ADVERTISEMENT

ಸಂಗತ | ಆನ್‍ಲೈನ್‍ ಕೋರ್ಸ್‌ ಮತ್ತು ಯುವಜನ

ಆನ್‌ಲೈನ್ ಪದವಿ ನೀಡಲು ಕೇಂದ್ರ ಸರ್ಕಾರ ಗುರುತಿಸಿರುವ ವಿಶ್ವವಿದ್ಯಾಲಯಗಳ ಮೊದಲ ಪಟ್ಟಿಯು ನಿರಾಶೆ ಮೂಡಿಸುವಂತಿದೆ

ರವಿಚಂದ್ರ ಎಂ.
Published 21 ಮಾರ್ಚ್ 2020, 1:40 IST
Last Updated 21 ಮಾರ್ಚ್ 2020, 1:40 IST
ಆನ್‌ಲೈನ್ ಕೋರ್ಸ್‌
ಆನ್‌ಲೈನ್ ಕೋರ್ಸ್‌   

‘ಭಾರತವು 2030ರಲ್ಲಿ ಜಗತ್ತಿನಲ್ಲೇ ಹೆಚ್ಚು ದುಡಿಯುವ ವಯೋಮಾನದ ಯುವಸಮೂಹವನ್ನು ಹೊಂದಿರುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಸಕ್ತ ಸಾಲಿನ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ. ಜೊತೆಗೆ, ಈ ಬೃಹತ್ ಸಂಖ್ಯೆಯ ಯುವ ಜನಾಂಗಕ್ಕೆ ಶಿಕ್ಷಣ, ಕೌಶಲ ವೃದ್ಧಿಗೆ ಅಗತ್ಯವಾದ ಕ್ರಮ ಹಾಗೂ ಉದ್ಯೋಗ ಒದಗಿಸುವ ಗುರುತರ ಜವಾಬ್ದಾರಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದನ್ನು ನಿರ್ವಹಿಸುವ ಸಲುವಾಗಿ ವಿವಿಧ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಆನ್‍ಲೈನ್ ಮಾಧ್ಯಮದ ಮೂಲಕ ನೀಡಲು ಸರ್ಕಾರ ಸಮ್ಮತಿ ಸೂಚಿಸಿದೆ.

ಇದರಲ್ಲಿ, ವೈದ್ಯಕೀಯ ಮತ್ತು ಕಾನೂನು ವಿಷಯಗಳನ್ನು ಹೊರತುಪಡಿಸಿ, ಬೇರೆಲ್ಲಾ ಕೋರ್ಸ್‌ಗಳನ್ನು ಆನ್‌ಲೈನ್ ಮಾಧ್ಯಮದಲ್ಲಿ ಅಭ್ಯಸಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಜೊತೆಗೆ, ವಿದೇಶಿ ಮೂಲದ ಆನ್‌ಲೈನ್ ಶಿಕ್ಷಣ ಪರಿಣತ ಸಂಸ್ಥೆಗಳಿಗೂ ಭಾರತದ ನೆಲದಲ್ಲಿ ಶಿಕ್ಷಣ ನೀಡಲು ಅನುಮತಿ ದೊರೆತಿದ್ದು, ಯುಜಿಸಿ ಮತ್ತು ಅದರ ಅಂಗಸಂಸ್ಥೆಗಳು ಅವುಗಳಿಗೆ ಮಾನ್ಯತೆ ನೀಡಲು ಒಪ್ಪಿವೆ ಎಂದು ತಿಳಿಸಲಾಗಿದೆ. ಭಾರತೀಯ ವಿಶ್ವವಿದ್ಯಾಲಯಗಳ ವಿಚಾರಕ್ಕೆ ಬಂದರೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಅರ್ಹತಾ ಪಟ್ಟಿಯಲ್ಲಿ ಮೊದಲ 100 ಸ್ಥಾನದಲ್ಲಿರುವ ವಿದ್ಯಾಲಯಗಳಿಗೆ ಮಾತ್ರ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ನೀಡುವುದಾಗಿ ಸರ್ಕಾರ ಘೋಷಿಸಿದೆ.

ತಂತ್ರಜ್ಞಾನ, ಸಾಫ್ಟ್‌ವೇರ್, ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದಂತೆ ನಮ್ಮಲ್ಲಿರುವ ಬಹುಸಂಖ್ಯೆಯ ಯುವ ಉದ್ಯೋಗಿಗಳು ಮತ್ತು ಲಕ್ಷಾಂತರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈಗಾಗಲೇ ಆನ್‌ಲೈನ್ ಕೋರ್ಸ್‌ಗಳನ್ನು ಐ.ಐ.ಟಿ, ಐ.ಐ.ಎಸ್.ಸಿ ಸಂಸ್ಥೆಗಳ ಮೂಲಕ ಪ್ರಸಾರವಾಗುವ ‘ಸ್ವಯಂ’ (ಎನ್.ಪಿ.ಟಿ.ಎಲ್) ವೆಬ್‌ಜಾಲ, ವಿದೇಶದ ಕೋರ್ಸೆರಾ, ಇಡಿಎಕ್ಸ್, ಖಾನ್-ಅಕಾಡೆಮಿ, ಯುಡಿಮಿ ಮುಂತಾದ ಆನ್‍ಲೈನ್ ಶಿಕ್ಷಣ ಸಮೂಹಗಳ ಮೂಲಕ ಪಡೆಯುತ್ತಿದ್ದಾರೆ.

ADVERTISEMENT

ಕಾಲೇಜಿನಲ್ಲಿ ಮತ್ತು ಉದ್ಯೋಗದ ಸ್ಥಳದಲ್ಲಿ ತಿಳಿಯಲು ಸಾಧ್ಯವಾಗದ ಅನೇಕ ವಿಷಯಗಳನ್ನು ಆನ್‌ಲೈನ್‌ನಲ್ಲಿ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ ಪರಿಣತ ಪ್ರಾಧ್ಯಾಪಕರ ಬೋಧನೆಯ ಮೂಲಕ ಮನೆಯಲ್ಲಿಯೇ ಕುಳಿತು ಕಲಿಯುವ ಸದವಕಾಶವನ್ನು ಇವರು ಹೊಂದಿದ್ದಾರೆ. ಸರ್ಕಾರ ಮತ್ತು ಯುಜಿಸಿಯು ಆನ್‌ಲೈನ್ ಪದವಿಗಳಿಗೆ ಮನ್ನಣೆ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹವೇ. ಆದರೆ ಇಲ್ಲಿ ಸಂಪೂರ್ಣ ಆನ್‌ಲೈನ್ ಪದವಿ ನೀಡಲು ಸರ್ಕಾರ ತನ್ನ ಮೊದಲ ಪಟ್ಟಿಯಲ್ಲಿ 7 ವಿಶ್ವವಿದ್ಯಾಲಯಗಳನ್ನು ಗುರುತಿಸಿದೆ. ಈ ಪಟ್ಟಿಯನ್ನು ಗಮನಿಸಿದರೆ, ಸ್ವಲ್ಪಮಟ್ಟಿನ ನಿರಾಶೆ ಆಗುತ್ತದೆ ಮತ್ತು ಈ ಪಟ್ಟಿಯ ಉದ್ದೇಶದ ಬಗ್ಗೆ ಸಂಶಯ ಮೂಡುತ್ತದೆ.

ಭಾರತದಲ್ಲಿನ ಬಡ ಮತ್ತು ಕೆಳಮಧ್ಯಮ ವರ್ಗದ ಮಕ್ಕಳು ಸ್ನಾತಕೋತ್ತರ ಪದವಿ ಗಳಿಸುವ ತಮ್ಮ ಉತ್ಕಟ ಆಕಾಂಕ್ಷೆಯನ್ನು ಸರ್ಕಾರದ ಕೂಸಾದ, ‘ಜನತೆಯ ವಿಶ್ವವಿದ್ಯಾಲಯ’ (ಪೀಪಲ್ಸ್‌ ಯೂನಿವರ್ಸಿಟಿ) ಬಿರುದಾಂಕಿತ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ (ಇಗ್ನೊ) ತಮ್ಮ ಕೈಗೆಟಕುವ ಶುಲ್ಕದಲ್ಲಿ ಪಡೆದುಕೊಳ್ಳಲು ಬಹಳ ವರ್ಷಗಳ ಕಾಲ ಸಾಧ್ಯವಿತ್ತು. ಇಗ್ನೊದಲ್ಲಿ ಎಂ.ಸಿ.ಎ ಗಳಿಸಿದ ಅನೇಕ ಅರ್ಹ ವಿದ್ಯಾರ್ಥಿಗಳು ಇಂದು ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆಗಳಲ್ಲಿ ಉನ್ನತ ಸ್ಥಾನಕ್ಕೆ ಏರಿರುವುದನ್ನು ಕಾಣಬಹುದು. ಆದರೆ ಈಗ ಸರ್ಕಾರ ಗುರುತಿಸಿರುವ ಪಟ್ಟಿಯಲ್ಲಿ ಕಾಣುವ ಪ್ರಮುಖ ಅಂಶವೆಂದರೆ, ಯುವ ಸಮುದಾಯದಲ್ಲಿ ಹೆಚ್ಚು ಬೇಡಿಕೆ ಇರುವ ಪದವಿಗಳನ್ನು ಖಾಸಗಿ ವಿಶ್ವವಿದ್ಯಾಲಯಗಳ ತೆಕ್ಕೆಗೆ ಸದ್ದುಗದ್ದಲವಿಲ್ಲದೆ ರವಾನಿಸಿರುವುದು. ಬಡಪಾಯಿ ಇಗ್ನೊ ಸಂಸ್ಥೆಗೆ ಪ್ರವಾಸೋದ್ಯಮ, ಅರೇಬಿಕ್ ಭಾಷೆ, ರಷ್ಯನ್ ಭಾಷೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ನಂತಹ (ಪದವಿ ಕೋರ್ಸ್‌ ಸಹ ಅಲ್ಲ!) ಶಿಕ್ಷಣ ನೀಡುವಂತೆ ನಮೂದಿಸಿರುವುದು ಯಾವ ರೀತಿಯಲ್ಲಿ ಸಾಮಾಜಿಕ ನ್ಯಾಯ ಎಂದು ನಮ್ಮನ್ನಾಳುವ ಮಂದಿ ತಿಳಿಸುವರೇ?

ಈ ಪಟ್ಟಿಯಲ್ಲಿರುವ ಒಂದು ಖಾಸಗಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಅಥವಾ ಎಂ.ಬಿ.ಎ ಕಲಿಕಾ ವೆಚ್ಚವು ₹ 2 ಲಕ್ಷದಿಂದ ₹ 3 ಲಕ್ಷ ಮುಟ್ಟುತ್ತದೆ. ಅದೇ ಕೋರ್ಸ್‌ ಅನ್ನು ಇಗ್ನೊ ಒದಗಿಸಿದ್ದರೆ, 2030ರಷ್ಟರಲ್ಲಿ ನಮ್ಮ ಅನೇಕ ಅರ್ಹ ಬಡ ವಿದ್ಯಾರ್ಥಿಗಳು ಸದುಪಯೋಗ ಪಡೆಯುತ್ತಿದ್ದರಲ್ಲವೇ? ಜೊತೆಗೆ ಹಣಕಾಸು ಸಚಿವರ ಆಶಯವೂ ಈಡೇರಿ, ಕೌಶಲಪೂರ್ಣ ಭಾರತ ನಿರ್ಮಾಣವಾಗಲು ಅವಕಾಶ ಇರುತ್ತಿತ್ತು.

ಈಗಾಗಲೇ ನಮ್ಮಲ್ಲಿ ಕೋರ್ಸ್‌ಗಳನ್ನು ನೀಡುತ್ತಿರುವ ಆನ್‍ಲೈನ್ ಶಿಕ್ಷಣ ಸಮೂಹಗಳು ಕೋರ್ಸ್‌ಗಳ ಪ್ರಸರಣದಲ್ಲಿ ತೋರುವ ವೃತ್ತಿಪರತೆ, ದಕ್ಷತೆಯನ್ನು ನಮ್ಮಲ್ಲಿನ ಖಾಸಗಿ ವಿಶ್ವವಿದ್ಯಾಲಯಗಳೂ ಅಳವಡಿಸಿಕೊಂಡರೆ, ಸರ್ಕಾರದ ಕನಸಿನಂತೆ 2030ರಷ್ಟರಲ್ಲಿ ನಮ್ಮ ಯುವಜನರನ್ನು ಕೌಶಲಪೂರ್ಣಗೊಳಿಸುವುದು ಸಾಧ್ಯ. ಇಲ್ಲವಾದರೆ ಇದು ಸಹ ಖಾಸಗಿ ಸಂಸ್ಥೆಗಳು ದುಡ್ಡು ಮಾಡಲು ಮತ್ತು ಡಿಗ್ರಿ ಹಂಚಲು ಬಳಸಿಕೊಳ್ಳುವ ಮತ್ತೊಂದು ರಹದಾರಿಯಾಗುತ್ತದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಮಾಹಿತಿ ತಂತ್ರಜ್ಞಾನ ವಿಭಾಗ, ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.