ADVERTISEMENT

ಸೋಮವಾರ, 30–12–1968

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 19:45 IST
Last Updated 29 ಡಿಸೆಂಬರ್ 2018, 19:45 IST
   

ಬೈರೂತ್‌ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್‌ ದಾಳಿ: ಹದಿಮೂರು ಅರಬ್‌ ವಿಮಾನಗಳ ಭಸ್ಮ

ಬೈರೂತ್‌, ಡಿ.29– ಬೈರೂತ್‌ ಅಂತರಾಷ್ಟ್ರ ವಿಮಾನ ನಿಲ್ದಾಣ ನಿನ್ನೆ ರಾತ್ರಿ ಇಸ್ರೇಲಿ ಹೆಲಿಕಾಪ್ಟರುಗಳ ನಿರ್ಭೀತ ದಾಳಿಗೆ ತುತ್ತಾಗಿ ಹದಿಮೂರು ಅರಬ್‌ ವಿಮಾನಗಳು ಸುಟ್ಟು ಕಪ್ಪಾದವು.

ಮಧ್ಯ ಪ್ರಾಚ್ಯದಲ್ಲಿಯೇ ಅತ್ಯಾಧುನಿಕ, ಅತಿ ದೊಡ್ಡ ಹಾಗೂ ಬಿಡುವಿಲ್ಲದ ಈ ವಿಮಾನ ನಿಲ್ದಾಣ ಇಸ್ರೇಲಿಗಳ ಪ್ರತೀಕಾರಕ್ಕೆ ಗುರಿಯಾಯಿತು. ಮೂರು ದಿನಗಳ ಹಿಂದೆ ಅಥೆನ್ಸಿನಲ್ಲಿ ಇಸ್ರೇಲಿ ಬೋಯಿಂಗ್‌ ಜೆಟ್‌ ವಿಮಾನದ ಮೇಲೆ ಅರಬ್‌ ಸೈನ್ಯದಳ ನಡೆಸಿದ್ದ ದಾಳಿಗೆ ಇಸ್ರೇಲಿಗಳ ನೇರ ಪ್ರತಿಕ್ರಮವಿದು.

ADVERTISEMENT

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಹೊರಗಿನವರ ಆಸಕ್ತಿ: ಕೇಂದ್ರದ ವಿಳಂಬ ನೀತಿಗೆ ಆಕ್ಷೇಪಣೆ

ಬೆಂಗಳೂರು, ಡಿ.29– ಮೈಸೂರು ರಾಜ್ಯದಲ್ಲಿ ನಾವು ಕೈಗಾರಿಕೆಗಳನ್ನು ಸ್ಥಾಪಿಸಲು ಸಿದ್ಧರಿದ್ದೇವೆ. ಆದರೆ ದೆಹಲಿಯಲ್ಲಿ ನಮ್ಮ ಯೋಜನೆಗಳಿಗೆ ಅನುಮತಿ ದೊರೆಯುವುದರಲ್ಲಿ ತುಂಬ ವಿಳಂಬವಾಗುತ್ತಿದೆ.

ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ಕಳೆದ 3 ದಿನಗಳ ಕಾಲದಲ್ಲಿ ಮುಂಬೈನಲ್ಲಿ ಭೇಟಿ ಮಾಡಿದ ಕೈಗಾರಿಕೋದ್ಯಮಿಗಳಿಂದ ಕೇಳಿದ ಕಟು ಆಕ್ಷೇಪಣೆಯಿದು.

ಕಣ್ಣು ತುಂಬಿದ ಪಶುಪಕ್ಷಿ ಪರಿಷೆ

ಬೆಂಗಳೂರು, ಡಿ.29– ಅವರಿಗೆ ಅದೊಂದು ಅದ್ಭುತ ದೃಶ್ಯ.

ಮುಂಜಾನೆಯಿಂದ ಸಂಜೆವರೆಗೆ ಹೊಲ ಗದ್ದೆಗಳಲ್ಲಿ ಜಾನುವಾರುಗಳೊಡನೆ ಅನ್ನ ಹುಡುಕುವವರಾದರೂ, ತಮ್ಮಲ್ಲಿರುವವುಗಳಿಗಿಂತ ಹತ್ತುಪಟ್ಟು ಪುಷ್ಟವಿರುವ ಹೋರಿಗಳನ್ನು ಕಂಡಾಗ, ಮೂರಡಿ ಎತ್ತರದ ಕೊಬ್ಬು ಮಿಂಚುವ ಹಂದಿಗಳನ್ನು ನೋಡಿದಾಗ, ಅಡಿಯೆತ್ತರ, ಅಷ್ಟೇ ದಪ್ಪದ ಸುಂದರ ಕೋಳಿಗಳ್ನು ಮುಟ್ಟಿದಾಗ, ಆನಂದದಿಂದ ಕಣ್ಣು ಮಿನುಗಿದರೂ, ಜತೆಗೆ ಅದ್ಯಾವುದೋ ಅವ್ಯಕ್ತ ಸಂತಾಪ.

‘ಇವೆಲ್ಲ ನಮ್ಮೂರ‍್ಗೂ ಬರೋ ಕಾಲ ಇದ್ಯೆ?’ ನೆಲಮಂಗಲದ ದೊಡ್ಡಣ್ಣ ತನಗರಿವಿಲ್ಲದೆ ಆಡಿದ ಮಾತು. ಸುಭಾಷ್‌ ನಗರದಲ್ಲಿ ಇಂದು ಆರಂಭವಾದ ಅಖಿಲಭಾರತ ಜಾನುವಾರು ಮತ್ತು ಕುಕ್ಕುಟ ಪ್ರದರ್ಶನ ನೋಡಲು ಬಂದ ನಗರ ಸಮೀಪದ ಗ್ರಾಮಗಳ ನೂರಾರು ರೈತರು, ಅವರ ಮಡದಿಯರ ಬಾಯಿಗಳಿಂದಲೂ ಹೊರಟಿರಬೇಕು– ಬೇರೆ ಬೇರೆ ರೀತಿಗಳಲ್ಲಿ.

ರಾಜ್ಯ ಸಂಪುಟದ ವಿಸ್ತರಣೆ ಇನ್ನಿಲ್ಲ

ಬೆಂಗಳೂರು, ಡಿ.29– ತಮ್ಮ ಮಂತ್ರಿ ಮಂಡಲವನ್ನು ಇನ್ನು ಹೆಚ್ಚು ವಿಸ್ತರಿಸುವುದಿಲ್ಲವೆಂದು ಮುಖ್ಯಮಂತ್ರಿ, ಶ್ರೀ ವೀರೇಂದ್ರ ಪಾಟೀಲ್‌ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.