ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, ಜೂನ್‌ 27 1995

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:26 IST
Last Updated 26 ಜೂನ್ 2020, 15:26 IST

‘ಬುದ್ಧಿಜೀವಿ’, ರಾಜಕಾರಣಿಗಳಿಂದ ದೇಶ ದಿವಾಳಿ: ಕಾರಂತರ ಕಟು ಟೀಕೆ

ಬೆಂಗಳೂರು ಜೂನ್‌ 26– ಬೌದ್ಧಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಈ ದೇಶ ದಿವಾಳಿಯಾಗಿರುವುದೇ ‘ಸ್ವಯಂಘೋಷಿತ ಬುದ್ಧಿಜೀವಿಗಳು ಮತ್ತು ಹಣಕ್ಕಾಗಿ ಏನನ್ನೂ ಮಾಡಲು ಹೇಸದ ರಾಜಕಾರಣಿಗಳಿಂದ’ ಎಂದು ಖ್ಯಾತ ಬರಹಗಾರ ಡಾ. ಶಿವರಾಮ ಕಾರಂತ ಇಂದು ಇಲ್ಲಿ ಕಟುವಾಗಿ ಟೀಕಿಸಿದರು.

ಬಾಬರಿ ಮಸೀದಿ ನಾಶವಾದಾಗ ಇಡೀ ದೇಶದ ಬುದ್ಧಿಜೀವಿಗಳು, ಎಲ್ಲಾ ರಾಜಕಾರಣಿಗಳು ಆ ಕೃತ್ಯ ಮತ್ತು ಅದಕ್ಕೆ ಕಾರಣರಾದವರನ್ನು ಒಂದೇ ಉಸಿರಿನಿಂದ ಟೀಕಿಸಿದರು; ಖಂಡನೆಯ ಸುರಿಮಳೆಗರೆದರು. ಆದರೆ ಹಜರತ್‌ಬಾಲ್‌ ಮಸೀದಿ, ಚರಾರ್‌– ಎ– ಷರೀಫ್‌ ದರ್ಗಾ ಧ್ವಂಸ ಪ್ರಕರಣದ ಸಂದರ್ಭದಲ್ಲಿ ಇದೇ ಜನ ಬಾಯಿಗೆ ಬಟ್ಟೆ ಬಿಗಿದುಕೊಂಡು ಕುಳಿತರು ಎಂದು ಅವರು ಖಾರವಾಗಿ ಹೇಳಿದರು.

ADVERTISEMENT

ಬುದ್ಧಿಜೀವಿಗಳು ಇರುವ ರೀತಿಯೇ ಇದು ಎನ್ನುವುದಾದರೆ ಈ ದೇಶವನ್ನು ಯಾರಿಂದಲೂ ಪಾರು ಮಾಡಲು ಸಾಧ್ಯವಿಲ್ಲ ಎಂದು ಅವರು ಭವಿಷ್ಯ ನುಡಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ಬಂದ 20ನೇ ವರ್ಷದ ನೆನಪಿಗಾಗಿ ರಾಷ್ಟ್ರ ರಕ್ಷಣಾ ವೇದಿಕೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ದೇಶ ಉಳಿಸಿ’ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಈ ಹಿರಿಯ ಚಿಂತಕ, ‘ದೇಶವನ್ನು ಉಳಿಸಿ ಎಂದು ಯಾರನ್ನು ಕೇಳುತ್ತೀರಿ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಕೈಕೊಟ್ಟ ಮಳೆ

ಬೆಂಗಳೂರು, ಜೂನ್‌ 26– ದಕ್ಷಿಣ ಕನ್ನಡ, ಬೆಂಗಳೂರು ನಗರ, ಬಳ್ಳಾರಿ, ಕಲ್ಬುರ್ಗಿ, ಬೀದರ್‌ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮಳೆ ಕೈಕೊಟ್ಟಿದೆ. ಸಕಾಲದಲ್ಲಿ ಮಳೆಯಾಗದೆ ಇರುವುದರಿಂದ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ರೈತರು ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.