ADVERTISEMENT

25 ವರ್ಷಗಳ ಹಿಂದೆ: ಸೋಮವಾರ 14.4.1997

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 15:34 IST
Last Updated 13 ಏಪ್ರಿಲ್ 2022, 15:34 IST
   

ಹೊಸ ನಾಯಕನ ಆಯ್ಕೆಗೆ ರಂಗ ಕಾಂಗ್ರೆಸ್‌ ಮಾತುಕತೆ ಆರಂಭ

ನವದೆಹಲಿ, ಏ. 13– ಸಂಯುಕ್ತ ರಂಗವು ಮತ್ತೆ ಕಾಂಗ್ರೆಸ್‌ ಬೆಂಬಲ ಪಡೆದು ಸರ್ಕಾರ ರಚಿಸಲು ಈಗಾಗಲೇ ಅನೌಪಚಾರಿಕವಾಗಿ ಮಾತುಕತೆ ಆರಂಭವಾಗಿದೆ. ಈ ಮಧ್ಯೆ ಮಧ್ಯಂತರ ಚುನಾವಣೆಗೆ ಪಟ್ಟು ಹಿಡಿದಿದ್ದ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಂಗದಲ್ಲಿ ಬಂದ ಒತ್ತಡದಿಂದ ಸಂಯುಕ್ತ ರಂಗದ ಅಧ್ಯಕ್ಷ ಸ್ಥಾನವನ್ನು ತೆರವು ಮಾಡಲು ಬಯಸಿದ್ದಾರೆ.

ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಸಭೆ ಮತ್ತು ಜನತಾದಳದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಸಂಯುಕ್ತ ರಂಗದ ಅಧ್ಯಕ್ಷ ಸ್ಥಾನವನ್ನು ಗೌಡರು ತೆರವು ಮಾಡಬೇಕೆಂದು ಬಂದ, ಸ್ಪಷ್ಟ ಅಭಿಪ್ರಾಯವು ರಾತ್ರಿ ನಡೆದ ರಂಗದ ಚಾಲನಾ ಸಮಿತಿ ಸಭೆಯಲ್ಲೂ ಪ್ರತಿಧ್ವನಿಸಿತು. ಕೊನೆಗೆ ಗೌಡರು ಸಂಯುಕ್ತ ರಂಗಕ್ಕೆ ಅನಿವಾರ್ಯವೆನಿಸಿದರೆ ತಾವು ತಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವ ಇಂಗಿತವನ್ನು ವ್ಯಕ್ತಪಡಿಸಿದರೆಂದು ರಂಗದ ವಕ್ತಾರ ಎಸ್. ಜೈಪಾಲ್ ರೆಡ್ಡಿ ವರದಿಗಾರರಿಗೆ ತಿಳಿಸಿದರು.

ADVERTISEMENT

ಪ್ರದೇಶಿಕ ಪಕ್ಷಗಳ ಬೆಂಬಲಕ್ಕೆ ಬಿಜೆಪಿ ಯತ್ನ

ಲಖನೌ, ಏ. 13 (ಪಿಟಿಐ)– ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ’ (ಎನ್‌ಡಿಎಫ್) ರಚಿಸಲು ಯತ್ನಿಸುತ್ತಿವೆ ಎಂದು ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದಾರೆ.

ಈ ರಂಗವು ಕೇಂದ್ರದಲ್ಲಿ ಸರ್ಕಾರ ರಚನೆಗೆ ಯತ್ನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ‘ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿ ಅವರಿಗೆ ತಿಳಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.