ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ, 28–4–1995

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:45 IST
Last Updated 27 ಏಪ್ರಿಲ್ 2020, 19:45 IST

ಮನೆ ಮಾಲೀಕರಿಗೆ ಸ್ವಾತಂತ್ರ್ಯ
ಬೆಂಗಳೂರು, ಏ. 27–
ಮನೆ ಮಾಲೀಕರು– ಬಾಡಿಗೆಗೆ ಬಯಸುವ ಅರ್ಜಿದಾರರು ಹಾಗೂ ಬಾಡಿಗೆದಾರರಿಗೆ ಕಿರುಕುಳ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರಕ್ಕೆ ಮಾತ್ರ ಅನ್ವಯಿಸುವಂತೆ ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆಯ ಕೆಲವು ವಿಧಿಗಳನ್ನು ನಿಷ್ಕ್ರಿಯಗೊಳಿಸಿ ಅಧಿಸೂಚನೆಯನ್ನು ಹೊರಡಿಸಿದೆ.

ಈ ಅಧಿಸೂಚನೆಯಿಂದಾಗಿ ಬಾಡಿಗೆ ನಿಯಂತ್ರಣ ಇಲಾಖೆ ಅಧಿಕಾರಿಗಳ ಬಿಗಿಮುಷ್ಟಿಯಿಂದ ಮನೆ ಮಾಲೀಕರು ಪಾರಾಗಿ ತಮಗೆ ಬೇಕಾದವರಿಗೆ ತಮ್ಮ ಮನೆಗಳನ್ನು ಬಾಡಿಗೆಗೆ ಕೊಡಲು ಅವಕಾಶ ಸಿಗುವುದಲ್ಲದೆ, ಸಾರ್ವಜನಿಕರು ನೇರವಾಗಿ ಮನೆಗಳನ್ನು ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.

‘ರೈಲು ಪ್ರಯಾಣಿಕರಿಗೆ ವಂಚನೆ’
ರಾಯಚೂರು, ಏ. 27–
ಬೆಂಗಳೂರು ಹಾಗೂ ರಾಯಚೂರು ನಡುವಿನ ವಾಸ್ತವಿಕ ಅಂತರ 418 ಕಿ.ಮೀ. ಆಗಿದ್ದರೂ 498 ಕಿ.ಮೀ.ಗೆ ಪ್ರಯಾಣದರವನ್ನು ವಸೂಲು ಮಾಡುತ್ತಿರುವ ರೈಲ್ವೆ ಇಲಾಖೆ ಕಳೆದ 12 ವರ್ಷಗಳಲ್ಲಿ ಹಲವಾರು ಕೋಟಿ ರೂಪಾಯಿಯನ್ನು ತನ್ನ ಗ್ರಾಹಕರಿಗೆ ವಂಚಿಸಿರುವ ಭಾರೀ ಹಗರಣವೊಂದು ಬೆಳಕಿಗೆ ಬಂದಿದೆ.

ADVERTISEMENT

ಗುಂತಕಲ್‌ನಿಂದ ಮುಂದಕ್ಕೆ ಬೆಂಗಳೂರಿನವರೆಗೆ ಬ್ರಾಡ್‌ಗೇಜ್‌ ಇನ್ನೂ ಪರಿವರ್ತನೆಯಾಗಿರದ 1983ಕ್ಕೆ ಮುಂಚೆ ಬೆಂಗಳೂರು– ರಾಯಚೂರು ನಡುವಿನ ಅಂತರ 498ಕಿ.ಮೀ. ಇತ್ತು. ಬ್ರಾಡ್‌ಗೇಜ್‌ ಪರಿವರ್ತನೆಯ ಬಳಿಕ ಪ್ರಯಾಣದ ದೂರವು 80 ಕಿ.ಮೀ.ನಷ್ಟು ತಗ್ಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.