ADVERTISEMENT

ಭಾನುವಾರ, 9-12-1962

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ನೀಫದಿಂದ ವಾಪಸಾಗುವುದಾಗಿ ಚೀಣಾ ಸ್ಪಷ್ಟನೆ
ನವದೆಹಲಿ, ಡಿ. 8 - ನೀಫ ಪ್ರದೇಶದಲ್ಲಿ ಎಲ್ಲ ಸಶಸ್ತ್ರ ಚೀಣಿ ಪಡೆಗಳೂ ಜಲ ವಿಭಾಜಕದ ಆಚೆಗೆ ಮ್ಯಕ್‌ಮಹೋನ್ ರೇಖೆ ಆಚೆ ವಾಪಸಾಗುವುವು. ಆದರೆ ಧೋಲ ಮತ್ತು ಲೋಂಗ್ಜುಗಳಲ್ಲಿ ಸಿವಿಲ್ ಠಾಣ್ಯಗಳನ್ನು ಸ್ಥಾಪಿಸಲಾಗುವುದು ಎಂದು ಚೀಣ ಸರ್ಕಾರದ ಇತ್ತೀಚಿನ ಪತ್ರ ನಿಖರವಾಗಿ ಸ್ಪಷ್ಟಪಡಿಸಿದೆ. ಚೀಣದ ಇತ್ತೀಚಿನ ಪತ್ರದ ವಿವರಗಳನ್ನು ಇಂದು ರಾಜ್ಯ ಸಭೆ ಮುಂದೆ ಮಂಡಿಸಿದ ಪ್ರಧಾನಿ ನೆಹ್ರೂ `ಪೀಕಿಂಗಿನ ಇತ್ತೀಚಿನ ವಿವರದಂತೆ ಚೀಣ ಖಂಜಮಾನೆ, ಕಿಬಿಟು, ವಾಲಾಂಗ್ ಠಾಣ್ಯಗಳನ್ನು ಬಿಟ್ಟು ಕೊಡಲು ಸಿದ್ಧವಿದೆ ಎಂದು ಹೇಳಬಹುದು' ಎಂದರು.

ತೈಲ ಸಮೃದ್ಧ ಬ್ರುನಿಯಲ್ಲಿ ಉಗ್ರ ಕದನ
ಸೆರಿಯ (ಬ್ರುನಿ), ಡಿ. 8 - ಶಸ್ತ್ರ ಸಜ್ಜಿತ ದಂಗೆಕೋರರನ್ನೆದುರಿಸಲು ಬ್ರಿಟಿಷ್ ಸೈನಿಕರು ಎಂಟು ವಿಮಾನಗಳಲ್ಲಿ ಇಂದು ತೈಲ ಸಮೃದ್ಧ ಬ್ರುನಿಗೆ ಆಗಮಿಸಿದರು. ಶಸ್ತ್ರ ಸಜ್ಜಿತ ದಂಗೆಕಾರರು ಇಂದು ಸೆರಿಯಾದಲ್ಲಿನ ಬ್ರುನಿಷೆಲ್ ಕಂಪೆನಿಯ ತೈಲ ಕೇಂದ್ರಗಳನ್ನು ವಶಪಡಿಸಿಕೊಂಡರು. ಸೆರಿಯಾದಲ್ಲಿ ಏಳು ಜನರು ಹತರಾಗಿ ಬಂಡಾಯಗಾರರು ನಾಲ್ಕು ಪೊಲೀಸ್ ಠಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆಂದು ಸಿಂಗಪುರದಲ್ಲಿನ ಬ್ರಿಟಿಷ್ ವಲಯಗಳು ತಿಳಿಸಿವೆ. ಬ್ರುನಿಯ ಸುಲ್ತಾರಾದ ಸರ್ ಓಮರ್ ಆಲಿ ಸೈಫುದ್ದೀನ್‌ರವರು ಇನ್ನೂ ಅಧಿಕಾರದಲ್ಲಿದ್ದಾರೆಂದೂ ಬ್ರುನಿಯ ರಾಜಧಾನಿಯು ಇನ್ನೂ ಮುಖ್ಯಮಂತ್ರಿಗಳ ಹತೋಟಿಯಲ್ಲಿಯೇ ಇದೆಯೆಂದೂ ಸಿಂಗಪುರದ ಉನ್ನತ ಮಟ್ಟದ ಬ್ರಿಟಿಷ್ ವಲಯಗಳು ತಿಳಿಸಿವೆ. ಬ್ರುನಿಯ ರಾಜಧಾನಿಯಲ್ಲಿ ಉಗ್ರ ಕದನ ನಡೆಯುತ್ತಿದೆಯೆಂದು ವರದಿಯಾಗಿದೆ.

ಬೇಸಿಗೆಯ ಹೊತ್ತಿಗೆ 30 ಲಕ್ಷ ಗ್ಯಾಲನ್ ಹೆಚ್ಚು ನೀರು ನಗರಕ್ಕೆ
ಬೆಂಗಳೂರು, ಡಿ. 8 - ಮುಂದಿನ ಬೇಸಿಗೆಯ ಕಾಲದಲ್ಲಿ ನಗರದ ನೀರು ಸರಬರಾಜು ಪರಿಸ್ಥಿತಿಯನ್ನು ಉತ್ತಮಪಡಿಸಲು ಆಸಕ್ತರಾಗಿರುವ ಕಾರ್ಪೊರೇಷನ್ ಸದಸ್ಯರು ಇಂದು ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಸುಮಾರು 3 ಮಿಲಿಯನ್ ಗ್ಯಾಲನ್‌ಗಳಷ್ಟು ಹೆಚ್ಚು ನೀರನ್ನು ಪಡೆಯಲು ನಡೆಯುತ್ತಿರುವ ಕಾರ್ಯವನ್ನು ಪರಿಶೀಲಿಸಿದರು. ನಗರಕ್ಕೆ ಸುಮಾರು 6 ಮೈಲಿ ದೂರದಲ್ಲಿ ಒಂದು ಕಡೆ ಮತ್ತು 9 ಮೈಲಿಯಲ್ಲಿ ಒಂದು ಕಡೆ ಈ ನಗರಕ್ಕೆ ಬರುತ್ತಿರುವ 2 ಪೈಪ್‌ಲೈನ್‌ಗಳಿಗೆ ಈಗ ಹಾಕುತ್ತಿರುವ 3ನೇ ಮೈನ್ ಪೈಪನ್ನು ಸೇರಿಸುವುದರಿಂದ 3 ಮಿಲಿಯನ್ ಗ್ಯಾಲನ್ ನೀರು ಹೆಚ್ಚು ಪಡೆಯಲು ಸಾಧ್ಯವಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.