ADVERTISEMENT

ಸೋಮವಾರ, 27–11–1967

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 19:30 IST
Last Updated 26 ನವೆಂಬರ್ 2017, 19:30 IST

ಪಕ್ಷಾಂತರ ಪ್ರವೃತ್ತಿಯಿಂದ ಪ್ರಜಾತಂತ್ರಕ್ಕೆ ಅಪಾಯ
ನವದೆಹಲಿ, ನ. 26–
ರಾಜ್ಯ ಶಾಸಕ ಪಕ್ಷಗಳ ಸದಸ್ಯರು ಪಕ್ಷ ತ್ಯಾಗ ಮಾಡುವುದನ್ನು ಅಥವಾ ಪಕ್ಷಾಂತರಗೊಳ್ಳುವುದನ್ನು ತಡೆಯದೆ, ಅದಕ್ಕೆ ಅವಕಾಶವಿತ್ತರೆ, ಅದು ನಮ್ಮ ಪ್ರಜಾಸತ್ತೆಯ ಅಡಿಪಾಯವನ್ನೇ ಶಿಥಿಲಗೊಳಿಸುವುದಲ್ಲದೆ ನಮ್ಮ ಚುನಾವಣೆಗಳನ್ನು ವಿನೋದಕ್ಕೂ ಪರಿಹಾಸಕ್ಕೂ ಈಡುಮಾಡುವುದೆಂದು ಪ್ರಧಾನ ಚುನಾವಣಾ ಕಮೀಷನರ್ ಶ್ರೀ ಎಸ್.ಪಿ. ಸೆನ್ ವರ್ಮ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ವಯಸ್ಕ ಮತದಾನ ಪದ್ಧತಿ’ ಬಗ್ಗೆ ಜನತಾ ಸೇವಕ ಸಮಾಜದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, ‘ತತ್ವಗಳ ಹಾಗೂ ನಿಶ್ಚಿತ ಅಭಿಪ್ರಾಯಗಳ ಕಾರಣ ಪಕ್ಷಾಂತರಗೊಳ್ಳುವ ಪ್ರಕರಣಗಳು ಇರಬಹುದು. ಅದಕ್ಕಾಗಿ ಯಾರೂ ಆಕ್ಷೇಪಿಸಬಾರದು. ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆದ ಪಕ್ಷಾಂತರ ಪ್ರಕರಣಗಳಲ್ಲಿ ಹೆಚ್ಚಿನವಕ್ಕೆ ಕೇವಲ ‘ವೈಯಕ್ತಿಕ ಕಾರಣಗಳೇ ಆಧಾರ’ ಎಂದರು.

‘ಈ ರೀತಿ ಪಕ್ಷಾಂತರಗೊಂಡವರ ವರ್ತನೆ, ತಾವು ವಿಧಾನಸಭೆಗೆ ಯಾವ ಪಕ್ಷದ ಟಿಕೆಟ್ ಪಡೆದು ಆರಿಸಿ ಬಂದರೊ ಆ ಪಕ್ಷದ ತತ್ವ, ಕಾರ್ಯಕ್ರಮ ಹಾಗೂ ನೀತಿಗಳಲ್ಲಿ ಅವರಿಗೆ ನಂಬಿಕೆ ಇಲ್ಲವೆಂಬುದಕ್ಕೆ ನಿದರ್ಶನ. ಇಂತಹ ಪ್ರಕರಣಗಳಲ್ಲಿ, ಪಕ್ಷಾಂತರಗೊಂಡವರಿಗೆ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ರಾಷ್ಟ್ರ ಕಲ್ಯಾಣಕ್ಕೆ ಸಂಬಂಧಿಸಿದ ಯಾವುದೇ ಉನ್ನತ ಹಾಗೂ ಉತ್ತಮ ತತ್ವಾದರ್ಶಗಳ ಸ್ಫೂರ್ತಿಯೂ ಇರುವುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

ಘಟೋದ್ಗಜ
ಬೆಂಗಳೂರು, ನ. 26–
ಜನ್ಮ ತಾಳಿದ ಎರಡು ವರ್ಷಗಳಲ್ಲಿ ‘ಅದ್ಭುತ ಪ್ರಗತಿ ತೋರಿಸಿದ’ ಹೆಬ್ಬಾಳದ ವ್ಯವಸಾಯ ವಿಶ್ವವಿದ್ಯಾಲಯವನ್ನು ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ‘ಘಟೋದ್ಗಜ’ನಿಗೆ ಹೋಲಿಸಿದರು.

‘ಹುಟ್ಟಿದ ಹದಿನಾರು ದಿನಗಳಲ್ಲಿ ಘಟೋದ್ಗಜ, ತಂದೆ ಭೀಮನನ್ನು ಸೋಲಿಸಿದ. ಅದೇ ರೀತಿಯ ಕ್ಷಿಪ್ರ ಪ್ರಗತಿಯನ್ನು ವಿಶ್ವವಿದ್ಯಾಲಯವೂ ತೋರಿಸಿದೆ. ಅದು ಇನ್ನಷ್ಟು ಸಾಮರ್ಥ್ಯ ಪಡೆಯಲಿ’ ಎಂದು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.