ADVERTISEMENT

25 ವರ್ಷಗಳ ಹಿಂದೆ | ವಿದೇಶಿ ಮೂಲದ ಪ್ರಶ್ನೆಗೆ ಜನರಿಂದ ಉತ್ತರ: ಸೋನಿಯಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 23:35 IST
Last Updated 13 ಆಗಸ್ಟ್ 2024, 23:35 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ಆ. 13– ಕಾಂಗ್ರೆಸ್‌ ಪಕ್ಷವು ಚುನಾವಣೆಯಲ್ಲಿ ಬಹುಮತ ಪಡೆದಾಗ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ವಿಜಯಿಯಾದ ಲೋಕಸಭೆ ಸದಸ್ಯರು ಆಯ್ಕೆ ಮಾಡುವರು ಎನ್ನುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇರ ಉತ್ತರ ನೀಡದೆ ನುಣುಚಿಕೊಂಡರು.

ತಾವು ವಿದೇಶಿ ಮೂಲದವರು ಎಂಬ ಕಾರಣಕ್ಕಾಗಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪಕ್ಷವು ತಮ್ಮನ್ನು ಬಿಂಬಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಸೋನಿಯಾ ಗಾಂಧಿ, ಅದಕ್ಕೆ ತಮ್ಮ ಬಳಿ ಉತ್ತರವಿಲ್ಲ, ಈ ಪ್ರಶ್ನೆಗೆ ಭಾರತದ ಜನತೆ ಉತ್ತರ ನೀಡುತ್ತದೆ ಎಂದರು.

ವ್ಯಕ್ತಿಯ ಆಯ್ಕೆ ಪ್ರಶ್ನೆ ಈಗ ಮುಖ್ಯವಲ್ಲ. ಪಕ್ಷವು ಜನತೆಗೆ ನೀಡುವ ಆಶ್ವಾಸನೆಯ ಈಡೇರಿಕೆ ಮತ್ತು ಕಾರ್ಯಕ್ರಮಗಳ ಜಾರಿ ಮುಖ್ಯ ಎಂದು ಉತ್ತರಿಸಿದರು.

ADVERTISEMENT

ಮುಂದುವರಿದ ಎನ್‌ಡಿಎ ಬಿಕ್ಕಟ್ಟು

ನವದೆಹಲಿ, ಆ. 13– ಜನತಾದಳ (ಯು) ಜತೆ ಸ್ಥಾನ ಹೊಂದಾಣಿಕೆ ಕುರಿತಂತೆ ಬಿಜೆಪಿಯು ಒಪ್ಪಿದೆ ಎಂಬುದಾಗಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಹೇಳಿದ್ದರೆ, ಅದನ್ನು ಬಿಜೆಪಿಯು ಸ್ಪಷ್ಟವಾಗಿ ಅಲ್ಲಗಳೆಯುವ ಮೂಲಕ ಈ ವಿವಾದ ಮತ್ತೆ ಕಗ್ಗಂಟಾಗಿಯೇ ಮುಂದುವರಿದಿದೆ. 

ಎರಡು ಪಕ್ಷಗಳ ಈ ವಿಭಿನ್ನ ನಿಲುವುಗಳಿಂದ ಮತ್ತಷ್ಟು ಗೊಂದಲ  ಮುಂದುವರಿದಿದೆ. ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆಗಾಗಿ, ನಾಳೆ ಕೊನೆಯ ಸುತ್ತಿನ ಚರ್ಚೆಗಾಗಿ ಸೇರುತ್ತಿರುವ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವುದು ಖಚಿತವಾಗಿದೆ. ಈ ಸಭೆಯಲ್ಲಿ ತಮ್ಮ ರಾಜ್ಯ ಘಟಕದ ನಿಲುವನ್ನು ಪುನರುಚ್ಚರಿಸುವುದಾಗಿ ಸಚಿವ ಅನಂತ ಕುಮಾರ್‌ ತಿಳಿಸಿದ್ದಾರೆ.  

ಆದರೆ ಈ ಹಿನ್ನೆಲೆಯಲ್ಲಿ, ಕಳೆದ ಮೂರು ವಾರಗಳಿಂದ ನನೆಗುದಿಗೆ ಬಿದ್ದಿರುವ ಹೊಂದಾಣಿಕೆ ವಿವಾದದ ಕುರಿತಂತೆ ಬಿಜೆಪಿ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.