡುತ್ತಿರುವ ರಾಜಕೀಯ ಪಕ್ಷಗಳು, ಪ್ರಗತಿಪರ ಚಿಂತಕರು ಹಾಗೂ ಸಂಘಟನೆಗಳು ಎತ್ತಿರುವ ಮುಖ್ಯ ಆಕ್ಷೇಪವು ಭಿನ್ನಮತದ ಒಂದು ಟಿಪ್ಪಣಿ ಎಂದೇ ಭಾವಿಸಬಹುದು.

‘ನೆರೆಯ ಮೂರು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿ ಭಾರತಕ್ಕೆ ಓಡಿಬಂದಿರುವವರಿಗೆ ಪೌರತ್ವ ನೀಡುವ ಕಾನೂನಿಗೆ ಧರ್ಮವನ್ನೇ ಮಾನದಂಡವನ್ನಾಗಿ ಬಳಸಿರುವುದು ನಮ್ಮ ಜಾತ್ಯತೀತ ಸಂವಿಧಾನಕ್ಕೆ ಎಸಗಿದ ದ್ರೋಹ. ಈ ಕಾಯ್ದೆಯ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದು ಆ ಸಮುದಾಯವನ್ನು ಮೂಲೆಗುಂಪು ಮಾಡಬೇಕೆನ್ನುವ ಕೋಮುವಾದಿಗಳ ಹುನ್ನಾರ...’ ಎಂಬುದು ಸಿಎಎ ವಿರೋಧಿ ಹೋರಾಟಗಾರರ ಆರೋಪ. ಈ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯ ಮುಸ್ಲಿಮರು ಮತ್ತಷ್ಟು ರಾಜಕೀಯ ತಬ್ಬಲಿತನ ಹಾಗೂ ಏಕಾಂಗಿತನ ಅನುಭವಿಸಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿರುವಂತಿದೆ.

ಇದೇನಿದು, ಸಂವಿಧಾನದಡಿ ಜಾರಿಗೊಳಿಸಲಾದ ಶಾಸನಗಳ ಪೈಕಿ ‘ಧರ್ಮ’ ಅಥವಾ ಧಾರ್ಮಿಕ ಘಟಕವೆಂದು ಪರಿಗಣಿಸಬಹುದಾದ ಜಾತಿಯನ್ನು ಮಾನದಂಡವನ್ನಾಗಿ ಬಳಸಿರುವುದು ಇದೇ ಮೊದಲ ಸಲವೇ ಎಂಬ ಪ್ರಶ್ನೆಯನ್ನು ಯಾರೂ ಎತ್ತಿಕೊಳ್ಳುತ್ತಿಲ್ಲ. ಇದುವರೆಗೂ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಶೈಲಿಯ ಬಗ್ಗೆ ನಿರಂತರವಾಗಿ ಒಂದು ಬಗೆಯ ಅಸಹನೆಯನ್ನೇ ರೂಢಿಸಿಕೊಂಡು ಬಂದಿರುವ ಮನಸ್ಸುಗಳಿಗೆ, ಪ್ರಸಕ್ತ ಹೋರಾಟವೇ ಅವರ ಪುನಶ್ಚೇತನಕ್ಕೆ ಅವಕಾಶ ಆಗಿರುವಂತಿದೆ.

ADVERTISEMENT

ನಮ್ಮ ಸಂವಿಧಾನದ ವಿಧಿ-15ರಲ್ಲಿ ಯಾವುದೇ ಪ್ರಜೆಗೂ ಧರ್ಮ, ಜಾತಿ, ಭಾಷೆ ಅಥವಾ ಆರ್ಥಿಕ ಕಾರಣಗಳನ್ನಾಧರಿಸಿ ತಾರತಮ್ಯ ಮಾಡತಕ್ಕದ್ದಲ್ಲ ಎಂದು ಪ್ರಭುತ್ವಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಇದೇ ವಿಧಿಯ ಉಪಬಂಧಗಳ ಅಡಿಯಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಉನ್ನತ ಶಿಕ್ಷಣ, ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಜಾತಿ, ಜನಾಂಗ ಅಥವಾ ಪಂಗಡವೇ ಮುಖ್ಯ ಮಾನದಂಡವಾಗುತ್ತದೆ ವಿನಾ ಬಡತನ ಅಥವಾ ಆರ್ಥಿಕ ಹಿಂದುಳಿದಿರುವಿಕೆ ಅಲ್ಲವೇ ಅಲ್ಲ. ಇದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಬಲೀಕರಣಕ್ಕಾಗಿ ರೂಪಿಸಲಾದ ಅನುಬಂಧಗಳಲ್ಲೂ ಜಾತಿ ಅಥವಾ ಪಂಗಡಗಳೆಂಬ ಘಟಕಗಳನ್ನೇ ಮಾನದಂಡವಾಗಿ ಬಳಸಿಕೊಳ್ಳದಿರುವುದು ಸಾಧ್ಯವೇ?

ಹೀಗೆಯೇ ಧಾರ್ಮಿಕ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಸಾಮಾನ್ಯ ನಿಯಮಾವಳಿಗಳಿಂದ ವಿನಾಯಿತಿ ನೀಡುವ ಹಾಗೂ ಅವುಗಳಿಗೆ ವಿಶೇಷ ಸವಲತ್ತು ಕಲ್ಪಿಸುವ ನೀತಿಯನ್ನು ರೂಪಿಸುವಾಗಲೂ ‘ಧರ್ಮ’ವೇ ಖಚಿತ ಮಾನದಂಡ ಆಗುತ್ತದಲ್ಲವೇ? ಈ ವಾಸ್ತವವನ್ನು ಗಮನದಲ್ಲಿ ಇರಿಸಿಕೊಂಡೇ ‘ಸೋಷಿಯಲ್ ಎಂಪವರ್‌ಮೆಂಟ್’ (ಸಾಮಾಜಿಕ ಸಬಲೀಕರಣ) ಮತ್ತು ‘ಪಾಸಿಟಿವ್ ಡಿಸ್‍ಕ್ರಿಮಿನೇಶನ್’ (ಸಕಾರಾತ್ಮಕ ತಾರತಮ್ಯ) ಎಂಬ ಪರಿಕಲ್ಪನೆಗಳನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಇದನ್ನೇ ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಸಾಮಾಜಿಕ ನ್ಯಾಯದ ರಾಜಕಾರಣವನ್ನಾಗಿ ಅಳವಡಿಸಿಕೊಂಡು ಬರಲಾಗಿದೆಯಲ್ಲವೇ?

ಇದೀಗ ಸಿಎಎ ವ್ಯಾಪ್ತಿಯಿಂದ ಮುಸ್ಲಿಂ ನಿರಾಶ್ರಿತರನ್ನು ಹೊರಗಿಟ್ಟಿರುವುದು ಅನ್ಯಾಯ ಎಂದು ಹೇಳುತ್ತಿರುವವರೆಲ್ಲಾ, ಸಾಮಾಜಿಕ ನ್ಯಾಯದ ಕಾನೂನುಗಳನ್ನು ಜಾರಿಗೊಳಿಸುವಾಗ ನಿರ್ದಿಷ್ಟ ಸಮುದಾಯಗಳನ್ನು ‘ಒಳಗೊಳ್ಳುವ’ ಹಾಗೂ ಇನ್ನಿತರರನ್ನು ‘ಹೊರಗಿಡುವ’ ಪ್ರಕ್ರಿಯೆ ಒಂದು ಚಾರಿತ್ರಿಕ ಅನಿವಾರ್ಯ ಎಂದೇಕೆ ಅರ್ಥಮಾಡಿಕೊಳ್ಳುತ್ತಿಲ್ಲ?

ಅಂದಹಾಗೆ, ಭಾರತದ ವಿಭಜನೆಯಿಂದ ಮೊದಲು ಸೃಷ್ಟಿಯಾದ ಪಾಕಿಸ್ತಾನವಾಗಲೀ ಹಾಗೂ ಮೂಲ ಪಾಕಿಸ್ತಾನದ ವಿಭಜನೆಯಿಂದ ಉದ್ಭವಿಸಿದ ಬಾಂಗ್ಲಾದೇಶವಾಗಲೀ ತಮ್ಮನ್ನು ತಾವೇ ಇಸ್ಲಾಮಿಕ್ ಗಣರಾಜ್ಯಗಳೆಂದು ಘೋಷಿಸಿಕೊಂಡಿರುವುದಕ್ಕೆ ಭಾರತದ ಮುಸ್ಲಿಮರಂತೂ ಕಾರಣರಲ್ಲ. ಶಾಂತಿಪ್ರಿಯ ನಾಡಾಗಿದ್ದ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಎಂಬ ಅಸುರೀ ಶಕ್ತಿಯೊಂದು ತಲೆಯೆತ್ತುತ್ತದೆ ಎಂದು ಈಗ್ಗೆ ಎರಡು ದಶಕಗಳ ಹಿಂದೆ ಯಾರಾದರೂ ಊಹಿಸಲು ಸಾಧ್ಯವಿತ್ತೇ? ಈ ಮೂರೂ ರಾಷ್ಟ್ರಗಳಲ್ಲಿ ಹಿಂದೂಗಳೂ ಸೇರಿದಂತೆ ಅನ್ಯಧರ್ಮಗಳ ಪ್ರಜೆಗಳನ್ನು ನಿರಂತರವಾಗಿ ಚಿತ್ರಹಿಂಸೆಗೆ ಗುರಿಮಾಡಿ, ಪ್ರಾಣರಕ್ಷಣೆಗೋಸ್ಕರ ಭಾರತಕ್ಕೆ ಓಡಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಭಾರತದ ಹಿಂದೂಗಳು ಕಾರಣರಲ್ಲ. ಹೀಗಾಗಿ ವಿವಿಧ ಕಾಲಘಟ್ಟಗಳಲ್ಲಿ ನೆರೆಹೊರೆಯ ಈ ರಾಷ್ಟ್ರಗಳಿಂದ ಹರಿದುಬಂದ ನಿರಾಶ್ರಿತರು ಅಥವಾ ಅಕ್ರಮ ವಲಸಿಗರಲ್ಲಿ ಹೆಚ್ಚಿನವರು ಮುಸ್ಲಿಮೇತರರೇ ಆಗಿದ್ದುದು ಸಹಜವೇ ಆಗಿತ್ತು.

ಹೀಗಿರುವಾಗ, ಸಿಎಎ ವ್ಯಾಪ್ತಿಯಿಂದ ಮುಸ್ಲಿಂ ವಲಸಿಗರನ್ನು ಮಾತ್ರವೇ ಹೊರಗಿಟ್ಟಿರುವ ಬಗ್ಗೆ ಈ ಪರಿ ಪ್ರತಿರೋಧದ ಅಗತ್ಯವಿತ್ತೇ? ಸಾಮಾಜಿಕ ನ್ಯಾಯದಡಿ ವಿವಿಧ ಬಗೆಯ ಮೀಸಲಾತಿ ಕಲ್ಪಿಸುವುದಕ್ಕೆ, ಬಡತನ ನಿವಾರಣೆಗೆ ಸಂಬಂಧಿಸಿದ ಸಾರ್ವಜನಿಕ ವಾಗ್ವಾದಗಳಲ್ಲಿ ಮುಸ್ಲಿಂ ಸಮುದಾಯವನ್ನು ಬಹುಮಟ್ಟಿಗೆ ಹೊರಗಿಟ್ಟಿದ್ದೇವೆ.ಅದರ ಬಗ್ಗೆ ನಾವು ಈಗ ಆತ್ಮವಿಮರ್ಶೆ ಮಾಡಿಕೊಳ್ಳುವ ಸಂದರ್ಭ ಬಂದಿದೆ. ದುರದೃಷ್ಟವಶಾತ್ ಬಹುಸಂಖ್ಯಾತ ಹಿಂದೂಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸಲ್ಮಾನರ ನಡುವೆ ಕಾಯಂ ಆಗಿ ಶತ್ರುಭಾವವನ್ನೇ ಮುಂದುವರಿಸಿಕೊಂಡು ಹೋಗಲು ಬಯಸುವ ಶಕ್ತಿಗಳೇ ವರ್ತಮಾನದಲ್ಲಿ ಮೇಲುಗೈ ಪಡೆದಿರುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.