ADVERTISEMENT

ಬುಧವಾರ, 18–10–1967

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಯೋಜಿತ ರೀತಿ ಶಿಕ್ಷಣ ಮಾಧ್ಯಮ ಬದಲಾವಣೆ
ನವದೆಹಲಿ, ಅ. 17–
ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಮಾಧ್ಯಮವನ್ನು ಇಂಗ್ಲೀಷಿನಿಂದ ಪ್ರದೇಶ ಭಾಷೆಗಳಿಗೆ ಬದಲಾಯಿಸಲು ‘ಜಾಗರೂಕತೆಯಿಂದ ಯೋಜಿಸಿದ ಹಾಗೂ ಹಂತ ಹಂತವಾದ ಕಾರ್ಯಕ್ರಮ ಅಗತ್ಯ’.

ಇದು ಶಿಕ್ಷಣ ಸಚಿವ ಖಾತೆಯಿಂದ ನೇಮಿತವಾದ ಅಧ್ಯಯನ ತಂಡವೊಂದರ ಅಭಿಪ್ರಾಯ. ‘ಭಾರತದಲ್ಲಿ ಇಂಗ್ಲೀಷ್ ಅಧ್ಯಯನ’ ಎಂಬ ಹೆಸರಿನಿಂದ ಶಿಕ್ಷಣ ಸಚಿವ ಖಾತೆಯು ಈ ಅಧ್ಯಯನ ತಂಡದ ವರದಿಯನ್ನು ಪ್ರಕಟಿಸಿದೆ.

‘ಹೌಸ್–ಫುಲ್’
ನವದೆಹಲಿ, ಅ. 17–
ವಾಣಿಜ್ಯ ಜಾಹೀರಾತುಗಳಿಂದ ಮುಂಬೈ ಆಕಾಶವಾಣಿ ಈಗಾಗಲೇ ‘ಹೌಸ್ ಫುಲ್’. ನವೆಂಬರ್ 1ರಿಂದ ಆಕಾಶವಾಣಿ ಜಾಹೀರಾತು ಪ್ರಸಾರ ಮಾಡಲಿದೆ. ಆದರೆ ಆಸಕ್ತ ಜಾಹೀರಾತುದಾರರು ಸ್ಥಳವನ್ನು ನವೆಂಬರ್‌ನಿಂದ ಜನವರಿವರೆಗೆ ‘ಕಾದಿರಿಸಿದ್ದಾರೆ’. ಮೊದಲ ಮೂರು ತಿಂಗಳ ವಂತಿಗೆ ಈಗ ಪೂರ್ತಿ ಮುಗಿದಿದೆ.

ADVERTISEMENT

ಕನ್ನಡ ವಿಶ್ವಕೋಶ ಕಾರ್ಯ ತ್ವರಿತಗೊಳಿಸಲು ಪ್ರತ್ಯೇಕ ಇಲಾಖೆ ನಿರ್ಮಾಣ ಆಲೋಚನೆ
ಬೆಂಗಳೂರು, ಅ. 17–
ಕನ್ನಡ ವಿಶ್ವಕೋಶ ರಚನೆಯನ್ನು ತ್ವರಿತಗೊಳಿಸುವ ಮತ್ತು ಮಹಾಗ್ರಂಥಗಳನ್ನು ಕನ್ನಡಕದಲ್ಲಿ ಪ್ರಕಟಿಸುವ ಉದ್ದೇಶಕ್ಕಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಒಂದು ಹೊಸ ಇಲಾಖೆಯನ್ನು ನಿರ್ಮಿಸುವ ಪ್ರಯತ್ನ ನಡೆದಿದೆ.

ಪ್ರಕೃತ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ವಿಭಾಗವು ಶಿಕ್ಷಣ ಇಲಾಖೆಯ ಒಂದು ಅಂಗವಾಗಿದೆ. ಸರಕಾರದ ಮುಂದಿರುವ ಯೋಜನೆ ಅಂಗೀಕಾರವಾದರೆ ಕನ್ನಡ ವಿಶ್ವಕೋಶದ ಕಾರ್ಯ ಸುಗಮವಾಗಿ ನಡೆದು ಬೇಗ ಪೂರೈಸುವ ನಿರೀಕ್ಷೆ ಇದೆ.

ಮಿತವ್ಯಯದ ದೃಷ್ಟಿಯಿಂದ ಪ್ರತ್ಯೇಕ ಇಲಾಖೆಯ ಯೋಜನೆಯನ್ನು ಸರಕಾರ ತಿರಸ್ಕರಿಸಿದ್ದು ವಿಶ್ವಕೋಶ ನಿರ್ಮಾಣ ಕಾರ್ಯವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಪ್ಪಿಸುವ ಸಂಭವವಿದೆ.

ಆಕ್ರಮಣ ಕಾಲದಲ್ಲಿ ಮಾತ್ರವೇ ತುರ್ತು ಪರಿಸ್ಥಿತಿ ಬಳಕೆ ಸೂಕ್ತ: ಸಂತಾನಂ
ನವದೆಹಲಿ, ಅ. 17–
ಐದು ವರ್ಷಗಳ ಹಿಂದೆ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಮುಂದುವರಿಸುವುದರ ವಿರುದ್ಧ ಭಾರತ ಸಂವಿಧಾನದ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಕೆ. ಸಂತಾನಂ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ತುರ್ತು ಪರಿಸ್ಥಿತಿಯನ್ನು ತಕ್ಷಣವೇ ರದ್ದುಪಡಿಸುವ ಮಾರ್ಗಗಳನ್ನೂ ಕಂಡು ಹಿಡಿಯಬೇಕೆಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.