ADVERTISEMENT

ಸಂಗತ: ದಿಢೀರ್ ಹೃದಯಾಘಾತ– ಯಾಕೆ?

ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಯೇ ಹೃದಯ ಸಮಸ್ಯೆಗೆ ಕಾರಣ. ಬದುಕಿನಲ್ಲಿ ಶ್ರಮದ ಪಾತ್ರ ಕಡಿಮೆಯಾದಷ್ಟೂ ಹೃದಯ ತಲ್ಲಣಿಸತೊಡಗುತ್ತದೆ.

ಡಾ.ಲಕ್ಷ್ಮಣ ವಿ.ಎ.
Published 19 ಜೂನ್ 2025, 23:34 IST
Last Updated 19 ಜೂನ್ 2025, 23:34 IST
   

ವಿಶ್ವನಾಥ ವಿ. ಮುಗುತಿ ಎನ್ನುವ 43 ವರ್ಷ ವಯಸ್ಸಿನ ಹಿರಿಯ ಸಿವಿಲ್‌ ನ್ಯಾಯಾಧೀಶರು ಕಲಬುರಗಿ ನ್ಯಾಯಾಲಯದ ಆವರಣದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೀಗೆ, ದಿಢೀರ್‌ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳು ನಿಯಮಿತವಾಗಿ ವರದಿಯಾಗುತ್ತಲೇ ಇವೆ.

ಕೋವಿಡ್ ನಂತರದ ದಿನಗಳಲ್ಲಿ ಹೃದಯಾಘಾತದಿಂದ ಸಾವಿಗೀಡಾಗುವವರ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಆಗಿರುವುದನ್ನು ಗಮನಿಸಬಹುದು. ಕೋವಿಡ್‌ನಿಂದ ಬಾಧೆ ಗೊಳಗಾದವರು ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆ ಪಡೆದವರಲ್ಲಿ ಹೃದ್ರೋಗದ ಸಮಸ್ಯೆಗಳು ಹೆಚ್ಚಾಗಿವೆ ಎಂದು ಕೆಲವರು ಹೇಳುತ್ತಿದ್ದು, ದಿಢೀರ್‌ ಹೃದಯಾಘಾತಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣಗಳನ್ನು ಕಂಡುಕೊಳ್ಳುವ ಅಧ್ಯಯನಗಳು ನಡೆಯುತ್ತಿವೆ‌.

ಕೋವಿಡ್ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಸಾವುಗಳು ಹೆಚ್ಚಾಗಿ ರುವುದನ್ನು ಅಂಕಿ ಅಂಶಗಳು ದೃಢಪಡಿಸಿವೆ. ಕೆಲವು ವರ್ಷಗಳ ಹಿಂದೆ ವಯಸ್ಸಾದ ತಂದೆ, ತಾಯಂದಿರನ್ನು ಹೃದಯದ ಚಿಕಿತ್ಸೆಗೆಂದು ಮಕ್ಕಳು ಆಸ್ಪತ್ರೆಗೆ ಕರೆತರುತ್ತಿದ್ದರು. ಈಗ ಸ್ವತಃ ತಂದೆ, ತಾಯಿಯರೇ ಮಕ್ಕಳನ್ನು ಹೃದಯದ ತಪಾಸಣೆಗೆ ಕರೆದು ತರುವಂತಾಗಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು, ಬಹು ಕ್ಷಿಪ್ರವಾಗಿ ಬದಲಾಗಿರುವ ನಮ್ಮ ಜೀವನಶೈಲಿ.

ADVERTISEMENT

ಜೀವ ವಿಕಾಸದ ಪಥದುದ್ದಕ್ಕೂ ಮನುಷ್ಯ ಬೇಟೆಯಾಡುತ್ತ, ಕೃಷಿ ಮಾಡುತ್ತ, ಆದಷ್ಟೂ ಬೆವರು ಹರಿಸಿ ತನ್ನ ಅನ್ನವನ್ನು ತಾನೇ ಸಂಪಾದಿಸುತ್ತಿದ್ದ. ಕಠಿಣ ದುಡಿಮೆಯ ಪ್ರಕ್ರಿಯೆಯಲ್ಲಿ ಅವನ ದೇಹವೂ ಶ್ರಮಕ್ಕೆ ತಕ್ಕನಾಗಿ ಸ್ಪಂದಿಸುತ್ತಿತ್ತು. ಆಗಿನವರ ಹೃದಯ, ಯಾವ ಸೋಂಕು ಜಾಡ್ಯಗಳಿಲ್ಲದೆ ಆರೋಗ್ಯಕರವಾಗಿತ್ತು, ಬಲಿಷ್ಠವಾಗಿತ್ತು.

ಪ್ರಸ್ತುತ ಜಗತ್ತು ಓಡುತ್ತಿದೆ. ಅದಕ್ಕೆ ಸಂವಾದಿಯಾಗಿ ಮನುಷ್ಯನೂ ಓಡುತ್ತಿದ್ದಾನೆ. ಈ ಓಟದ ರಿಲೇಯಲ್ಲಿ ಹಿಂದೆ ಬಿದ್ದವನು ಸೋತಂತೆ ಎನ್ನುವ ಪರಿಸ್ಥಿತಿ ಇದೆ. ಆಧುನಿಕ ಜಗತ್ತಿನಲ್ಲಿ ಸೋಲನ್ನು ಮುಂದಿನ ಗೆಲುವಿಗೆ ಸೋಪಾನವೆಂದು ಭಾವಿಸದೆ, ಸಾವಿನ ರೂಪದಲ್ಲಿ ನೋಡಲಾಗುತ್ತದೆ. ಸೋಲಿಗೂ ಸಾವಿಗೂ ವ್ಯತ್ಯಾಸವಿಲ್ಲ ಎನ್ನುವ ಭಾವನೆಯನ್ನು ಸುತ್ತಲಿನ ಜಗತ್ತು ನಮಗೆ ಅರಿವಿಲ್ಲದಂತೆಯೇ ನಮ್ಮ ಮನಸ್ಸಿನಲ್ಲಿ ಆಳವಾಗಿ ಬೇರೂರುವಂತೆ ಮಾಡಿದೆ. ಬದುಕು ಕೂಡ ಪೇಟೆಯಲ್ಲಿ ಕೊಂಡುಕೊಳ್ಳುವ ಸರಕುಗಳಲ್ಲೊಂದು ಎನ್ನುವಂತಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಸಾವಿಗೆ ಸನ್ನಿಹಿತವಾಗಲು ಕಷ್ಟಪಡಬೇಕಿಲ್ಲ. ಶ್ರಮವಿಲ್ಲದೆ ಸುಮ್ಮನೆ ಕೂರುವುದೆಂದರೆ ಸಾವಿಗೆ ಸಮೀಪ ಆಗುತ್ತಿದ್ದೇವೆ ಎಂದೇ ಅರ್ಥ. ಸಾವಿನ ಭಯದಲ್ಲಿ ಓಡುತ್ತಿರುವ ನವ ನಾಗರಿಕರು ಹೊರಲಾರದಷ್ಟು ಭಾರವನ್ನು ಹೊತ್ತುಕೊಂಡು ಸಾಗುತ್ತಿದ್ದಾರೆ; ಅನಗತ್ಯ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಸಾವಿನ ಸುತ್ತಮುತ್ತ ಸುಳಿಯತೊಡಗಿದ್ದಾರೆ. ವಿಶ್ವದ ಅಭಿವೃದ್ಧಿ ಹೊಂದಿರುವ ದೇಶಗಳನ್ನು ಪ್ರಸ್ತುತ ಕಾಡುತ್ತಿರುವುದು ಬಡತನವೋ ಹಸಿವೋ ಅಲ್ಲ, ಸಾಂಕ್ರಾಮಿಕ ಕಾಯಿಲೆಯೂ ಅಲ್ಲ, ಬದಲಾಗಿ ಹೃದಯಾಘಾತ.

ಹೊಸ ಪೀಳಿಗೆಯ ಸವಾಲುಗಳು ಸಂಕೀರ್ಣವಾಗಿವೆ. ಅಸ್ತಿತ್ವದ ಹುಡುಕಾಟ, ಅಸ್ಥಿರ ಆರ್ಥಿಕತೆ, ಮರೀಚಿಕೆಯಾದ ಸುಸ್ಥಿರ ಅಭಿವೃದ್ಧಿ, ಶಿಥಿಲಗೊಂಡ ಕೌಟುಂಬಿಕ ಮೌಲ್ಯಗಳು, ಛಿದ್ರಗೊಂಡ ಕೂಡು ಕುಟುಂಬ– ಇವೆಲ್ಲದರ ಪರಿಣಾಮವಾಗಿ ಸಂತೆಯಲ್ಲಿದ್ದೂ ಒಂಟಿಯಾಗಿರುವ ಪರಿಸ್ಥಿತಿ ಅನೇಕರದ್ದಾಗಿದೆ. ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಲ್ಲಿ ಉತ್ತರ ಹುಡುಕುವವರ ಪ್ರಕರಣಗಳು ಹೆಚ್ಚುತ್ತಿರುವುದು ದಿಗಿಲು ಹುಟ್ಟಿಸುವಂತಿದೆ. ವಿಪರ್ಯಾಸವೆಂದರೆ, ಜಗತ್ತನ್ನು ಪೀಡಿಸುವ ಸಾಂಕ್ರಾಮಿಕ ಕಾಯಿಲೆಗಳನ್ನು ವೈದ್ಯ ವಿಜ್ಞಾನ ಒಂದೊಂದಾಗಿ ಮೂಲೋತ್ಪಾಟನೆ ಮಾಡುತ್ತಿದೆ. ಇನ್ನೊಂದೆಡೆ, ಒತ್ತಡ ಸಂಬಂಧಿ ರೋಗಗಳಾದ ಹೃದಯಾಘಾತ, ರಕ್ತದೊತ್ತಡ, ಖಿನ್ನತೆ ಹಾಗೂ ಸಕ್ಕರೆ ಕಾಯಿಲೆಯಂಥ ಸಮಸ್ಯೆಗಳು ವ್ಯಾಪಕವಾಗುತ್ತ ವೈದ್ಯ ಕ್ಷೇತ್ರಕ್ಕೆ ಸವಾಲಾಗಿವೆ.

ಎಂಬತ್ತರ ದಶಕ ಮತ್ತು ನಂತರದಲ್ಲಿ ಹುಟ್ಟಿದ ಪೀಳಿಗೆ ಓದು ಮತ್ತು ಉದ್ಯೋಗದ ಸ್ಪರ್ಧೆಯಲ್ಲಿ ಕೃಷಿ ಹಾಗೂ ಇನ್ನಿತರೆ ದೈಹಿಕ ಚಟುವಟಿಕೆಗಳಿಂದ ವಿಮುಖವಾಯಿತು. ದೈಹಿಕ ಒತ್ತಡದ ಬದಲಾಗಿ ವೇಗದ ಜೀವನಶೈಲಿಯನ್ನು ಅನುಸರಿಸತೊಡಗಿತು. ಸ್ಪರ್ಧೆಗಳಲ್ಲಿ ಹಿಂದೆ ಬೀಳುವ ಭಯ, ದೇಹದ ಸಹಜ ಸ್ರವಿಸುವಿಕೆಯ ಹಾರ್ಮೋನ್‌ ಗಳಲ್ಲಿ ಏರುಪೇರು ಮಾಡತೊಡಗಿತು. ಇದೆಲ್ಲದರಿಂದಾಗಿ, ಹೃದಯ ಹೊಸ ಬಗೆಯ ಒತ್ತಡಕ್ಕೆ ಒಳಗಾಯಿತು. ತೀರ ಅಪರಿಚಿತವಾದ ಕ್ಷಿಪ್ರ ಬದಲಾವಣೆಗೆ ಒಗ್ಗಿಕೊಳ್ಳಲು ಹೃದಯ ಹೆಣಗಾಡುತ್ತಿರುವ ಹೊತ್ತಿನಲ್ಲಿ ದಿಢೀರ್‌ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿವೆ. ಈ ಹೊಸ ಬಗೆಯ ಸಮಸ್ಯೆಗೆ ಮನುಷ್ಯ ಪ್ರಕೃತಿ ತನ್ನಷ್ಟಕ್ಕೆ ತಾನೇ ಹೊಂದಿಕೊಂಡು ಹೋಗಲು ಇನ್ನೂ ನೂರಾರು ವರ್ಷಗಳ ವಿಕಸನದ ಅಗ್ನಿದಿವ್ಯ ಹಾಯಬೇಕು.

ಹೃದ್ರೋಗ ಹಾಗೂ ಇನ್ನಿತರೆ ಜೀವನಶೈಲಿ ಕಾಯಿಲೆಗಳಿಗೆ ತಕ್ಷಣದ ಪರಿಹಾರವೆಂದರೆ, ಜೀವನಶೈಲಿಯನ್ನು ಬದಲಿಸಿಕೊಳ್ಳುವುದು; ದೈಹಿಕ ಚಟುವಟಿಕೆಗಳಿಲ್ಲದೆ ದುರ್ಬಲಗೊಂಡ ಹೃದಯದ ಸ್ನಾಯುಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವುದು. ರಕ್ತ ಮತ್ತು ಆಮ್ಲಜನಕ ಪರಿಚಲನೆಯ ದಾರಿಗಳನ್ನು ಲಘು ವ್ಯಾಯಾಮ ಮತ್ತು ಯೋಗದ ಸಹಾಯದೊಂದಿಗೆ ಹಂತ ಹಂತವಾಗಿ ಬಲಗೊಳಿಸುವುದು ಅಗತ್ಯ. ದೈಹಿಕ ಚಟುವಟಿಕೆಯ ಜೊತೆಗೆ, ಹಿತಮಿತವಾದ ಆಹಾರ ಸೇವನೆ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ದಿಢೀರ್ ಸಾವುಗಳನ್ನು ತಡೆಗಟ್ಟಲು ಪ್ರಯತ್ನಿಸಬಹುದು.

ಹೆಚ್ಚುತ್ತಿರುವ ಹೃದಯಾಘಾತಗಳು ಮನುಕುಲಕ್ಕೆ ಪ್ರಕೃತಿ ನೀಡುತ್ತಿರುವ ಎಚ್ಚರಿಕೆಗಳಾಗಿವೆ. ಆ ಎಚ್ಚರಿಕೆಯನ್ನು ಗಮನಿಸಿ, ಕಾರ್ಯಪ್ರವೃತ್ತರಾಗದೇ ಹೋದರೆ ಮತ್ತಷ್ಟು ಅಪಾಯ ತಪ್ಪಿದ್ದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.