ADVERTISEMENT

ಸೋಮವಾರ, 18–3–1968

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST

ಮಂಡಲ್‌ಗೆ ಬೆಂಬಲ ನೀಡಲು ಕಾಂಗ್ರೆಸ್ ಶಾಸಕರಲ್ಲಿ  ಒಡಕು: ಪಕ್ಷಾಂತರದ ಬೆದರಿಕೆ
ಪಟ್ನ, ಮಾ. 17– ಬಿಹಾರದ ಶ್ರೀ ಬಿ.ಪಿ. ಮಂಡಲ್ ಅವರ ಶೋಷಿತ ದಳ ಸರ್ಕಾರಕ್ಕೆ ಬೆಂಬಲ ನೀಡಬಾರದೆಂದು ಬಿಹಾರದ ಕಾಂಗ್ರೆಸ್ ಶಾಸಕ ಪಕ್ಷದ ಎಂಟು ಮಂದಿ ಸದಸ್ಯರು ಇಂದು ರಾತ್ರಿ ನಿರ್ಧರಿಸಿದರು.

ನಾಳೆ ವಿಧಾನ ಸಭೆಯಲ್ಲಿ ಶ್ರೀ ಮಂಡಲ್ ಸಂಪುಟದ ವಿರುದ್ಧ ಅವಿಶ್ವಾಸ ಸೂಚನೆಯನ್ನು ಮತಕ್ಕೆ ಹಾಕಿದಾಗ, ಪಕ್ಷದ ಆದೇಶವನ್ನು ಉಲ್ಲಂಘಿಸಿ, ಸೂಚನೆಯ ಪರವಾಗಿ ಮತ ನೀಡುವುದಾಗಿ ಕಾಂಗ್ರೆಸ್ ‘ಬಂಡಾಯಗಾರರ’ ನಾಯಕರಾದ ಮಾಜಿ ಸ್ವೀಕರ್ ಶ್ರೀ ಲಕ್ಷ್ಮೀ ನಾರಾಯಣ್ ಸುಧಾಂಶು ಅವರು ತಿಳಿಸಿದ್ದಾರೆ.

ತಮ್ಮ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವವರೆಗೆ ಪಕ್ಷವನ್ನು ತಾವಾಗಿಯೇ ಬಿಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ADVERTISEMENT

ಕಲ್ಕತ್ತದಲ್ಲಿ ಕೋಮು ಘರ್ಷಣೆ: ಗಲಭೆಕಾರರಿಗೆ ಕಂಡಲ್ಲೆ ಗುಂಡೇಟು
ಕಲ್ಕತ್ತ, ಮಾ. 17– ಕಲ್ಕತ್ತದಲ್ಲಿ ದೊಂಬಿಕೋರರನ್ನು ಲೂಟಿಕಾರರನ್ನು ಕಂಡಲ್ಲೆ ಗುಂಡಿಕ್ಕಿ ಹೊಡೆಯಲು ರಾಜ್ಯಪಾಲ ಧರ್ಮವೀರರ ಆಜ್ಞೆ. ಶಾಂತಿಗಾಗಿ ಪ್ರಧಾನಿ ಇಂದಿರಾ ಗಾಂಧಿಯವರ ಮನವಿ– ಇವು ಇಂದು ಹೊರಟವಾದರೂ ಕೋಮು ಗಲಭೆ ಮಾದರಿಯ ಪ್ರಕರಣಗಳು ಶಾಂತಿಯನ್ನು ಪ್ರಕ್ಷುಬ್ಧಗೊಳಿಸಿದ್ದವು. ನಾಲ್ಕು ದಿನಗಳಿಂದ ಇಲ್ಲಿ ಪರಿಸ್ಥಿತಿ ಹದಗೆಟ್ಟಿದೆ.

ಈ ದಿನ ನಡೆದ ಪ್ರಧಾನ ಪ್ರಕರಣವೆಂದರೆ ಉತ್ತರ ಕಲ್ಕತ್ತದಲ್ಲಿ ಕತ್ತಿ, ಲಾಠಿ ಮತ್ತು ಸ್ಫೋಟಕ ವಸ್ತುಗಳಿಂದ ಸಜ್ಜಾದ ಉದ್ರಿಕ್ತ ಜನರ ಭಾರಿ ಗುಂಪನ್ನು ಪೋಲೀಸರು ಚದುರಿಸಲು ಇಲ್ಲಿ ಹತ್ತು ಸುತ್ತು ಗುಂಡು ಹಾರಿಸಿದರು. ಈ ಗುಂಪು ಪೋಲೀಸ್ ರಕ್ಷಣೆಯಲ್ಲಿದ್ದ ಬಸ್ತಿಯೊಂದರ ಮೇಲೆ ನುಗ್ಗಲು ಹವಣಿಸಿತ್ತು.

ಗಾರ್ಕಿ ಜನ್ಮ ಶತಾಬ್ದಿಗೆ ವಿಶೇಷ ಸ್ಟಾಂಪ್
ನವದೆಹಲಿ, ಮಾ. 17– ರಷ್ಯದ ಸುಖ್ಯಾತ ಲೇಖಕ ಮಾಕ್ಸಿಂ ಗಾರ್ಕಿ ಜನ್ಮ ಶತಾಬ್ದಿ ಸಂದರ್ಭದಲ್ಲಿ ಅಂಚೆ ಮತ್ತು ತಂತಿ ಇಲಾಖೆಯು ಮಾರ್ಚಿ 28 ರಂದು 15 ಪೈಸೆ ಮೌಲ್ಯದ ವಿಶೇಷ ಅಂಚೆ ಚೀಟಿ ಪ್ರಕಟಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.