ADVERTISEMENT

25 ವರ್ಷಗಳ ಹಿಂದೆ | ಬುಧವಾರ 15–3–1995

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:52 IST
Last Updated 14 ಮಾರ್ಚ್ 2020, 19:52 IST

ಚುನಾವಣೆ ಮೇಲೆ ಕಣ್ಣು–ಸಾಮಾನ್ಯರಿಗೆ ಹೊರೆ ಇಲ್ಲದ ರೈಲ್ವೆ ಬಜೆಟ್
ನವದೆಹಲಿ, ಮಾರ್ಚಿ 14 (ಪಿಟಿಐ, ಯುಎನ್‌ಐ): ಕಳೆದ ಹಲವು ವರ್ಷಗಳಲ್ಲಿ ಇದೀಗ ಮೊದಲ ಬಾರಿಗೆ ಎರಡನೇ ದರ್ಜೆ ಪ್ರಯಾಣಿಕನ ಮೇಲೆ ಕರುಣೆ ತೋರಿರುವ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಅವರು ವಿಲಾಸಿ ದರ್ಜೆಗಳ ಪ್ರಯಾಣ ದರಗಳನ್ನು ಶೇಕಡಾ 10ರಷ್ಟು ಹಾಗೂ ಸರಕು ಸಾಗಣೆ ದರವನ್ನು ಶೇಕಡಾ 7ರಷ್ಟು ಏರಿಸಿದರು. ಪ್ಯಾಸೆಂಜರ್ ರೈಲುಗಳ ಮೊದಲ ದರ್ಜೆ ಟಿಕೆಟಿಗೆ ದರ ಹೆಚ್ಚಿಸಲಾಗಿಲ್ಲ.

ರಾಜ್ಯಕ್ಕೆ ಮೂರು ಹೊಸ ರೈಲು
ನವದೆಹಲಿ, ಮಾರ್ಚಿ 14–ಹುಬ್ಬಳ್ಳಿ–ಬೆಂಗಳೂರು ನಡುವಣ ಶತಾಬ್ದಿ ಎಕ್ಸ್‌ಪ್ರೆಸ್, ಬೆಂಗಳೂರು–ಮಿರಜ್‌ಗೆ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು–ಅಲೆಪ್ಪಿಗೆ ಕ್ವಿಲಾನ್ ಮಾರ್ಗವಾಗಿ ವಾರಕ್ಕೊಮ್ಮೆ ರೈಲು ಮತ್ತು ಬಂಗಾರಪೇಟೆ–ಮಾರಿಕುಪ್ಪಂ ಹಾಗೂ ಹೊಸಪೇಟೆ–ಕೊಟ್ಟೂರು ಮತ್ತು ಹೊಸಪೇಟೆ–ಸ್ವಾಮಿಹಳ್ಳಿಗೆ ರೈಲ್ ಬಸ್.

ಕೊಟ್ಟೂರು–ಹರಿಹರ ನಡುವೆ ಹೊಸ ಮಾರ್ಗ ನಿರ್ಮಾಣ ಮತ್ತು ಹಾಸನ–ಮೈಸೂರು ನಡುವಣ ಗೇಜ್ ಪರಿವರ್ತನೆ ಇವು ಕರ್ನಾಟಕಕ್ಕೆ 1995–96ರ ರೈಲ್ವೆ ಬಜೆಟ್‌ನಲ್ಲಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ನೀಡಿರುವ ಹೊಸ ಕೊಡುಗೆ.

ADVERTISEMENT

ಎರಡನೇ ಸುತ್ತಿನ ಪಂಚಾಯ್ತಿ ಚುನಾವಣೆ ಇಂದು
ಬೆಂಗಳೂರು, ಮಾರ್ಚಿ 14– ರಾಜ್ಯದ 16 ಜಿಲ್ಲೆಗಳ 55 ತಾಲ್ಲೂಕುಗಳಲ್ಲಿ ಜಿಲ್ಲಾ ಮತ್ತು ಪಂಚಾಯತಿ ಚುನಾವಣೆಗೆ ಎರಡನೇ ಸುತ್ತಿನಲ್ಲಿ ನಾಳೆ ಮತದಾನ ನಡೆಯಲಿದೆ. ಒಟ್ಟು 287 ಜಿಲ್ಲಾ ಪಂಚಾಯತಿ ಹಾಗೂ 1055 ತಾಲ್ಲೂಕು ಪಂಚಾಯತಿ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸುಮಾರು 67.78 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.

ಬಿಹಾರ ಬಿಕ್ಕಟ್ಟು ನಿವಾರಣೆಗೆ ಕ್ರಮ: ಶುಕ್ಲಾ
ನವದೆಹಲಿ, ಮಾರ್ಚಿ 14 (ಯುಎನ್‌ಐ): ಬಿಹಾರ ಪರಿಸ್ಥಿತಿ ಕುರಿತು ರಾಜ್ಯಪಾಲರು ಕಳುಹಿಸಿದ ವರದಿ ಲಭಿಸಿದ್ದು, ನಿರ್ಧಾರವನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿರೋಧಪಕ್ಷಗಳಿಗೆ ಸಂಸದೀಯ ವ್ಯವಹಾರ ಸಚಿವ ವಿ.ಸಿ. ಶುಕ್ಲಾ ಆಶ್ವಾಸನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.