ಹಾವೇರಿ, ಏ. 29– ಕುಡಿಯುವ ನೀರಿಗಾಗಿ ಆಗ್ರಹಿಸಿ ಇಂದು ಕರೆ ನೀಡಿದ್ದ ‘ಸವಣೂರು ಬಂದ್’ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ಮಾಡಿ ಪ್ರತಿಭಟನಕಾರರನ್ನು ಚದುರಿಸಿದರು.
ಶಿಗ್ಗಾವಿ ನಾಗನೂರು ಕೆರೆಯಿಂದ ಸವಣೂರಿಗೆ ಪೈಪ್‌ಲೈನ್ ಮೂಲಕ ನೀರು ಪೂರೈಸಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೆರವಣಿಗೆ ಹೊರಟ ಸುಮಾರು ಎರಡು ಸಾವಿರ ಪ್ರತಿಭಟನಕಾರರು ಪೊಲೀಸರ ಕಣ್ತಪ್ಪಿಸಿ ನಾಲ್ಕು ಗುಂಪುಗಳಾಗಿ ಚದುರಿದರು.
ಒಂದು ಗುಂಪು ಪುರಸಭೆಗೆ ಮುತ್ತಿಗೆ ಹಾಕಿತು. ಇನ್ನೊಂದು ಗುಂಪು ತಾಲ್ಲೂಕು ಕಚೇರಿಯನ್ನು ಆಕ್ರಮಿಸಿತು ಹಾಗೂ ಮತ್ತೊಂದು ಗುಂಪು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದತ್ತ ಧಾವಿಸಿ ಬಸ್ಸಿನಲ್ಲಿದ್ದ ಡೀಸೆಲ್ ತೆಗೆದು ಐದು ಬಸ್ಸುಗಳಿಗೆ ಬೆಂಕಿ ಹಚ್ಚಿತು. ಕೂಗಾಟ, ಚೀರಾಟಗಳ ನಡುವೆ ಪ್ರಯಾಣಿಕರು ದಿಕ್ಕಾಪಾಲಾಗಿ ಚದುರಿದರು.
ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಗಗನದೀಪ್ ಅವರು ಮುಂಜಾಗ್ರತಾ ಕ್ರಮವಾಗಿ ಸವಣೂರಿನಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಕಲಂ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಹುಬ್ಬಳ್ಳಿ, ಏ. 29– ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ 24ನೇ ಮೇಯರ್ ಆಗಿ ಜನತಾದಳ (ಎಸ್) ಪಕ್ಷದ ಸರಳಾ ಗುರುನಾಥಸಾ ಭಾಂಡಗೆ ಮತ್ತು ಉಪಮೇಯರ್ ಆಗಿ ಕಾಂಗ್ರೆಸ್ (ಐ) ಪಕ್ಷದ ಅಲ್ತಾಫ ಹುಸೇನ್ ಹಳ್ಳೂರ ಇಂದು ಆಯ್ಕೆಯಾದರು.
ಇದರೊಂದಿಗೆ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಮಹಿಳಾ ಮೇಯರ್ ಎಂಬ ಕೀರ್ತಿಗೆ ಸರಳಾ ಭಾಂಡಗೆ ಅವರು ಭಾಜನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.