ADVERTISEMENT

ಭಾನುವಾರ, 5–5–1968

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 21:31 IST
Last Updated 4 ಮೇ 2018, 21:31 IST

‘ಮೈಸೂರಿನ ಆಕ್ಸ್‌ಫರ್ಡ್‌’ಗೆ ಶಂಕುಸ್ಥಾಪನೆ: ಬೆಂಗಳೂರು ವಾರ್ಸಿಟಿ ಹೊಸ ಕ್ಯಾಂಪಸ್ 

ಬೆಂಗಳೂರು, ಮೇ 4– ನಗರದ ಜಂಜಡದಿಂದ ದೂರ, ಮೈಗೆ ಹಾಯ್ ಎನಿಸುವ ತಂಗಾಳಿ, ಕಣ್ಣಿಗೆ ತಂಪು ನೀಡುವ ಹಸಿರು, ಅಲ್ಲೇ ಜ್ಞಾನ ಚಿಲುಮೆ, ಬೆಂಗಳೂರು
ವಿಶ್ವವಿದ್ಯಾನಿಲಯ.

ವೃಷಭಾವತಿಯ ತೀರ, ಕವಿ ‘ವಿನಾಯಕರಿಗೆ’ ಆಕ್ಸ್‌ಫರ್ಡ್ ನೆನಪು ತಂದಿತು. ರಾಜಕಾರಣಿ ನಿಜಲಿಂಗಪ್ಪನವರ ಮನಸ್ಸು ‘ಇಲ್ಲೇ ಇದ್ದು ಬಿಡಬೇಕು’ ಎಂದು ಹಾತೊರೆಯಿತು.

ADVERTISEMENT

ವಿಶ್ವವಿದ್ಯಾನಿಲಯದ ‘ಖಾಯಂ ಮನೆ’ ನಿರ್ಮಾಣ ಆರಂಭವಾಯಿತು.

ವಿಶ್ವವಿದ್ಯಾನಿಲಯದ ಪ್ರಥಮ ಕಟ್ಟಡದ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿಯವರು ‘ನಾಲ್ಕು ವರ್ಷದ ಶಿಶುವಿಗೆ ಅನಂತವಾದ ಬದುಕು, ಕೀರ್ತಿಯನ್ನು’ ಕೋರಿದರು.

**

ಮೈಸೂರು ಮುಖ್ಯಮಂತ್ರಿ ಪದವಿ ತ್ಯಾಗ: ಎಸ್ಸೆನ್

ಕೊಯಮತ್ತೂರು, ಮೇ 4– ಈ ತಿಂಗಳು 27 ಅಥವಾ 28 ರಂದು ಮೈಸೂರು ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.

ಮುಖ್ಯಮಂತ್ರಿ ಪದವಿ ತ್ಯಜಿಸಿದ ಬಳಿಕ ಪಕ್ಷದ ಕೆಲಸಗಳಲ್ಲಿ ನಿರತರಾಗಲು ತಾವು ಸ್ವತಂತ್ರರಾಗುವುದಾಗಿ ಕೊಚ್ಚಿನ್‌ ಪ್ರಯಾಣ ಮಾರ್ಗದಲ್ಲಿ ಶ್ರೀ ನಿಜಲಿಂಗಪ್ಪ ಅವರು ಇಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ತಿಳಿಸಿದರು.

**

ಚುನಾವಣಾ ಸಂಕೇತಗಳ ಮನ್ನಣೆ ವ್ಯವಸ್ಥೆ

ನವದೆಹಲಿ, ಮೇ 4– ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವ ಹಾಗೂ ಚುನಾವಣಾ ಸಂಕೇತಗಳನ್ನು ಮೀಸಲಿಡುವ ವ್ಯವಸ್ಥೆಯು ರಾಷ್ಟ್ರದಲ್ಲಿ ರಾಜಕೀಯ ಗುಂಪುಗಳು ಹೆಚ್ಚುವುದನ್ನು ತಗ್ಗಿಸುವ ವಿಧಾನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಶ್ರೀ ಎಸ್.ಪಿ. ಸನ್‌ವರ್ಮಾ ಅವರು ಇಂದು ಇಲ್ಲಿ ಹೇಳಿದರು.

ಉಪಾಧ್ಯಾಯರ ಕೊಲೆ ಆರೋ‍ಪ: ಇಬ್ಬರ ವಿರುದ್ಧ ಛಾರ್ಜ್ ಷೀಟ್

ನವದೆಹಲಿ, ಮೇ 4– ಜನಸಂಘದ ನಾಯಕ ದೀನದಯಾಳು ಉಪಾಧ್ಯಾಯರನ್ನು ಕಳೆದ ಫೆಬ್ರುವರಿಯಲ್ಲಿ ಮುಘಲ್ ಸರಾಯ್ ಬಳಿ ಚಲಿಸುತ್ತಿದ್ದ ಟ್ರೈನಿನಿಂದ ತಳ್ಳಿ ಕೊಂದ ಆರೋಪಕ್ಕಾಗಿ ಕೇಂದ್ರ ಗುಪ್ತಚಾರ ಶಾಖೆ ಇಂದು ವಾರಾಣಸಿಯ ಅಡಿಷನಲ್ ಜಿಲ್ಲಾ ಮ್ಯಾಜಿಸ್ಟ್ರೇಟರ್ (ಜುಡಿಷಿಯಲ್) ನ್ಯಾಯಾಲಯದಲ್ಲಿ ರಾಮ್ ಅವಧ್ ಮತ್ತು ಭರತಲಾಲ್ ಎಂಬಿಬ್ಬರ ವಿರುದ್ಧ ಛಾರ್ಜ್‌ಷೀಟ್ ಸಲ್ಲಿಸಿತು.

ಮುಘಲ್ ಸರಾಯ್‌ ಮತ್ತು ವಾರಾಣಸಿಯವರಾದ ಇಬ್ಬರೂ ಹಿಂದೆ ಶಿಕ್ಷೆಗಳನ್ನನುಭವಿಸಿದವರು.

ದಿ. ಉಪಾಧ್ಯಾಯರಿಂದ ಕದ್ದ ಕೆಲವು ಸಾಮಗ್ರಿಗಳನ್ನು ಪಡೆದುದಕ್ಕಾಗಿ ಇಂದು ಎಂಬ ಮಹಿಳೆಯೂ ಸೇರಿ ಎಂಟು ಜನರ ವಿರುದ್ಧವೂ ಮೊಕದ್ದಮೆ ಹೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.