ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 03–06–1997

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:30 IST
Last Updated 2 ಜೂನ್ 2022, 19:30 IST
   

ಸೇತುವೆಯಿಂದ ಬಸ್‌ ಬಿದ್ದು 13 ಸಾವು

ತುಮಕೂರು.ಜೂ.2– ಶಿರಾ ಪಟ್ಟಣದಿಂದ ಸುಮಾರು ಎರಡು ಕಿ.ಮೀ. ದೂರದ ಕಲ್‌ಕೋಟೆ ಬಳಿ ಖಾಸಗಿ ಬಸ್ಸೊಂದು ಸೇತುವೆಯಿಂದ ಕೆಳಗುರುಳಿ ಬಿದ್ದು 13 ಮಂದಿ ಮೃತರಾಗಿದ್ದಾರೆ. ಸುಮಾರು 45 ಮಂದಿ ಗಾಯಗೊಂಡಿದ್ದು ಅವರಲ್ಲಿ 6–7 ಮಂದಿಯ ಸ್ಥಿತಿ ಗಂಂಭೀರವಾಗಿದೆ.

9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಶಿರಾ ಆಸ್ಪತ್ರೆಯಲ್ಲಿ, ಉಳಿದಿಬ್ಬರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆ ದಿದ್ದಾರೆ. ಸತ್ತವರಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಎಂಟು ಮಂದಿ ಗಂಡಸರಿದ್ದಾರೆ.

ADVERTISEMENT

ಧರ್ಮಪುರದಿಂದ ರಾಮನಗರಕ್ಕೆ ಹೋಗುತ್ತಿದ್ದ ಬಸ್‌ ಸೇತುವೆ ಬಳಿ ಬರುತ್ತಿದ್ದಂತೆಯೇ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಕೆಳಗಿ ಬಿತ್ತು. ಬಸ್ಸಿನೊಳಗೆ ಸುಮಾರು 70 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಸಂವಿಧಾನ ಮೌಲ್ಯ ರಕ್ಷಣೆ
ರಾಷ್ಟ್ರಪತಿ ಪ್ರತಿಪಾದನೆ

ನವದೆಹಲಿ, ಜೂನ್‌2(ಪಿಟಿಐ) ಶಾಸನಸಭೆ ಗಳಿಗೆ ನಡೆಯುವ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿ ಕೂಟಕ್ಕೆ ಬಹುಮತ ದೊರೆಯದೆ ತ್ರಿಶಂಕು ಸ್ಥಿತಿ ಉದ್ಭವಿಸಿದಾಗ, ಸಂದಿಗ್ಧ ಮತ್ತು ಜಟಿಲ ಪರಿಸ್ಥಿತಿಗಳಲ್ಲಿ ಸಂವಿಧಾನಾತ್ಮಕ ಮುಖ್ಯಸ್ಥರು ಸಂವಿಧಾನದ ರಕ್ಷಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ರಾಷ್ಟ್ರಪತಿ ಡಾ.ಶಂಕರ್‌ ದಯಾಳ್‌ ಶರ್ಮಾ ಇಂದು ಇಲ್ಲಿ ಅಭಿ‍ಪ್ರಾಯಪಟ್ಟರು.

‘ಶಾಸನಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆಯದ ಪರಿಸ್ಥಿತಿಯಲ್ಲಿ ಸಂವಿಧಾನಾತ್ಮಕ ಮುಖ್ಯಸ್ಥರ ಪಾತ್ರ’ ಎಂಬ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತ್ರಿಶಂಕು ಸಂಸತ್‌ ಪರಿಸ್ಥಿತಿ ಎದುರಾದಾಗ ರಾಷ್ಟ್ರಪತಿಗಳು ಯಾವ ನಿರ್ಧಾರ ಕೈ ಗೊಳ್ಳಬೇಕು ಎಂದು ಚರ್ಚಿಸುವ ಸಲುವಾಗಿ ಎಲ್ಲ ರಾಜ್ಯಗಳ ರಾಜ್ಯಪಾಲರು ಮತ್ತು ರಾಜಕೀಯ ಪಕ್ಷಗಳ ಮುಖಂಡರ ಸಮಾವೇಶವನ್ನು ರಾಷ್ಟ್ರಪತಿ ಶಂಕರ್‌ ದಯಾಳ್‌ ಶರ್ಮ ಅವರು ವ್ಯವಸ್ಥೆಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.