ADVERTISEMENT

25 ವರ್ಷಗಳ ಹಿಂದೆ: ಗುರುವಾರ, 23–2–1995

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 23:17 IST
Last Updated 22 ಫೆಬ್ರುವರಿ 2020, 23:17 IST

ದಳದ ಸಹ ಸದಸ್ಯರಾಗಿ ಎಂಟು ಪಕ್ಷೇತರರು
ಬೆಂಗಳೂರು, ಫೆ. 22:
ಸರ್ಕಾರ ರಚಿಸಲು ಬೇಕಾದ 113 ಮಂದಿ ಸದಸ್ಯರ ನಿಖರ ಬಲವನ್ನು ಮಾತ್ರ ಹೊಂದಿರುವ ಆಡಳಿತಾರೂಢ ಜನತಾದಳ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಿ ಎಂಟು ಮಂದಿ ಪಕ್ಷೇತರರು ಸೇರಿಕೊಂಡು ಸರ್ಕಾರವನ್ನು ಬಲಪಡಿಸಿದ್ದಾರೆ.

ಜನತಾದಳದ ತತ್ವ ಮತ್ತು ಸಿದ್ಧಾಂತಗಳಲ್ಲಿ ನಂಬಿಕೆಯಿದೆ ಎಂದು ಸಹ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಒಪ್ಪಿರುವ ಈ ಎಂಟು ಮಂದಿ ವಿಧಾನಸಭಾ ಸದಸ್ಯರಲ್ಲಿ ನಾಲ್ವರು ಕಾಂಗ್ರೆಸ್‌ ಮತ್ತು ಮೂವರು ದಳದ ಬಂಡಾಯ ಅಭ್ಯರ್ಥಿಗಳು. ಒಬ್ಬರು ಮಾತ್ರ ನಿಜವಾದ ಅರ್ಥದಲ್ಲಿ ಪಕ್ಷೇತರರಾಗಿದ್ದರು. ‌

ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿರುವ ಸಂಗಣ್ಣ ಕರಡಿ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಾಗಿ ಗೆದ್ದು ಬಂದಿರುವ ಬಳ್ಳಾರಿಯ ದಿವಾಕರ್‌ ಬಾಬು, ಹರಿಹರದ ಎಚ್‌.ಶಿವಪ್ಪ, ಹೊಸದುರ್ಗದ ಟಿ.ಎಚ್‌.ಬಸವರಾಜು ಮತ್ತು ದಳದ ಬಂಡಾಯ ಅಬ್ಯರ್ಥಿಗಳಾದ ಹರಪನಹಳ್ಳಿಯ ಡಿ.ನಾರಾಯಣ ದಾಸ್‌, ಭದ್ರಾವತಿಯ ಎಂ.ಜೆ.ಅಪ್ಪಾಜಿ ಮತ್ತು ಚಿಕ್ಕಬಳ್ಳಾಪುರದ ಎಂ.ಶಿವಾನಂದ ಈಗ ದಳದ ಸಹ ಸದಸ್ಯರಾಗಿದ್ದಾರೆ.

ADVERTISEMENT

ಹೆಣ್ಣಾದ ಶೇಷನ್‌!
ಲಖನೌ, ಫೆ. 22 (ಯುಎನ್‌ಐ):
ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌.ಶೇಷನ್‌ ಅವರು ಡೆಹ್ರಾಡೂನ್‌ ತೈಲ ಮತ್ತು ನೈಸರ್ಗಿಕ ಆಯೋಗದ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ, ಚುನಾವಣೆ ಬಂತು. ಶೇಷನ್‌ ಸಂಭ್ರಮದಿಂದ ಮತದಾನ ಮಾಡಲು ಹೋದರು. ಆದರೆ ಮತಗಟ್ಟೆ ಅಧಿಕಾರಿ ಮತ ಚಲಾಯಿಸಲು ಅವಕಾಶ ಕೊಡಲಿಲ್ಲ. ಏಕೆಂದರೆ ಮತದಾರ ಯಾದಿಯಲ್ಲಿ ಅವರ ಹೆಸರಿನ ಮುಂದೆ ‘ಮಹಿಳೆ’ ಎಂದು ಬರೆದಿತ್ತು. ಲಖನೌ ವಿವಿಯಲ್ಲಿ ಇಂದು ಮಾತನಾಡುತ್ತ ಶೇಷನ್‌ ಈ ಘಟನೆಯನ್ನು ಮೆಲುಕು ಹಾಕಿದರು. ‘ನಾನು ಯಾವುದೇ ಪಕ್ಷಕ್ಕೆ ಸೇರಿದವಲ್ಲ. ಆದರೂ ಮನೆಯಲ್ಲಿ (ಪತ್ನಿ ಜತೆ) ಸಮ್ಮಿಶ್ರ ಸರ್ಕಾರ’ ಎಂದರು.

ಭಕ್ತಿ ಭಾವ: ಮೊಯಿಲಿಗೆ ದೇವೇಗೌಡ ಪ್ರತ್ಯುತ್ತರ
ಬೆಂಗಳೂರು, ಫೆ. 22:
‘ಜ್ಯೋತಿಷ್ಯ ಕೇಳುತ್ತಾರೆ; ಮಠಾಧೀಶರ ಬಳಿಗೆ, ತಿರುಪತಿಗೆ ಹೋಗುತ್ತಾರೆ’ ಎಂದು ಬರೆದುಕೊಳ್ಳಿ; ತಕರಾರಿಲ್ಲ. ‘ಇನ್ನೇನು ದುಖಾನ್‌ಗೆ ಹೋಗುತ್ತಾರೆ; ಕಳ್ಳಂಗಡಿಗೆ ಹೋಗುತ್ತಾರೆ’ ಎಂದು ಬರೆಯಲು ಸಾಧ್ಯವೇ?’

ದೇವೇಗೌಡರು ಮಠಾಧಿಪತಿಗಳ ಪರವಾಗಿ ವಾಲುತ್ತಿರುವ ಬಗ್ಗೆ ‘ಮಾಜಿ ಮುಖ್ಯಮಂತ್ರಿ ಅವರು ಆರೋಪ ಮಾಡಿದ್ದಾರಲ್ಲಾ’ ಎಂದು ವರದಿಗಾರರೊಬ್ಬರುಪ್ರಶ್ನಿಸಿದಾಗ ಅವರು ಈ ರೀತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.