ಬೆಂಗಳೂರು. ಜೂನ್ 13– ಆಸ್ತಮಾದಿಂದ ನರಳುತ್ತಿದ್ದ ಚಿತ್ರನಟ ಸುಧೀರ್ (53) ಇಂದು ಇಲ್ಲಿ ನಿಧನರಾದರು. ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ರಂಗ ಕಲಾವಿದರೂ ಆಗಿದ್ದ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಬಹುತೇಕ ಖಳ ನಾಯಕನ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಸುಧೀರ್ 150 ಚಿತ್ರಗಳಲ್ಲಿ ಅಭಿನಯಿಸಿದ್ದರು.
ಭಾಜಪ ರಾಜ್ಯ ಕಾರ್ಯಕಾರಿ ಮಂಡಲಿ ಸದಸ್ಯರೂ ಆಗಿದ್ದ ಸುಧೀರ್ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಕಂಬಾಲಪಲ್ಲಿ ಹತ್ಯೆ: 32 ಮಂದಿ ವಿರುದ್ಧ ದೋಷಾರೋಪ ಪಟ್ಟಿ
ಬೆಂಗಳೂರು. ಜೂನ್ 13– ಚಿಂತಾಮಣಿ ತಾಲ್ಲೂಕು ಕಂಬಾಲಪಲ್ಲಿಯಲ್ಲಿ ಮಾರ್ಚ್ 11ರಂದು ನಡೆದ ದಲಿತರ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) 32 ಜನರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಚಿಂತಾಮಣಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಈ ಪಟ್ಟಿ ಸಲ್ಲಿಸಿದ್ದು ರಾಜ್ಯ ಸರ್ಕಾರದ ಆದೇಶದಂತೆ ವಿಚಾರಣೆ ಕೈಗೆತ್ತಿಕೊಂಡ ಡಿಸಿಆರ್‌ಇ ವಿಚಾರಣೆಯನ್ನು ಪೂರ್ಣಗೊಳಿಸಿ ಒಟ್ಟು ನೂರು ಮಂದಿಯ ಸಾಕ್ಷ್ಯ ಸಂಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.