ರಾಜ್ಯದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯ (ಟಿಎಸ್‌ಪಿ) ಅನುದಾನ ದುರ್ಬಳಕೆಯಾಗುತ್ತಿದ್ದು, ಈ ಬಗ್ಗೆ ಹೋರಾಡುವುದಾಗಿ ವಿರೋಧ ಪಕ್ಷವಾದ ಬಿಜೆಪಿ ಹೇಳಿದೆ. ಹೋರಾಟ ಮತ್ತು ಚರ್ಚೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ಭಾಗ. ಆದರೂ ನಮ್ಮ ಹೋರಾಟಗಳು ಎಷ್ಟು ಜನಪರವಾಗಿವೆ ಮತ್ತು ನಮ್ಮ ಮಾತಿನ ಉದ್ದೇಶ ಯಾವ ದಿಕ್ಕಿನಲ್ಲಿ ಇದೆ ಎಂಬುದು ಅತ್ಯಂತ ಮಹತ್ವದ ಸಂಗತಿಯಾಗಿರುತ್ತದೆ.
ಈ ವಿಷಯದಲ್ಲಿ ಅಪೂರ್ಣ ಮಾಹಿತಿ ಮತ್ತು ರಾಜಕೀಯಪ್ರೇರಿತ ಕಾರಣಗಳನ್ನು ಮುಂದಿಟ್ಟು ಚರ್ಚೆ ನಡೆಸಲಾಗುತ್ತಿದೆ. ಸುಮಾರು ₹ 10 ಸಾವಿರ ಕೋಟಿಗೂ ಹೆಚ್ಚಿನ ಅನುದಾನವನ್ನು, ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ನಿಯಮಗಳನ್ನು ಅಕ್ಷರಶಃ ಗಾಳಿಗೆ ತೂರಿ ವರ್ಗಾವಣೆ ಮಾಡಿದ್ದ ಬಿಜೆಪಿಯವರು ವಾಸ್ತವದಲ್ಲಿ ದಲಿತ ವಿರೋಧಿಗಳು.
ಪರಿಶಿಷ್ಟ ಸಮುದಾಯಗಳಿಗೆ ನಿರ್ದಿಷ್ಟ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013- 18ರ ಅವಧಿಯಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ಜಾರಿಗೊಳಿಸಿತು. ಈ ಮೂಲಕ, ಸರ್ಕಾರದ ಯೋಜನೆಗಳಲ್ಲಿ ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿತು. ಅಂತೆಯೇ ಈ ಕಾಯ್ದೆಯ ಪರಿಮಿತಿಯಲ್ಲೇ ಸರ್ಕಾರದ ಯೋಜನೆಯ ಅನುಕೂಲಗಳನ್ನು ಪರಿಶಿಷ್ಟ ಸಮುದಾಯದವರಿಗೆ ಕಲ್ಪಿಸಲಾಗುತ್ತಿದ್ದು ಎಲ್ಲಿಯೂ ಈ ಹಣ ದುರುಪಯೋಗ ಆಗಿಲ್ಲ. ಅಲ್ಲದೆ ಈ ಕಾಯ್ದೆಯಡಿ ಅವರಿಗೆಂದೇ ನಿರ್ದಿಷ್ಟವಾಗಿ ರೂಪಿಸಲಾಗಿದ್ದ ಗಂಗಾ ಕಲ್ಯಾಣ, ನೇರ ಸಾಲ, ಉದ್ಯಮಶೀಲತಾ ಯೋಜನೆ, ಭೂ ಒಡೆತನ, ಐರಾವತ, ಪ್ರಬುದ್ಧ, ಔದ್ಯೋಗಿಕ ತರಬೇತಿಯಂತಹ ಯೋಜನೆಗಳಿಗೂ ಹೆಚ್ಚಿನ ಅನುದಾನ ಕಲ್ಪಿಸಲಾಗಿದೆ.
ಎಲ್ಲಾ ಅರ್ಹ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ, ವಸತಿರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ, ಹೋಬಳಿಗೆ ಒಂದು ವಸತಿ ಶಾಲೆ, ಸ್ವಾವಲಂಬಿ ಸಾರಥಿ ಯೋಜನೆ, ‘ಪ್ರಬುದ್ಧ’ ಯೋಜನೆಯಡಿ ಆದಾಯ ಮಿತಿ ಏರಿಕೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹೆಚ್ಚಿಸುವಂತಹ ಮಹತ್ವದ ಕೆಲಸವನ್ನು ಮಾಡಿದೆ.
ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಉಪ ಯೋಜನೆಗಳ ಅಡಿ ಹಂಚಿಕೆಯಾಗಿರುವ ಅನುದಾನದ ಪ್ರಮಾಣ ಸರಾಸರಿ ₹ 27,612.03 ಕೋಟಿ. ಆದರೆ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ 2023ರಿಂದ ಈವರೆಗಿನ ಅವಧಿಯಲ್ಲಿ ಹಂಚಿಕೆಯಾದ ಸರಾಸರಿ ಅನುದಾನದ ಪ್ರಮಾಣ ₹ 37,648.72 ಕೋಟಿ. 2013ರಿಂದ 2018ರವರೆಗೆ ಮತ್ತು ಪ್ರಸಕ್ತ ಅಧಿಕಾರಾವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಸುಮಾರು 51,401 ಕೊಳವೆ ಬಾವಿಗಳ ಸೌಲಭ್ಯವನ್ನು ನೀಡಲಾಗಿದೆ. ಆದರೆ ಬಿಜೆಪಿಯ ಅಧಿಕಾರಾವಧಿಯಲ್ಲಿ ಇವುಗಳ ಸಂಖ್ಯೆ ಇದ್ದದ್ದು 14,416 ಮಾತ್ರ.
ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಿಜೆಪಿಯವರಿಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಅಸಹನೆ ಇದ್ದೇ ಇದೆ. ಅಂಬೇಡ್ಕರ್ ಅವರ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತುಗಳೇ ಇದಕ್ಕೆ ಸ್ಪಷ್ಟ ನಿದರ್ಶನ. ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ ₹ 4.5 ಲಕ್ಷ ಕೋಟಿಯಷ್ಟು ತೆರಿಗೆ ಪಾವತಿಸುತ್ತಿರುವ ಕರ್ನಾಟಕಕ್ಕೆ ಮತ್ತು ಇಲ್ಲಿನ ಪರಿಶಿಷ್ಟ ಸಮುದಾಯಗಳ ಏಳಿಗೆಗೆ ಕೇಂದ್ರ ಯಾವ ಕೊಡುಗೆಯನ್ನೂ ನೀಡಿಲ್ಲ. ಬದಲಿಗೆ ಪರಿಶಿಷ್ಟ ಜಾತಿ ಕ್ರಿಯಾ ಯೋಜನೆಯಡಿ ರಾಜ್ಯಕ್ಕೆ ನೀಡುತ್ತಿದ್ದ ಅತಿ ಕಡಿಮೆ ಅನುದಾನದಲ್ಲಿ ₹ 210 ಕೋಟಿಯನ್ನು ಇನ್ನೂ ಬಾಕಿ ಉಳಿಸಿಕೊಂಡಿದೆ.
ದೇಶದ ಪರಿಶಿಷ್ಟ ಸಮುದಾಯಗಳ ಕಥೆಯಂತೂ ಇನ್ನೂ ಶೋಚನೀಯವಾಗಿದೆ. ದೇಶದಾದ್ಯಂತ ಶೇ 25ರಷ್ಟಿರುವ ಪರಿಶಿಷ್ಟ ಸಮುದಾಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ನಿಗದಿಯಾಗಿರುವುದು ಶೇ 5.5ರಷ್ಟು ಅನುದಾನ ಮಾತ್ರ. ಅದರಲ್ಲೂ ಹಂಚಿಕೆಯಾದ ₹ 1.38 ಲಕ್ಷ ಕೋಟಿಯ ಪೈಕಿ ಬರೋಬ್ಬರಿ ಶೇ 94ರಷ್ಟು ಹಣವನ್ನು ಕೇಂದ್ರದ ಸಾಮಾನ್ಯ ಯೋಜನೆಗಳಿಗೆ (ಡೀಮ್ಡ್ ಎಕ್ಸ್‌ಪೆಂಡಿಚರ್) ನೀಡಲಾಗಿದೆ. ಉಳಿದ ಶೇ 6ರಷ್ಟು ಅನುದಾನದಲ್ಲಿ ಯಾವ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ಸಾಧ್ಯ? ಈ ಸಂಗತಿಯನ್ನು ರಾಜ್ಯದ ಬಿಜೆಪಿ ಸಂಸದರಾಗಲಿ, ಪಕ್ಷದ ಅಧ್ಯಕ್ಷರಾಗಲಿ ಅಥವಾ ವಿರೋಧ ಪಕ್ಷದ ನಾಯಕರಾಗಲಿ ಎಂದಾದರೂ ಕೇಂದ್ರದ ಗಮನಕ್ಕೆ ತಂದು ಅನ್ಯಾಯವನ್ನು ಪ್ರಶ್ನಿಸಿದ್ದಾರೆಯೆ?
ಬಡ್ತಿ ಮೀಸಲಾತಿ ಕಾಯ್ದೆ, ಗುತ್ತಿಗೆಯಲ್ಲಿ ಮೀಸಲಾತಿ ಕಾಯ್ದೆಯನ್ನು ಸಹ ನಮ್ಮ ಸರ್ಕಾರ ಜಾರಿ ಮಾಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜಮೀನು ವರ್ಗಾವಣೆ ನಿಷೇಧ ಕಾಯ್ದೆಯಡಿ (ಪಿಟಿಸಿಎಲ್) ಹಲವು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದೆ. ವಿಶೇಷ ಪೊಲೀಸ್ ಠಾಣೆಗಳನ್ನು (ಡಿಸಿಆರ್‌ಇ) ಸ್ಥಾಪಿಸಿ ಪರಿಶಿಷ್ಟರ ಹಕ್ಕು ಮತ್ತು ಘನತೆಯ ರಕ್ಷಣೆಗೆ ಬದ್ಧವಾಗಿದೆ. ಹೀಗಾಗಿ, ರಾಜ್ಯ ಸರ್ಕಾರದ ಪರಿಶಿಷ್ಟರ ಪರವಾದ ನಿಲುವುಗಳು ದ್ರೋಹದ ಸಂಕೇತವೋ ಇಲ್ಲವೇ ಬದ್ಧತೆಯ ಕೆಲಸವೋ ಎಂಬುದನ್ನು ಜನರೇ ನಿರ್ಣಯಿಸಬೇಕು.
ಲೇಖಕ: ರಾಜ್ಯ ಸಮಾಜ ಕಲ್ಯಾಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.