ಯಾದವ್ ಗುಂಪಿನ ‘ಬಾಣ’, ಗೌಡರ ಬಣಕ್ಕೆ ‘ಟ್ರ್ಯಾಕ್ಟರ್ ಓಡಿಸುವ ರೈತ’
ನವದೆಹಲಿ, ಆ. 8 (ಪಿಟಿಐ)– ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಶರದ್ ಯಾದವ್ ನೇತೃತ್ವದ ಜನತಾ ದಳದ ಬಣಗಳಿಗೆ ಚುನಾವಣಾ ಆಯೋಗ ಇಂದು ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ನೀಡಿತು.
ಶರದ್ ಯಾದವ್ ಬಣಕ್ಕೆ ಜನತಾ ದಳ (ಯು) ಎಂದು ಹೆಸರು ನೀಡಲಾಗಿದ್ದು ಅದಕ್ಕೆ ‘ಬಾಣ’ವನ್ನು ಚಿಹ್ನೆಯಾಗಿ ಕೊಡಲಾಗಿದೆ. ದೇವೇಗೌಡರ ಬಣಕ್ಕೆ ಜನತಾ ದಳ (ಎಸ್) ಎಂಬ ಹೆಸರನ್ನು ಮತ್ತು ‘ಟ್ರಾಕ್ಟರ್ ಓಡಿಸುತ್ತಿರುವ ರೈತ’ನ ಚಿಹ್ನೆಯನ್ನು ನೀಡಲಾಗಿದೆ.
ಪಟೇಲ್ ಬಣದ ಜತೆ ಮೈತ್ರಿ ಇಲ್ಲ: ಬಿಜೆಪಿ
ಬೆಂಗಳೂರು, ಆ. 8– ಚುನಾವಣಾ ಆಯೋಗವು ಜನತಾ ದಳದ ‘ಚಕ್ರ’ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನೇತೃತ್ವದ ಬಣ ಹೊಸ ಹೆಸರು– ಚಿಹ್ನೆಯೊಂದಿಗೆ ಬಂದರೂ ಆ ಬಣದೊಂದಿಗೆ ಯಾವುದೇ ರೀತಿ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಿಜೆಪಿ ತಳ್ಳಿಹಾಕಿದೆ.
‘ನಮ್ಮ ಪಕ್ಷ ಬೇರೆ ರಾಜಕೀಯ ಪಕ್ಷಗಳೊಂದಿಗೆ ವ್ಯವಹರಿಸುತ್ತದೆಯೇ ಹೊರತು ಯಾವುದೇ ಒಂದು ಗುಂಪನ್ನು ಮಾನ್ಯ ಮಾಡುವುದಿಲ್ಲ; ಅಲ್ಲದೆ ಒಂದು ಗುಂಪಿನ ಜತೆ ವ್ಯವಹರಿಸುವುದೂ ಇಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ವೆಂಕಯ್ಯ ನಾಯ್ಡು ಇಂದು ಇಲ್ಲ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.