ನೆಹರೂ - ಮಹೇಂದ್ರ ಚರ್ಚೆಯಲ್ಲಿ ಇಂದು ನಿರ್ಣಾಯಕ ಘಟ್ಟ
ನವದೆಹಲಿ, ಏ. 21 - ನೇಪಾಳದ ರಾಜ ಮಹೇಂದ್ರ ಮತ್ತು ಪ್ರಧಾನ ಮಂತ್ರಿ ನೆಹರೂರವರ ನಡುವಣ ಮಾತುಕತೆಯು ನಾಳೆ ನಿರ್ಣಾಯಕ ಘಟ್ಟವನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ನಾಳೆ ಅವರ ಮಾತುಕತೆಯ ನಾಲ್ಕನೆಯ ದಿನ. ಭಾರತ ಮತ್ತು ನೇಪಾಳಗಳ ನಡುವಣ ಸಂಬಂಧವನ್ನು ಬಲಗೊಳಿಸುವುದೇ ಈ ಮಾತುಕತೆಯ ಉದ್ದೇಶ. ಈವರೆಗಿನ ಮಾತುಕತೆಯು ಪರಸ್ಪರರ ಶಂಕೆಗಳನ್ನು ನಿವಾರಿಸಲೋಸುಗ ತೆರೆದ ಮನಸ್ಸಿನಿಂದ ನಡೆದಿದೆಯೆಂದು ತಿಳಿಸಿರುವ ಬಲ್ಲ ಮೂಲಗಳು ನಾಳೆಯ ಮಾತುಕತೆಗಳು ಫಲದಾಯಕವಾಗುವುದೆಂದು ನಿರೀಕ್ಷಿಸಿವೆ. ನಾಳೆಯ ಮಾತುಕತೆಗೆ ಮುಂಚೆ ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ಮಾತುಕತೆ ನಡೆಯುವುದು.
ರಾಜ ಮಹೇಂದ್ರರು ಸೋಮವಾರ ಕಟ್ಮಂಡುವಿಗೆ ವಾಪಸಾಗಲಿದ್ದು, ಅಂದು ಈಗಿನ ಮಾತುಕತೆಗಳ ಬಗ್ಗೆ ಪ್ರಕಟಣೆಯೊಂದು ಹೊರಬೀಳುವ ನಿರೀಕ್ಷೆಯಿದೆ.
ಚಿನ್ನದ ಗಣಿಗಳನ್ನು ಕೇಂದ್ರಕ್ಕೆ ವಹಿಸುವ ಪ್ರಶ್ನೆ
ಬೆಂಗಳೂರು, ಏ. 21 - `ಕೋಲಾರ ಚಿನ್ನದ ಗಣಿಗಳಿಂದ ನಷ್ಟವಾಗಿದೆ~, `ಆಡಳಿತ ದಕ್ಷತೆಯು ಕಮ್ಮಿಯಾಗಿದೆ~ ಎಂಬ ಕಾರಣಗಳಿಂದ ಗಣಿಗಳ ಆಡಳಿತವನ್ನು ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಗುವುದೆಂಬ ಹೇಳಿಕೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿಯವರು ಇಂದು ನಿರಾಕರಿಸಿ, ಚಿನ್ನದ ಬೆಲೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಗನುಗುಣವಾಗಿ ಅದನ್ನು ಕೇಂದ್ರದ ವಶಕ್ಕೆ ನೀಡಲಾಗುವುದೆಂದರು.
ಚಿನ್ನದ ಗಣಿಗಳ ಆಡಳಿತದ ವರದಿಯನ್ನು ನೋಡಿದಲ್ಲಿ ಅವುಗಳಿಂದ ನಷ್ಟವಾಗಿಲ್ಲ ಹಾಗೂ ದಕ್ಷತೆಯ ಅಭಾವವಾಗಿಲ್ಲ ಎನ್ನುವುದು ಸ್ಪಷ್ಟವಾಗಿಲ್ಲವೆಂದು ಅವರು ತಿಳಿಸಿ, ರಾಷ್ಟ್ರೀಕರಣವಾದ ನಂತರ ಪ್ರತಿ ದಿನ ಪುಡಿ ಮಾಡುವ ಅದಿರಿನ ಪ್ರಮಾಣ ಜಾಸ್ತಿಯಾಗಿದೆಯೆಂದರು. ಈ ಬಗ್ಗೆ ಅಂಕಿ ಅಂಶಗಳನ್ನೊಳಗೊಂಡ ಪ್ರಕಟಣೆಯನ್ನು ಒಂದೆರಡು ದಿನಗಳಲ್ಲೇ ಬಿಡುಗಡೆ ಮಾಡಲಾಗುವುದೆಂದು ಅವರು ತಿಳಿಸಿದರು.
ಮೇ 7 ರಂದು ರಾಷ್ಟ್ರಪತಿ, ಉಪರಾಷ್ಟ್ರಪತಿಯ ಆಯ್ಕೆ
ನವದೆಹಲಿ, ಏ. 21 - ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯ ಸ್ಥಾನಕ್ಕೆ ಉಮೇದುವಾರಿಕೆಗಳನ್ನು ಸಲ್ಲಿಸುವವರಲ್ಲಿ ಯಾರೂ ಉಮೇದುವಾರಿಕೆಗಳನ್ನು ವಾಪಸು ಪಡೆದಿಲ್ಲವಾದ ಕಾರಣ ಆ ಸ್ಥಾನಗಳಿಗೆ ಮೇ 7 ರಂದು ಮತದಾನ ನಡೆಯುವುದು.
ಉಮೇದುವಾರಿಕೆಗಳನ್ನು ವಾಪಸು ಪಡೆಯಲು ಇಂದು ಕೊನೆಯ ದಿನವಾಗಿತ್ತು.
ರಾಷ್ಟ್ರಪತಿ ಸ್ಥಾನಕ್ಕೆ ಡಾ. ರಾಧಾಕೃಷ್ಣನ್, ಚೌಧುರಿ ಹರಿರಾಂ ಮತ್ತು ಶ್ರೀ ತ್ರಿಶೂಲಿಯ ಅವರುಗಳು ಸ್ಪರ್ಧಿಸಿದ್ದಾರೆ.
ಉಪರಾಷ್ಟ್ರಪತಿ ಸ್ಥಾನಕ್ಕೆ ಡಾ. ಜಕೀರ್ ಹುಸೇನ್ ಮತ್ತು ಶ್ರೀ ಎನ್. ಸಿ. ಸಾಮಂತ ಸಿನ್ಹ ಅವರುಗಳ ನಡುವೆ ಸ್ಪರ್ಧೆ ನಡೆಯಲಿದೆ.
ಮರಣ ದಂಡನೆಯ ರದ್ದಿಗೆ ಸಚಿವರ ವಿರೋಧ
ನವದೆಹಲಿ, ಏ. 21 - ಮರಣ ದಂಡನೆಯನ್ನು ರದ್ದುಪಡಿಸಬೇಕೆಂಬ ಖಾಸಗಿ ಸದಸ್ಯರೊಬ್ಬರ ನಿರ್ಣಯವನ್ನು ಕೇಂದ್ರ ಗೃಹ ಶಾಖೆಯಲ್ಲಿ ಸಚಿವರಾದ ಶ್ರೀ ಬಿ. ಎನ್. ದಾತಾರ್ ಅವರು ಇಂದು ಲೋಕ ಸಭೆಯಲ್ಲಿ ವಿರೋಧಿಸಿ, ದೇಶದ ಈಗಿನ ಪರಿಸ್ಥಿತಿಯಲ್ಲಿ ಇಂಥ ಕ್ರಮ ವಿಪತ್ಕಾರಕವೆಂದರು.
ಶ್ರೀ ರಘುನಾಥ್‌ಸಿಂಗ್‌ರವರ ನಿರ್ಣಯವೊಂದರ ಮೇಲೆ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿದ ಸಚಿವರು, ಪ್ರತಿ ವರ್ಷ ಭಾರತದಲ್ಲಿ ಸುಮಾರು ಹತ್ತು ಸಹಸ್ರ ಕೊಲೆಗಳಾಗುತ್ತಿವೆಯೆಂದೂ, ಮರಣ ದಂಡನೆಯನ್ನು ತೆಗೆದು ಬಿಟ್ಟರೆ ಕೊಲೆ ಪ್ರಕರಣಗಳು ಇನ್ನೂ ಹೆಚ್ಚಬಹುದೆಂದೂ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.