ADVERTISEMENT

25 ವರ್ಷಗಳ ಹಿಂದೆ | ಏಕರೂಪ ಕನಿಷ್ಠ ತೆರಿಗೆ: ಎಸ್‌.ಎಂ. ಕೃಷ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 23:05 IST
Last Updated 22 ಜೂನ್ 2025, 23:05 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಏಕರೂಪ ಕನಿಷ್ಠ ತೆರಿಗೆ: ಕೃಷ್ಣ ಆಗ್ರಹ

ನವದೆಹಲಿ, ಜೂನ್‌ 22– ಕೃಷಿ ಉತ್ಪನ್ನಗಳು ಮತ್ತು ಕಂಪ್ಯೂಟರ್‌ಗಳ ಮೇಲಿನ ಕನಿಷ್ಠ ತೆರಿಗೆಯಲ್ಲಿ ಏಕರೂಪದ ನೀತಿ ರೂಪಿಸಲು ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಇಂದು ಇಲ್ಲಿ ಕರೆ ನೀಡಿದರು.

ಇಲ್ಲಿ ನಡೆದ ಮಾರಾಟ ತೆರಿಗೆಗೆ ಸಂಬಂಧಿಸಿದ ರಾಜ್ಯ ಮುಖ್ಯಮಂತ್ರಿಗಳ ಮತ್ತು ಹಣಕಾಸು ಸಚಿವ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

‘ವ್ಯಾಪಾರ ವಿಮುಖತೆ ತಪ್ಪಿಸಲು ಮತ್ತು ಸ್ಥಳೀಯ ಉತ್ಪನ್ನಗಳಿಗೆ ನೆರವಾಗಲು ಕಾಫಿ ಹಾಗೂ ರೇಷ್ಮೆಯೂ ಸೇರಿದಂತೆ ಕೃಷಿ ಉತ್ಪನ್ನಗಳ ಮೇಲಿನ ಕನಿಷ್ಠ ತೆರಿಗೆಯಲ್ಲಿ ಏಕರೂಪತೆ ಸಾಧಿಸುವುದು ಅಗತ್ಯ’ ಎಂದು ಕೃಷ್ಣ ಅಭಿಪ್ರಾಯಪಟ್ಟರು.

ADVERTISEMENT

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸ್ಥಿರತೆಗಾಗಿ ಕಂಪ್ಯೂಟರ್‌ಗಳ ಮೇಲಿನ ತೆರಿಗೆಯನ್ನು ಶೂನ್ಯ ಮಟ್ಟಕ್ಕೆ ಇಳಿಸಲು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯು ಸಲಹೆ ನೀಡಿದೆ. ಕರ್ನಾಟಕ ರಾಜ್ಯವು ಶೇಕಡ 4ರಷ್ಟು ತೆರಿಗೆ ವಿಧಿಸುತ್ತಿರುವಾಗ ನೆರೆಯ ಗೋವಾ ಮತ್ತು ಪುದುಚೇರಿ ರಾಜ್ಯಗಳು ಶೇಕಡ 1ರಷ್ಟು ತೆರಿಗೆ ಆಕರಿಸುತ್ತಿವೆ. ಇದರಿಂದಾಗಿ ತನ್ನ ವರಮಾನ ರಕ್ಷಿಸಿಕೊಳ್ಳಲು ಶೇಕಡ 0.25 ದರಕ್ಕೆ ತೆರಿಗೆ ಇಳಿಸುವ ಅನಿವಾರ್ಯತೆ ಕರ್ನಾಟಕ ರಾಜ್ಯಕ್ಕೆ ಎದುರಾಗಿದೆ ಎಂದರು.

‘ಅರಳೂರು ಹಳ್ಳಿಗರ ಮೇಲೆ ಸೈನಿಕರಿಂದ ಹಲ್ಲೆ’

ಬೆಂಗಳೂರು, ಜೂನ್‌ 22– ನಗರ ಹೊರ ವಲಯದಲ್ಲಿರುವ ಅರಳೂರು ಗ್ರಾಮಕ್ಕೆ ನುಗ್ಗಿದ ಎಎಸ್‌ಪಿ ಮಿಲಿಟರಿ ತರಬೇತಿ ಕೇಂದ್ರದ ಯೋಧರು, ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದರೆನ್ನಲಾದ ಘಟನೆ ಇಂದು ಇಲ್ಲಿ ನಡೆದಿದೆ.

ಬೆಳಿಗ್ಗೆ ಎಂಟು ಗಂಟೆಗೆ ನಡೆದಿರುವ ಈ ಘಟನೆಯಲ್ಲಿ 14 ಮಂದಿ ಗ್ರಾಮಸ್ಥರು ಹಾಗೂ ಇಬ್ಬರು ಮಿಲಿಟರಿ ಗಾರ್ಡ್‌ಗಳು ಗಾಯಗೊಂಡಿದ್ದು, ಅವರ ಪೈಕಿ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಎಸ್‌ಪಿ ಮಿಲಿಟರಿಯ ‘ಸಿ’ ಪಡೆಯ ಸುಮಾರು 80 ಮಂದಿ ಅರಳೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಮಿಲಿಟರಿ ಜಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ಕೆಲವು ಶ್ರೀಗಂಧದ ಮರಗಳಿದ್ದು, ಅವುಗಳ ರಕ್ಷಣೆಯನ್ನೂ ಅವರೇ ನೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.