ADVERTISEMENT

ಗುರುವಾರ, 28–12–1967

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 19:52 IST
Last Updated 27 ಡಿಸೆಂಬರ್ 2017, 19:52 IST

ಅಕ್ರಮ ಚಟುವಟಿಕೆ ನಿಷೇಧ ಮಸೂದೆಗೆ ಅಸ್ತು

ನವದೆಹಲಿ, ಡಿ. 27– ಅಕ್ರಮ ಚಟುವಟಿಕೆ ನಿರೋಧಕ ಮಸೂದೆಯನ್ನು ರಾಜ್ಯ ಸಭೆ ಇಂದು ತಾನು ಅನಿರ್ದಿಷ್ಟ ಕಾಲ ಮುಂದುವರೆಯುವುದಕ್ಕೆ ಮುನ್ನ ಅಂಗೀಕರಿಸಿತು.

ಸಭೆಯಲ್ಲಿದ್ದ ಆರು ಜನ ಕಮ್ಯೂನಿಸ್ಟ್, ಎಸ್.ಎಸ್.ಪಿ. ಮತ್ತು ಪಿ.ಎಸ್.ಪಿ. ಸದಸ್ಯರು ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸುವುದಕ್ಕೆ ಮುನ್ನ ಸಭಾತ್ಯಾಗ ಮಾಡಿದರು.

ADVERTISEMENT

3 ದೇಹ ಪತ್ತೆ: ಮ. ರಾಮಮೂರ್ತಿ ಮತ್ತು ಹಿರಿಯ ಮಗನ ಅಂತ್ಯ ಸಂಸ್ಕಾರ

ಬೆಂಗಳೂರು, ಡಿ. 27– ಪ್ರಸಿದ್ಧ ಪತ್ತೇದಾರಿ ಕಾದಂಬರಿಕಾರ ಶ್ರೀ ಮ. ರಾಮಮೂರ್ತಿ ಮತ್ತು ಅವರ ಹಿರಿಯ ಪುತ್ರ ದಿನಕರನ ಪಾರ್ಥೀವ ಶರೀರಗಳನ್ನು ಪುಷ್ಪಾಲಂಕೃತ ಮೋಟಾರ್ ವಾಹನದಲ್ಲಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಇಂದು ಸಂಜೆ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸೋಮವಾರ ಸಂಜೆ ಬಾವಿಯ ದಡ ಕುಸಿದು ಮಣ್ಣಿನಲ್ಲಿ ಹೂತುಹೋದ 5 ಮಂದಿಯಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ 3 ಮಂದಿಯ ದೇಹಗಳನ್ನು ಮಾತ್ರ ಹೊರಕ್ಕೆ ತೆಗೆಯಲು ಸಾಧ್ಯವಾಯಿತು.

ಏಕರೂಪ ಕಾರ್ಮಿಕ ಶಾಸನಾವಳಿ ರಚನೆಗೆ ರಾಜ್ಯ ಸರಕಾರದ ಒಪ್ಪಿಗೆ

ಬೆಂಗಳೂರು, ಡಿ. 27– ಕಾರ್ಮಿಕರಿಗೆ ಸಂಬಂಧಿಸಿದಂತೆ ಏಕರೂಪದ ಅಖಿಲ ಭಾರತ ಶಾಸನಾವಳಿಯೊಂದನ್ನು ರಚಿಸಬೇಕೆಂಬ ಕಾರ್ಮಿಕ ರಾಷ್ಟ್ರೀಯ ಆಯೋಗದ ಸಲಹೆಗೆ ರಾಜ್ಯ ಸರಕಾರ ಒಪ್ಪಿಗೆಯನ್ನು ನೀಡಿದೆ.

ಬೆಳಿಗ್ಗೆ ನಡೆದ ಮಂತ್ರಿ ಮಂಡಲದ ಸಭೆ ಈ ಸಲಹೆಯನ್ನು ಚರ್ಚಿಸಿತು.

ಕಾಂಗ್ರೆಸ್ ಚಟುವಟಿಕೆ ವಿರೋಧಿ ಮಸೂದೆ

ನವದೆಹಲಿ, ಡಿ. 27– ಅಕ್ರಮ ಚಟುವಟಿಕೆ ನಿರೋಧಕ ಮಸೂದೆಗೆ ‘ಕಾಂಗ್ರೆಸ್ ಆಡಳಿತ ವಿರೋಧಿ’ ಚಟುವಟಿಕೆ ನಿರೋಧಕ ಮಸೂದೆಯೆಂದು ನಾಮಕರಣ ಮಾಡಬೇಕೆಂದು ರಾಜ್ಯ ಸಭೆ ಮುಂದೆ ಇಂದು ಒಂದು ತಿದ್ದುಪಡಿ ಬಂದಿತ್ತು.

ಮಸೂದೆ ಮೇಲೆ ನಡೆದ 14 ಗಂಟೆ ಚರ್ಚೆಯಲ್ಲಿ ಇದೊಂದು ಕುತೂಹಲಕಾರಿ ತಿರುವು.

ಅನಧಿಕೃತ ರೇಡಿಯೋಗಳಿಗೆ ದಂಡ ವಿನಾಯಿತಿ: ವಿಚಾರಣೆ ಇಲ್ಲದೆ ಲೈಸೆನ್ಸ್ ಸೌಲಭ್ಯ

ಹೈದರಾಬಾದ್, ಡಿ. 27– ರಾಷ್ಟ್ರದಲ್ಲಿ ಲೈಸೆನ್ಸ್ ಪಡೆಯದ ಸುಮಾರು ಹತ್ತು ಲಕ್ಷ ರೇಡಿಯೋ ಮತ್ತು  ಟ್ರಾನ್ಸಿಸ್ಟರ್‌ಗಳಿವೆಯೆಂದು ಅಂದಾಜು ಮಾಡಿರುವುದಾಗಿ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಕೆ.ಕೆ. ಷಾರವರು ಇಂದು ಇಲ್ಲಿ ಹೇಳಿದರು.

ಸಚಿವರು ಇಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತ, ಇಂತಹ ರೇಡಿಯೋ ಅಥವಾ ಟ್ರಾನ್ಸಿಸ್ಟರ್‌ಗಳು ಪತ್ತೆಯಾದಾಗ ಇಲ್ಲಿಯವರೆಗೆ ಅವುಗಳನ್ನು ಹೇಗೆ ಪಡೆಯಲಾಯಿತು ಎಂದು ಪ್ರಶ್ನಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇಂತಹವರು ಲೈಸೆನ್ಸ್‌ಗಳಿಗಾಗಿ ಅರ್ಜಿ ಸಲ್ಲಿಸಿದರೆ, ಅದೇನನ್ನೂ ಪ್ರಶ್ನಿಸಕೂಡದೆಂದು ನಿರ್ಧರಿಸಲಾಗಿದೆ. ಇದರಿಂದ ಅನೇಕರು ಲೈಸೆನ್ಸ್ ಪಡೆಯುತ್ತಾರೆಂದು ಆಶಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.