ಸಮಾನ, ಸುಂದರ ನಾಡು: ಮಂಡೇಲಾ ಪಣ
ಪ್ರಿಟೋರಿಯಾ, ಮೇ 10 (ಎಪಿ)– ದಕ್ಷಿಣ ಆಫ್ರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರಾಗಿ ಡಾ. ನೆಲ್ಸನ್ ಮಂಡೇಲಾ ಇಂದು ಭವ್ಯ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕದ ವರ್ಣನೀತಿ ಕೊನೆಗೊಂಡಿತು. ದಕ್ಷಿಣ ಆಫ್ರಿಕ ವಿಶ್ವ ಸಮುದಾಯವನ್ನು ಸೇರಿತು. ‘ಸ್ವಾತಂತ್ರ್ಯಕ್ಕೆ ಗೆಲುವಾಗಲಿ’ ಎಂದು ಮಂಡೇಲಾ ಘೋಷಿಸಿದರು.
ಶೇಷನ್ ಅಧಿಕಾರಕ್ಕೆ ಕತ್ತರಿ ಸಂಭವ
ನವದೆಹಲಿ, ಮೇ 10 (ಯುಎನ್‌ಐ)– ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಾಳೆ ಮಂಡಿಸಲಾಗುವ ಎರಡು ಮಸೂದೆಗಳ ಮೂಲಕ ಮುಖ್ಯ ಚುನಾವಣಾ ಆಯುಕ್ತರ ಅಧಿಕಾರಕ್ಕೆ ಗಣನೀಯವಾಗಿ ಕತ್ತರಿ ಹಾಕಲು ಕೇಂದ್ರ ಸರ್ಕಾರ ಬಯಸಿದೆ.
ಲೋಕಸಭಾ ಸ್ಪೀಕರ್ ಶಿವರಾಜ ಪಾಟೀಲ್ ಅವರು ಕರೆದಿದ್ದ ಸಭೆಯೊಂದರಲ್ಲಿ, ಸಂವಿಧಾನಕ್ಕೆ ಮತ್ತು ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದಂತೆ ಎರಡು ಕರಡು ಮಸೂದೆಯನ್ನು ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ನೀಡಲಾಯಿತು. ಚುನಾವಣಾ ಆಯುಕ್ತರಿಗೆ ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ಸಮಾನ ಹಕ್ಕು ಮತ್ತು ಅಧಿಕಾರಗಳನ್ನು ನೀಡುವುದು, ಅವರೊಳಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಬಹುಮತದ ನಿರ್ಧಾರ ಕೈಗೊಳ್ಳುವುದು ಮುಂತಾದ ವಿಷಯಗಳನ್ನು ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ.
ಹಿರಿಯ ನಾಟಕಕಾರ ಜೋಳದರಾಶಿ ದೊಡ್ಡನಗೌಡ ಇನ್ನಿಲ್ಲ
ಬಳ್ಳಾರಿ, ಮೇ 10– ಕನ್ನಡದ ಹಿರಿಯ ನಾಟಕಕಾರ, ಕಲಾವಿದ ಮತ್ತು ಗಮಕಿಗಳೂ ಆಗಿದ್ದ ಡಾ. ಜೋಳದರಾಶಿ ದೊಡ್ಡನಗೌಡ ಅವರು ಇಂದು ಮಧ್ಯಾಹ್ನ ಸ್ವಗ್ರಾಮವಾದ ಜೋಳದರಾಶಿಯಲ್ಲಿ ನಿಧನರಾದರು. ಅವರಿಗೆ 85 ವಯಸ್ಸಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.