ADVERTISEMENT

ಕೇಂದ್ರ ಬಜೆಟ್‌: ವಿಭಿನ್ನ ಮಾದರಿಗಳು

ಕೇಂದ್ರ ಬಜೆಟ್‌ ಮಂಡಿಸಿರುವ ಹಲವು ಅರ್ಥ ಸಚಿವರು, ಪ್ರತಿ ಬಾರಿಯೂ ತಮ್ಮದೇ ಆದ ವಿಭಿನ್ನ ಮಾದರಿ ಅನುಸರಿಸಿದ್ದಾರೆ

ಡಾ.ಜಿ.ವಿ.ಜೋಶಿ
Published 29 ಜನವರಿ 2019, 20:15 IST
Last Updated 29 ಜನವರಿ 2019, 20:15 IST
ಸಂಗತ
ಸಂಗತ   

ಬಜೆಟ್ ನೀತಿಯಲ್ಲಿ ವರ್ಷ ಕಳೆದಂತೆ ಬಹಳಷ್ಟು ಬದಲಾವಣೆಗಳಾಗಿವೆ. ಬೇಡವಾದ ಪ್ರಯೋಗಗಳು ಬಜೆಟ್ ನೀತಿಯ ಅಡಿಯಲ್ಲಿ ನಡೆದುಹೋಗಿವೆ.ದೀರ್ಘಕಾಲೀನ ಪರಿಣಾಮವುಳ್ಳ ಅಭಿವೃದ್ಧಿ ಪ್ರಕ್ರಿಯೆಗೆ ಸಂಬಂಧಿಸಿದ ಬಂಡವಾಳ ಖಾತೆ ಮತ್ತು ಸಾಮಾನ್ಯ ಆಡಳಿತದ ವೆಚ್ಚಗಳನ್ನು ಭರಿಸುವ ಚಾಲ್ತಿ ಖಾತೆ– ಹೀಗೆ ಎರಡು ಖಾತೆಗಳಿದ್ದು ನಿಧಿಗಳನ್ನು (ಫಂಡ್ಸ್) ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಬೇಕಾಬಿಟ್ಟಿಯಾಗಿ ವರ್ಗಾಯಿಸುವಂತಿಲ್ಲ. ಈ ನಿಯಮ ವಿತ್ತೀಯ ಶಿಸ್ತು ಕಾಪಾಡಿಕೊಳ್ಳಲು ಅವಶ್ಯ.

ಪ್ರಣವ್ ಮುಖರ್ಜಿ ಅವರು ಇಂದಿರಾ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಈ ನಿಯಮವನ್ನು ಗಾಳಿಗೆ ತೂರಿದ್ದರು. ಕೇವಲ ವಿತ್ತ ಸಚಿವಾಲಯದ ಅನುಕೂಲಕ್ಕಾಗಿ ಬಂಡವಾಳ ಖಾತೆಯಿಂದ ಚಾಲ್ತಿ ಖಾತೆಗೆ ನಿಧಿಗಳನ್ನು ವರ್ಗಾಯಿಸಿದ್ದರು. ಆರ್ಥಿಕ ತಜ್ಞ ಪಿ.ಆರ್. ಬ್ರಹ್ಮಾನಂದ, ಇದು ವಿತ್ತೀಯ ಅಶಿಸ್ತಿಗೆ ದಾರಿಯಾಗಲಿದೆ ಎಂದು ಎಚ್ಚರಿಸಿದ್ದರು. ಇಂಥ ಅಶಿಸ್ತಿನ ಪರಿಪಾಟಗಳು ಬೆಳೆದು ದೇಶದ ಆರ್ಥಿಕತೆಯಲ್ಲಿ ವಿಪ್ಲವಗಳಾದವು. 1991ರಲ್ಲಿ ತ್ರಿಕರಣಗಳಿಗೆ (ಜಾಗತೀಕರಣ, ಉದಾರೀಕರಣ, ಖಾಸಗೀಕರಣ) ಅದು ತೆರೆದುಕೊಳ್ಳುವಂತಾಯಿತು. ಸಮಾಜವಾದದ ಜೋಗುಳ ಹಾಡುತ್ತಿದ್ದ ಕಾಂಗ್ರೆಸ್ ಪಕ್ಷವೇ ದಾರಿ ತಪ್ಪಿದ ಬಜೆಟ್ ನೀತಿಯ ಪರಿಣಾಮವಾಗಿ, ಮಾರುಕಟ್ಟೆ ಆಧಾರಿತ ಆರ್ಥಿಕ ಸುಧಾರಣೆಗಳ ಜಾಗಟೆ ಬಾರಿಸಲು ಪ್ರಾರಂಭಿಸುವಂತಾಗಿತ್ತು.

ಆರ್ಥಿಕ ಸುಧಾರಣೆ ಎಂದಾಕ್ಷಣ ನೆನಪಾಗುವುದು, ಆಗಷ್ಟೇ ಬಯಸದೇ ಬಂದ ಭಾಗ್ಯದ ಛತ್ರದಡಿಯಲ್ಲಿ ನಿಂತ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್ ಮತ್ತು 1991ರ ಜುಲೈನಲ್ಲಿ ಸಂಸತ್ತಿನಲ್ಲಿ ಅವರು ಮಂಡಿಸಿದ ಚಾರಿತ್ರಿಕ ಬಜೆಟ್. ತ್ರಿಕರಣಗಳನ್ನು ಎಲ್ಲೂ ಹೆಸರಿಸದೆ, ಅವುಗಳಿಗೆ ಅರ್ಥವ್ಯವಸ್ಥೆಯನ್ನು ಅಣಿಗೊಳಿಸುವ ಬಜೆಟ್ ಮಂಡಿಸಿ ಅವರು ಮಿಂಚಿದರು. ವಿಕ್ಟರ್ ಹ್ಯೂಗೊನನ್ನು ಉದ್ಧರಿಸುತ್ತ ‘ಕಾಲಕ್ಕೆ ಸರಿಯಾಗಿ ಮೂಡಿಬಂದ ಬದಲಾವಣೆಯನ್ನು ಯಾವ ಶಕ್ತಿಯೂ ತಡೆಯಲಸಾಧ್ಯ’ ಎಂದು ಹೇಳಿ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ವಿಭಿನ್ನತೆಯನ್ನು ತೋರಿಸಿದ್ದರು.

ADVERTISEMENT

2004ರ ನಂತರ, ಯುಪಿಎ ಮೊದಲ ಅವಧಿಯಲ್ಲಿ ಸಿಂಗ್‌ ಅವರ ಸಂಪುಟದಲ್ಲಿ ಮತ್ತೆ ವಿತ್ತ ಸಚಿವರಾದ ಪ್ರಣವ್, ಬಜೆಟ್ ತಂತ್ರಗಾರಿಕೆಗೆ ಹೆಸರಾಗಿದ್ದರು. ಚಾಣಾಕ್ಷರಾಗಿದ್ದ ಅವರು ತಮ್ಮ ಬಜೆಟ್ ಪ್ರಸ್ತಾವಗಳನ್ನು ಸಮರ್ಥಿಸಿಕೊಳ್ಳಲು ಸಂದರ್ಭೋಚಿತವಾಗಿ ಕೌಟಿಲ್ಯನ ಶ್ಲೋಕಗಳನ್ನು ಸ್ಮರಿಸಿಕೊಂಡಿದ್ದರು. 2004ರ ಜುಲೈನಲ್ಲಿ ಜಾರಿಗೆ ಬಂದ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಕಾನೂನಿನಲ್ಲಿ ತಿಳಿಸಿದ ರೀತಿಯಲ್ಲಿ ರೆವಿನ್ಯೂ ಕೊರತೆ ತಗ್ಗಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಪಿ.ಚಿದಂಬರಂ ರೂಪಿಸಿದ್ದ ತೆರಿಗೆ ಪ್ರಸ್ತಾವಗಳಲ್ಲಿನ ‘ಚಿದಂಬರ ರಹಸ್ಯ’ಗಳು ಅವು ಜಾರಿಗೆ ಬಂದ ನಂತರವೇ ಬಯಲಾಗುತ್ತಿದ್ದವು. ರಾಷ್ಟ್ರಪತಿ ಭವನ ಸೇರಿದ ಪ್ರಣವ್ ಅವರ ಉತ್ತರಾಧಿಕಾರಿಯಾಗಿ ಮಾಡಿದ 2013-14ರ ಬಜೆಟ್ ಭಾಷಣದ ಪ್ರಾರಂಭದಲ್ಲಿ, ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿ ರಾಜಕೀಯದಲ್ಲಿ ಮೇಲೇರಿ ಯುಪಿಎಗೆ ಸವಾಲೊಡ್ಡುತ್ತಿದ್ದ ಮೋದಿ ಅವರನ್ನಾಗಲೀ, ಗುಜರಾತನ್ನಾಗಲೀ ಹೆಸರಿಸದೆ, ಗುಜರಾತ್‌ನ ಅಭಿವೃದ್ಧಿ ಮಾದರಿಯ ಮೇಲೆ ದಾಳಿ ಮಾಡಿ ಚಿದಂಬರಂ ವಿಭಿನ್ನತೆ ಪ್ರದರ್ಶಿಸಿದ್ದರು.

ಬಜೆಟ್ ನೀತಿಯು ವಿಭಿನ್ನತೆಯ ಬುಗ್ಗೆಯಾಗಿದ್ದು ಅರುಣ್‌ ಜೇಟ್ಲಿ ಅರ್ಥ ಸಚಿವರಾದ ಮೇಲೆ. 2014ರ ಜುಲೈನಲ್ಲಿ ಜೇಟ್ಲಿ ಅವರಿಂದ ಮೊದಲನೆಯ ಬಜೆಟ್ ಮಂಡನೆ. ಪ್ರಥಮ ಬಾರಿಗೆ ಬಜೆಟ್ ಭಾಷಣದಲ್ಲಿ ವಿತ್ತೀಯ ಕೊರತೆಯನ್ನು ಎಫ್‌ಆರ್‌ಬಿಎಂ ಕಾನೂನಿನ ಕಕ್ಷೆಯಲ್ಲಿ 2016-17ರ ಹೊತ್ತಿಗೆ ಜಿಡಿಪಿಯ ಶೇ 3ಕ್ಕೆ ಇಳಿಸುವ ನೀಲನಕ್ಷೆ ಸಂಸತ್ತಿನ ಮುಂದೆ ಬಂತು. ನೀಲನಕ್ಷೆಯ ಗುರಿ ಪೂರ್ಣ ಈಡೇರಿಲ್ಲವಾದರೂ ವಾಸ್ತವ ಅದರ ಸಮೀಪದಲ್ಲೇ ಇದೆ. ಈಗ ಫೆಬ್ರುವರಿ 1, ಕೇಂದ್ರ ಬಜೆಟ್ ದಿನ ಎಂದು ನಿಖರವಾಗಿ ಹೇಳಬಹುದು.

2017-18ನೇ ಸಾಲಿನ ಬಜೆಟ್ ಮಂಡನೆಯಾದ ನಂತರ ಎರಡು ಪ್ರಮುಖ ಬದಲಾವಣೆಗಳಾಗಿವೆ. 1) 92 ವರ್ಷ ಹಳೆಯದಾದ ಯೋಜನೆ ಮತ್ತು ಯೋಜನೇತರ ವೆಚ್ಚಗಳ ಪರಿಕಲ್ಪನೆಗೆ ಜೇಟ್ಲಿ ವಿದಾಯ ಹೇಳಿ ಅಭಿವೃದ್ಧಿ ಪರಿಕಲ್ಪನೆಯ ಆಧಾರದಲ್ಲಿ ಸರ್ಕಾರಿ ವೆಚ್ಚಗಳನ್ನು ವರ್ಗೀಕರಿಸುವ ಪರಿಪಾಟ ಪ್ರಾರಂಭಿಸಿದ್ದಾರೆ. 2) ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ಅಂತರ್ಗತಗೊಳಿಸಲಾಗಿದೆ. ಹೀಗಾಗಿ ಸಾಮಾನ್ಯ ಬಜೆಟ್‌ನ ಮಹತ್ವ ಸ್ವಲ್ಪ ಜಾಸ್ತಿಯಾಗಿದೆ.

ಜಿಎಸ್‌ಟಿ ಜಾರಿಯಾದ ಮೇಲೆ ಅನೇಕ ಪರೋಕ್ಷ ತೆರಿಗೆಗಳು ಕೇಂದ್ರ ಬಜೆಟ್‌ನ ಪರಿಧಿಯಿಂದ ಹೊರಬಿದ್ದಿವೆ. ಜಿಎಸ್‌ಟಿ ಜಾರಿಗೆ ಮೊದಲು ಪರೋಕ್ಷ ತೆರಿಗೆಗಳ ಮೇಲೆ ಬಜೆಟ್ ಪ್ರಭಾವ ಜೋರಾಗಿತ್ತು. ಈಗ ಜಿಎಸ್‌ಟಿ ಮಂಡಳಿಯ ನಿರ್ಧಾರದ ಅನ್ವಯ ಬದಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆಗಳ ಪ್ರಭಾವ ಬಜೆಟ್ ಮೇಲೆ ಆಗುತ್ತಿದೆ. ಈ ದೃಷ್ಟಿಯಿಂದ ನೋಡಿದರೆ ಕೇಂದ್ರ ಬಜೆಟ್‌ನ ಮಹತ್ವ ಸ್ವಲ್ಪ ಕಡಿಮೆಯಾಗಿದೆ.

ಈಗ ಮಂಡನೆಯಾಗಲಿರುವ ಮುಂಗಡಪತ್ರ ತಾತ್ವಿಕವಾಗಿ ಮಧ್ಯಂತರ ಬಜೆಟ್ ಆಗಿದ್ದರೂ, ಅದನ್ನು ಕೆಲವು ಮಹತ್ವದ ಪ್ರಸ್ತಾಪಗಳುಳ್ಳ ಪೂರ್ಣ ಪ್ರಮಾಣದ ಬಜೆಟ್ಟನ್ನಾಗಿ ಪರಿವರ್ತಿಸುವ ಸುಳಿವು ಜೇಟ್ಲಿಯವರಿಂದ ಬಂದಿದ್ದು ವಿಭಿನ್ನತೆ ಮುಂದುವರಿಯಲಿದೆ. ಜೇಟ್ಲಿ ಚಿಂತನೆಯುಳ್ಳ ಬಜೆಟ್ ಅನ್ನು ಪೀಯೂಷ್ ಗೋಯಲ್ ಮಂಡಿಸುವಂತಾಗಿದ್ದು ಕೂಡ ವಿಭಿನ್ನತೆಯೆಂದೇ ಭಾವಿಸಬೇಕಾದ ದುರ್ಧರ ಪ್ರಸಂಗ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.