ADVERTISEMENT

ಸೋಮವಾರ, 22–4–1968

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 20:19 IST
Last Updated 21 ಏಪ್ರಿಲ್ 2018, 20:19 IST

ಮಂಗಳೂರಿನಲ್ಲಿ ಕರ್ಫ್ಯೂ ವೇಳೆಯಲ್ಲಿ ಲೂಟಿ
ಮಂಗಳೂರು, ಏ. 21–
ಕೋಮುವಾರು ಗಲಭೆಯಿಂದ ಪ್ರಕ್ಷುಬ್ಧ ಸ್ಥಿತಿ ಒದಗಿರುವ ಮಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಮುಂಜಾನೆಯವರೆಗೆ ಕರ್ಫ್ಯೂ ಜಾರಿಯಲ್ಲಿದ್ದರೂ, ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ರಾತ್ರಿಯೆಲ್ಲಾ ನಿಲ್ಲದೆ ನಡೆದವು.

ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರವಾದ ಬಂದರ್ ಪ್ರದೇಶದಲ್ಲಿ ಅನೇಕ ದಾಸ್ತಾನು ಮಳಿಗೆಗಳಿಗೆ ಗೂಂಡಾಗಳು ಬೆಂಕಿ ಹಚ್ಚಿದ್ದರು. ಆಗ್ನಿಶಾಮಕ ದಳದವರ 12 ಗಂಟೆಗಳ ಹೋರಾಟದ ನಂತರವೂ ಇಂದು ಬೆಳಿಗ್ಗೆ ಬಂದ‌ರ್ ಪ್ರದೇಶದ ಮೇಲೆ ಹೊಗೆಯ ಮೋಡಗಳು ಕವಿದಿದ್ದವು.

ಡಾ. ಆಳ್ವ ಕಳವಳ
ಬೆಂಗಳೂರು, ಏ. 21–
ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಆಗಿರುವ ಶಾಂತಿ ಭಂಗವು ತಮಗೆ ನೋವನ್ನುಂಟುಮಾಡಿದೆಯೆಂದು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ಕೆ. ನಾಗಪ್ಪ ಆಳ್ವ ಅವರು ಆತಂಕ ವ್ಯಕ್ತಪಡಿಸಿ, ದಕ್ಷಿಣ ಕನ್ನಡ ವಿಶೇಷತಃ ಮಂಗಳೂರಿನ ಕೀರ್ತಿಗೆ ಅದು ಮಸಿ ಬಳಿದಿದೆಯೆಂದೂ ತಿಳಿಸಿದ್ದಾರೆ.

ADVERTISEMENT

ಕರ್ಫ್ಯೂ ವಿಸ್ತರಣೆ
ಮಂಗಳೂರು, ಏ. 21–
ಕೋಮುವಾರು ಗಲಭೆಯು ಹೊಸ ಪ್ರದೇಶಗಳಿಗೆ ಹರಡಿದ್ದರ ಕಾರಣ ನಗರದಲ್ಲಿ ಜಾರಿಮಾಡಲಾಗಿರುವ ಕರ್ಫ್ಯೂವನ್ನು ಸಂಜೆಯಿಂದ ಬೆಳಗಿನವರೆಗೆ ಇಂದಿನಿಂದ ಏಲು ದಿನಗಳ ಕಾಲ ವಿಸ್ತರಿಸಲಾಗಿದೆ.

ಮೈಸೂರಿನಲ್ಲಿ ಕಾಲರಾದಿಂದ ಮತ್ತೆ 5 ಸಾವು
ಮೈಸೂರು, ಏ. 21–
ನಗರದಲ್ಲಿ ಇಂದು ಹೊಸದಾಗಿ ಕಾಲರಾ ರೋಗಕ್ಕೆ ಐದು ಮಂದಿ ಬಲಿಯಾದರೆಂದೂ ಹಾಗೂ ಇತರ 57 ಮಂದಿಗೆ ಬೇನೆ ತಗುಲಿರುವುದಾಗಿಯೂ ವರದಿಯಾಗಿದೆ.

ಭಾರತ – ಪಾಕ್ ಬಾಂಧವ್ಯ ಸುಧಾರಣೆ ಸಾಧ್ಯ: ಕೊಸಿಗಿನ್ ಆಶಯ
ನವದೆಹಲಿ, ಏ. 21– ಭಾರತ–
ಪಾಕಿಸ್ತಾನ್ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರಲು ಹೊಸ ಮಾರ್ಗವಾವುದನ್ನೂ ತಾವು ಯೋಚಿಸಿಲ್ಲವೆಂದು ರಷ್ಯದ ಪ್ರಧಾನಿ ಕೊಸಿಗಿನ್ ಇಂದು ಇಲ್ಲಿ ಹೇಳಿದರು.

ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಂದಿಗೆ ತೊಂಬತ್ತು ನಿಮಿಷ ಕಾಲ ಮಾತುಕತೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ತ್ರಿಭಾಷಾ ಸೂತ್ರವೇ ಏಕೈಕ ಪರಿಹಾರ: ಮುರಾರಜಿ ಸ್ಪಷ್ಟನೆ
ನವದೆಹಲಿ, ಏ. 21–
ಭಾಷಾ ಪ್ರಶ್ನೆಗೆ ಏಕೈಕ ಪರಿಹಾರವೆಂದರೆ ತ್ರಿಭಾಷಾ ಸೂತ್ರ ಎಂದು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಖಚಿತ ಪಡಿಸಿದ್ದಾರೆ.

ದೆಹಲಿಯ ತಮಿಳು ಮಾಸಪತ್ರಿಕೆಯ ಸಂದರ್ಶನದಲ್ಲಿ ಈ ಮಾತನ್ನು ಹೇಳಿರುವ ಅವರು ‘ಹತ್ತು ವರ್ಷಗಳಲ್ಲಿ ಪರಿಹಾರವೊಂದು ಕಾಣುವುದು ಖಂಡಿತ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.