ADVERTISEMENT

ಸೋಮವಾರ, 1–4–1968

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST

ಹುಟ್ಟಲಿಲ್ಲ ಹನ್ನೆರಡು ಲಕ್ಷ...
ನವದೆಹಲಿ, ಮಾ. 31–
ಕಳೆದ ಡಿಸೆಂಬರ್‌ಗೆ ಅಂತ್ಯವಾದ 1967ನೇ ವರ್ಷದಲ್ಲಿ ಹುಟ್ಟಬೇಕಾಗಿದ್ದ ಸುಮಾರು ಹನ್ನೆರಡು ಲಕ್ಷ ಮಕ್ಕಳು ಹುಟ್ಟಲಿಲ್ಲ. ಅದಕ್ಕೆ ಕಾರಣ ವಂಕಿ, ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆ ಮತ್ತು ಗರ್ಭನಿರೋಧಕಗಳು.

ಈ ಅಂಕಿ ಸಂಖ್ಯೆಗಳನ್ನು ಕುರಿತ ವರದಿ ಈಗ ತಾನೆ ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಯೋಜನಾ ಸಚಿವ ಖಾತೆಗೆ ತಲುಪಿದೆ.

ವರದಿಯಲ್ಲಿ ಕೊಟ್ಟಿರುವ ವಿವರಣೆಯ ಪ್ರಕಾರ, ಸಂತಾನ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ ಸಾಧನವೆಂದರೆ ವಂಕಿ. 5,61,000 ಮಕ್ಕಳು ಹುಟ್ಟುವುದನ್ನು ಈ ವಂಕಿ ತಡೆಯಿತು. ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆಯ ಪರಿಣಾಮವಾಗಿ 4,70,000
ಮಕ್ಕಳು ಹುಟ್ಟಲಿಲ್ಲ. ಗರ್ಭನಿರೋಧಕಗಳ ಬಳಕೆಯಿಂದ 1,34,000 ಮಕ್ಕಳು ಹುಟ್ಟುವುದು ತಪ್ಪಿತು.

ADVERTISEMENT

1967ರಲ್ಲಿ ದೇಶೀಯ ಹಾಗೂ ಹೊಟ್ಟೆಗೆ ಸೇವಿಸುವ ಗರ್ಭನಿರೋಧಕ ಔಷಧಿಗಳನ್ನು ಬಳಸಿದವರ ಸಂಖ್ಯೆ ಗೊತ್ತಾಗಿಲ್ಲ.

ನಗರದಲ್ಲಿ ಒಂದೇ ಅಂತಸ್ತಿನ ಮನೆ ಕಟ್ಟಲು ನಿಷೇಧ ಇರತಕ್ಕದ್ದೆಂದು ಶ್ರೀ ಅರಸು
ಬೆಂಗಳೂರು, ಮಾ. 31–
ಬೆಂಗಳೂರು ನಗರದಲ್ಲಿ ಒಂದೇ ಅಂತಸ್ತಿನ ಮನೆ ಕಟ್ಟುವುದನ್ನು ನಿಷೇಧಿಸಿ ಕಾನೂನು ಮಾಡಬೇಕಾದ ಅಗತ್ಯವಿದೆಯೆಂದು ಕಾರ್ಮಿಕ ಸಚಿವ ಶ್ರೀ ಡಿ. ದೇವರಾಜ ಅರಸುರವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ಮುಂಬೈಯಲ್ಲಿ ಮೂರಂತಸ್ತಿಗಿಂತ ಕಡಿಮೆ ಅಂತಸ್ತಿನ ಮನೆ ಕಟ್ಟುವುದನ್ನು ನಿಷೇಧಿಸಲಾಗಿದೆ. ಅಂತಹ ಕ್ರಮವನ್ನು ಬೆಂಗಳೂರಿನಲ್ಲಿ ಏಕೆ ಕೈಗೊಂಡಿಲ್ಲವೋ ಗೊತ್ತಾಗಿಲ್ಲ’ ಎಂದರು.

ರಾಜಾಜಿನಗರದಲ್ಲಿ ಸರಕಾರಿ ಎಲೆಕ್ಟ್ರಿಕ್ ಫ್ಯಾಕ್ಟರಿಯ ನೌಕರರ ವಸತಿ ತಂಡದ ಶಂಕುಸ್ಥಾಪನೆ ಮಾಡಿದ ಕಾರ್ಮಿಕ ಸಚಿವರು ಸರಕಾರ ಹೌಸಿಂಗ್ ಬೋರ್ಡ್ ಮತ್ತು ಕಾರ್ಪೋರೇಷನ್‌ಗಳು ಕೂಡ ಮನೆಗಳನ್ನು ಕಟ್ಟುವಾಗ ಹಲವು ಅಂತಸ್ತಿನ ಮನೆಗಳನ್ನು ಕಟ್ಟಬೇಕೆಂದು ಸಲಹೆ ಮಾಡಿದರು.

ಬೆಳ್ತಂಗಡಿ ಬಳಿ ರಫ್ತಿಗಾಗಿ 5 ಸಾವಿರ ಎಕರೆಯಲ್ಲಿ ಬಾಳೆ
ಬೆಂಗಳೂರು, ಮಾ. 31–
ಬೆಳ್ತಂಗಡಿ (ದಕ್ಷಿಣ ಕನ್ನಡ) ಸುತ್ತ ಮುತ್ತಲಿನ 5000 ಎಕರೆ ಪ್ರದೇಶದಲ್ಲಿ ವಿಶೇಷತಃ ವಿದೇಶಕ್ಕೆ ರಫ್ತು ಮಾಡಬಹುದಾದ ಬಾಳೆಹಣ್ಣನ್ನು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ.

ಬಾಳೆಹಣ್ಣು ಅಭಿವೃದ್ಧಿ ಕಾರ್ಪೋರೇಷನ್ ರೂಪಿಸಿರುವ ಈ ಯೋಜನೆಯಲ್ಲಿ ರಾಜ್ಯ ಸರಕಾರ ಮತ್ತು ಸಿಂಡಿಕೇಟ್ ಬ್ಯಾಂಕ್ ಪಾಲ್ಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.