ಭೀಕರ ರಸ್ತೆ ಅಪಘಾತದಲ್ಲಿ ರಾಜೇಶ್ ಪೈಲಟ್ ಸಾವು
ಜೈಪುರ, ಜೂನ್ 11– ಕಾಂಗ್ರೆಸ್ಸಿನ ಭವಿಷ್ಯದ ನಾಯಕ ಎಂದೇ ಹೆಸರು ಪಡೆದಿದ್ದ ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ (55) ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದರು.
ರಾಜಸ್ತಾನದ ದೌಸಾ ಜಿಲ್ಲೆಯ ಭಂದಾನಾಕ್ಕೆ ಸಮೀಪ ಮಧ್ಯಾಹ್ನ ಎರಡು ಮುಕ್ಕಾಲು ಗಂಟೆಗೆ ಪೈಲಟ್ ಸ್ವತಃ ತಾವೇ ಓಡಿಸುತ್ತಿದ್ದ ಜೀಪು, ರಾಜಸ್ತಾನದ ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದಾಗ ತೀವ್ರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಸವಾಯಿ ಮಾನ್‌ಸಿಂಗ್ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಅವರನ್ನು ಉಳಿಸಿಕೊಳ್ಳುವ ವೈದ್ಯರ ಪ್ರಯತ್ನ ಫಲಕಾರಿಯಾಗಲಿಲ್ಲ.
‘ಪೈಲಟ್ ಅವರನ್ನು ಆಸ್ಪತ್ರೆಗೆ ತರುವಾಗಲೇ ಅವರ ಹೃದಯದ ಬಡಿತ ನಿಂತಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ಕೆಲವು ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದ ಪೈಲಟ್ ಕೊನೆಯುಸಿರೆಳೆದರು’ ಎಂದು ಆಸ್ಪತ್ರೆಯ ಮುಖ್ಯಸ್ಥ ಪ್ರೊ.ಎಸ್.ಆರ್. ದಿವಾಕರ್ ತಿಳಿಸಿದರು.
ಮೋಸದಾಟ: ಕಪಿಲ್‌ದೇವ್, ಅಜರ್, ಜಡೇಜ ವಿಚಾರಣೆ
ನವದೆಹಲಿ, ಜೂನ್ 11– ಕ್ರಿಕೆಟ್‌ನಲ್ಲಿನ ಮೋಸದಾಟಕ್ಕೆ ಸಂಬಂಧಿಸಿದಂತೆ ಕೆಲವು ಕ್ರಿಕೆಟ್ ಆಟಗಾರರು ಮತ್ತು ಬುಕ್ಕಿಗಳನ್ನು ಸಂಪರ್ಕಿಸಲು ಮಾಜಿ ಕ್ರಿಕೆಟಿಗ ಅಜಯ್ ಶರ್ಮಾ ಕಾನೂನುಬಾಹಿರವಾಗಿ ಉಪಯೋಗಿಸಿದ ಮೊಬೈಲ್ ದೂರವಾಣಿಯ ಸಂಖ್ಯೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಪತ್ತೆ ಹೆಚ್ಚಿದೆ.
ಈ ನಡುವೆ ಮೋಸದಾಟಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಭಾರತ ತಂಡದ ಕೋಚ್ ಕಪಿಲ್‌ದೇವ್, ಆಟಗಾರರಾದ ಮಹಮದ್ ಅಜರುದ್ದೀನ್, ಅಜಯ್ ಜಡೇಜ ಮತ್ತು ಮಾಜಿ ಕ್ರಿಕೆಟಿಗರು– ಹಾಲಿ ವೀಕ್ಷಕ ವಿವರಣೆಗಾರರಾದ ಸುನೀಲ್ ಗಾವಸ್ಕರ್ ಮತ್ತು ರವಿ ಶಾಸ್ತ್ರಿ ಅವರನ್ನು ವಿಚಾರಿಸಲು ಸಿಬಿಐ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.