ADVERTISEMENT

ಸಂಗತ: ನಿಷ್ಠುರ ಕಾವ್ಯಧ್ವನಿಗೆ ಪ್ರಶಸ್ತಿಯ ಗರಿ

ಕಾವ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅಮೆರಿಕದ ಕವಯಿತ್ರಿ ಲೂಯಿಸ್ ಗ್ಲಕ್, ಈ ವರ್ಷ ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಶೋಭೆ ತಂದಿದ್ದಾರೆ

ಜೀವಾ ಜ್ಞಾನಜ್ಯೋತಿ
Published 14 ಅಕ್ಟೋಬರ್ 2020, 19:31 IST
Last Updated 14 ಅಕ್ಟೋಬರ್ 2020, 19:31 IST
ಕವಯಿತ್ರಿ ಲೂಯಿಸ್ ಗ್ಲಕ್
ಕವಯಿತ್ರಿ ಲೂಯಿಸ್ ಗ್ಲಕ್   

‘ಜೀವನ ಮತ್ತು ಕಾವ್ಯದ ನಡುವಿನ ವ್ಯತ್ಯಾಸವೆಂದರೆ, ಕಾವ್ಯವು ಮನಸ್ಸನ್ನು ಗಾಢವಾಗಿ ಕಾಡುವ ಶಕ್ತಿ ಹೊಂದಿದ್ದರೆ, ಅದು ಬದುಕನ್ನೂ ಮೀರಿ ಉಳಿಯಬಹುದು’. ಇದು, ಈ ವರ್ಷ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಅಮೆರಿಕದ ಕವಯಿತ್ರಿ ಲೂಯಿಸ್ ಗ್ಲಕ್ ಅವರ ಕವಿತೆಯ ಸಾಲು. ‘ಅವರ ನಿಷ್ಠುರವಾದ ಕಾವ್ಯಧ್ವನಿಯು ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕ ವಾಗಿಸುತ್ತದೆ’ ಎಂದು, ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ನೊಬೆಲ್ ಸಮಿತಿ ಹೇಳಿದೆ.

77 ವರ್ಷ ವಯಸ್ಸಿನ ಗ್ಲಕ್ ಅವರನ್ನು ‘ಆತ್ಮಚರಿತ್ರೆಯ ಕವಿ’ಯೆಂದೇ ಗುರುತಿಸಲಾಗುತ್ತದೆ. ಯಾಕೆಂದರೆ, ಅವರ ಕಾವ್ಯದಲ್ಲಿ ಪ್ರಧಾನವಾಗಿ, ಭಾವನೆಗಳ ತೀವ್ರ ತೊಳಲಾಟ, ವೈಯಕ್ತಿಕ ಜೀವನಾನುಭವ, ಆಧುನಿಕ ಜೀವನದ ವಿಮರ್ಶೆ ಮತ್ತು ಪ್ರಕೃತಿಯ ಆತ್ಮೀಯ ಚಿತ್ರಣ ಹೆಚ್ಚಾಗಿ ಕಂಡುಬರುತ್ತವೆ.

ನೊಬೆಲ್ ಪ್ರಶಸ್ತಿ ಪ್ರಕಟವಾದ ತಕ್ಷಣ ದೂರವಾಣಿ ಕರೆ ಮಾಡಿದ ಸಂದರ್ಶಕನಿಗೆ ಅವರ ಮೊದಲ ಪ್ರತಿಕ್ರಿಯೆ ಹೀಗಿತ್ತು: ‘ನನಗೇನೂ ವಿಶೇಷ ಅನುಭವ ಆಗುತ್ತಿಲ್ಲ. ಆದರೆ, ಈ ಪ್ರಶಸ್ತಿಯಿಂದಾಗಿ ಬಹುಶಃ ನನ್ನ ಸ್ನೇಹಿತರೆಲ್ಲರನ್ನೂ ಕಳೆದುಕೊಳ್ಳಲಿದ್ದೇನೆ. ಯಾಕೆಂದರೆ, ನನ್ನ ಸ್ನೇಹಿತರೆಲ್ಲ ಸಾಹಿತಿಗಳು’. ಜೀವನದ ಬಹುಭಾಗ ಒಂಟಿಯಾಗಿಯೇ ಕಳೆದಿರುವ ಗ್ಲಕ್, ತಮ್ಮ ಸಾಹಿತ್ಯ ಕೃಷಿಗಾಗಿ ಬಂದಿರುವ ಅತ್ಯುನ್ನತ ಪ್ರಶಸ್ತಿಗೆ ತೋರಿಸಿರುವ ನಿರ್ಲಿಪ್ತತೆ, ಅವರಜೀವನಾನುಭವವನ್ನು, ಅವರ ಕಷ್ಟದ ಹಾದಿ ಮತ್ತು ಅದನ್ನು ಏಕಾಂಗಿಯಾಗಿ ನಿಭಾಯಿಸಿದ ರೀತಿಯನ್ನು ಪ್ರತಿಬಿಂಬಿಸುತ್ತದೆ.

ADVERTISEMENT

ಗ್ಲಕ್‌ ಅವರ ಪೋಷಕರು ಜೀವನದ ನೆಲೆ ಹುಡುಕುತ್ತಾ ಅಮೆರಿಕಕ್ಕೆ ಬಂದ ವಲಸಿಗ ಯಹೂದಿಗಳಾಗಿದ್ದರು. ಶಾಲಾ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದ ಗ್ಲಕ್, ಅನಿವಾರ್ಯವಾಗಿ ಏಳು ವರ್ಷಗಳ ಕಾಲ ಮನೆಯಲ್ಲಿದ್ದು ಚಿಕಿತ್ಸೆ ಪಡೆಯಬೇಕಾಯಿತು. ಆಮೇಲೆ, ಉನ್ನತ ಶಿಕ್ಷಣಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದರೂ ಪದವಿ ಪಡೆಯಲಾಗಲಿಲ್ಲ.

ಗ್ಲಕ್‌ ಅವರ ಸಾಹಿತ್ಯ ಜೀವನಕ್ಕೆ ಪ್ರೇರಣೆಯನ್ನು ಹುಡುಕಿದರೆ, ಅವರ ತಂದೆಗೆ ಬರಹಗಾರನಾಗ ಬೇಕೆಂಬ ಹೆಬ್ಬಯಕೆ ಇತ್ತು. ಆದರೆ, ಸಂಸಾರ ನಿರ್ವಹಣೆಗಾಗಿ ವ್ಯಾಪಾರಕ್ಕೆ ಇಳಿಯಬೇಕಾಯಿತು. ಸ್ವತಃ ಪದವೀಧರೆಯಾಗಿದ್ದ ತಾಯಿ ಮತ್ತು ಸಾಹಿತ್ಯದ ಅಭಿರುಚಿಯಿದ್ದ ತಂದೆ ಇವರಿಗೆ ಬಾಲ್ಯದಲ್ಲಿ ಗ್ರೀಕ್ ಕಥೆಗಳನ್ನು ಹೇಳುತ್ತಾ ಕಲ್ಪನೆಯ ಗರಿಗೆದರಿಸಿದರು. ಇದರಿಂದ ಸ್ಫೂರ್ತಿಗೊಂಡ ಗ್ಲಕ್, ಚಿಕ್ಕ ವಯಸ್ಸಿನಲ್ಲಿಯೇ ಕವನ ಬರೆಯಲು ಪ್ರಾರಂಭಿಸಿದರು. ಗ್ಲಕ್‌ಗೆ ಯೌವನದಲ್ಲಿ ಸಿನಿಮಾ ನಟಿಯಾಗಬೇಕೆಂಬ ಕನಸಿತ್ತು. ಆಗ ತಾಯಿ ಬಹಳ ಬೇಸರಗೊಂಡು ಹೇಳಿದ್ದರು, ‘ನೀನು ಎಷ್ಟು ಚೆನ್ನಾಗಿ ಬರೆಯುತ್ತಿ. ಅದನ್ನು ಬಿಟ್ಟು ಸಿನಿಮಾ ಯಾಕೆ?’ ಆಮೇಲೆ, ಗ್ಲಕ್‌ ನಿಧಾನವಾಗಿ ಅರ್ಥ ಮಾಡಿಕೊಂಡು ಪುನಃ ಸಾಹಿತ್ಯದತ್ತ ತೊಡಗಿಕೊಂಡರು.

ವಿದ್ಯಾಭ್ಯಾಸವನ್ನು ನಿರೀಕ್ಷೆಯಂತೆ ಪೂರ್ಣಗೊಳಿಸಲಾಗದ ಗ್ಲಕ್, ತಮ್ಮ ಕಾವ್ಯಶಕ್ತಿಯನ್ನು ಮೊನಚಾಗಿಸಲು ವಿವಿಧ ಕಾವ್ಯ ಕಮ್ಮಟಗಳಲ್ಲಿ ತರಬೇತಿ ಪಡೆದರು. ಅಮೆರಿಕದ ಹೆಸರಾಂತ ಕವಿಗಳಾದ ಲಿಯೊನಿ ಆ್ಯಡಮ್ಸ್ ಮತ್ತು ಸ್ಟ್ಯಾನ್ಲಿ ಕುನಿಟ್ಜ್ ಅವರ ಮಾರ್ಗದರ್ಶನ ದೊರಕಿ ಅವರ ಕಾವ್ಯಕ್ಕೆ ಹೊಸ ಶಕ್ತಿ ಸಿಕ್ಕಿತು. ಇನ್ನು ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ, ಕೊನೆಗೆ ಸ್ನೇಹಿತರ ಸಲಹೆಯಂತೆ, ಕಾವ್ಯವನ್ನು ಕಲಿಸುವ ಶಿಕ್ಷಕ ವೃತ್ತಿಯಲ್ಲಿ ತೊಡಗಿ, ಅದರಲ್ಲಿ ನೆಮ್ಮದಿಯನ್ನು ಕಂಡುಕೊಂಡರು. ಈ ಮೂಲಕ, ತಮ್ಮ ಶಿಷ್ಯಂದಿರು ಅಮೆರಿಕದ ಹೆಸರಾಂತ ಕವಿಗಳಾದುದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಗ್ಲಕ್‌ ಇಂದಿಗೂ ಯೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾವ್ಯವನ್ನು ಕಲಿಸುತ್ತಿದ್ದಾರೆ.

ಗ್ಲಕ್‌ ತಮ್ಮ ಮೊದಲ ವಿವಾಹ ವಿಚ್ಛೇದನದ ನಂತರ, 1968ರಲ್ಲಿ ಪ್ರಥಮ ಕವನ ಸಂಕಲನ ‘ಫಸ್ಟ್ ಬಾರ್ನ್‌’ ಪ್ರಕಟಿಸಿದರು. ಇದು ವಿಮರ್ಶಕರ ವಿಶೇಷ ಗಮನ ಸೆಳೆದು ಎಲ್ಲೆಡೆ ಮೆಚ್ಚುಗೆ ಪಡೆಯಿತು. ಅಲ್ಲಿಂದಲೇ, ವಿಮರ್ಶಕರು ಅವರ ಕಾವ್ಯದಲ್ಲಿ ‘ಒಂದು ವಿಶಿಷ್ಟ ಧ್ವನಿಯಿದೆ’ ಎಂದು ಗುರುತಿಸಿದರು. ಆಮೇಲೆ ಎರಡನೇ ವಿವಾಹವಾಗಿ ಒಂದು ಗಂಡು ಮಗುವನ್ನು ಪಡೆದರು. ಅದೂ ವಿಚ್ಛೇದನದಲ್ಲಿ ಕೊನೆಗೊಂಡ ಬಳಿಕ ಗ್ಲಕ್‌ ತಮ್ಮನ್ನು ಸಂಪೂರ್ಣವಾಗಿ ಕಾವ್ಯ ಸೃಷ್ಟಿ ಮತ್ತು ತರಬೇತಿಯಲ್ಲಿ ತೊಡಗಿಸಿಕೊಂಡರು. ಈವರೆಗೆ ಒಟ್ಟು 14 ಕಾವ್ಯ ಸಂಗ್ರಹ, ಎರಡು ಪ್ರಬಂಧ ಗುಚ್ಛಗಳನ್ನು ಗ್ಲಕ್‌ ಪ್ರಕಟಿಸಿದ್ದಾರೆ.

ವಿಮರ್ಶಕರು ಹೇಳುವಂತೆ, ಅವರ ಕಾವ್ಯ ವೈಶಿಷ್ಟ್ಯವು ವೈಯಕ್ತಿಕ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿ ತಪ್ಪೊಪ್ಪಿಗೆಯ ಧ್ವನಿ ಗಾಢವಾಗಿದೆ. ಅವರ ಕಾವ್ಯದಲ್ಲಿ ವಿಶೇಷವಾಗಿ, ಸಾವು, ಮೌನ, ನಷ್ಟ, ಒಂಟಿತನ, ಭ್ರಮನಿರಸನ, ನಿರಾಕರಣೆ, ಸಂಬಂಧಗಳ ವೈಫಲ್ಯ, ಮುಗ್ಧತೆಯ ನಾಶದಂತಹ ಸಂಗತಿಗಳು ಪ್ರತಿಧ್ವನಿಸುತ್ತವೆ.

ಕಾವ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಗ್ಲಕ್, ಪುಲಿಟ್ಜರ್, ಬೊಲ್ಲಿಂಗೇನ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಸ್ತುತ, ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯ, ಬಾಸ್ಟನ್ ವಿಶ್ವವಿದ್ಯಾಲಯ ಮತ್ತು ಅಯೋವಾ ಬರಹಗಾರರ ಕಾರ್ಯಾಗಾರಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದಾರೆ. ಒಟ್ಟಿನಲ್ಲಿ, ನೊಬೆಲ್ ಪ್ರಶಸ್ತಿಗೆ ಅತ್ಯಂತ ಅರ್ಹರಾದ ಗ್ಲಕ್, ಈ ವರ್ಷ ಪ್ರಶಸ್ತಿಗೆ ಒಂದು ಶೋಭೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.