ಬೆಂಗಳೂರು, ಏ. 28– ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀಟರ್‌ವರೆಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರಿನ ತನ್ನ ಪಾಲಿನ ಹಕ್ಕನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಂದು ಸೇರಿದ್ದ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಸಭೆ ಒಮ್ಮತದಿಂದ ತೀರ್ಮಾನ ತೆಗೆದುಕೊಂಡಿತು.
ರಾಜ್ಯ ಸರ್ಕಾರ ಸಂಜೆ ವಿಧಾನಸೌಧದಲ್ಲಿ ಕರೆದಿದ್ದ ಎಲ್ಲ ಪಕ್ಷಗಳ ನಾಯಕರು, ಇತರೆ ಸಂಘ ಸಂಸ್ಥೆಗಳು, ನೀರಾವರಿ ತಜ್ಞರ ಸಭೆ ಈ ತೀರ್ಮಾನ ತೆಗೆದುಕೊಂಡಿತು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಬೆಂಗಳೂರು, ಏ. 28– ನಷ್ಟದಲ್ಲಿರುವ ಕೋಲಾರ ಚಿನ್ನದ ಗಣಿಯನ್ನು ಷರತ್ತಿನ ಮೇಲೆ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಸ್ಪಷ್ಟಪಡಿಸಿದರು.
ಶೂನ್ಯವೇಳೆಯಲ್ಲಿ ಜನತಾದಳ (ಯು) ಗುಂಪಿನ ನಾಯಕ ಪಿ.ಜಿ.ಆರ್. ಸಿಂಧ್ಯಾ ಅವರು ಕೋಲಾರ ಚಿನ್ನದ ಗಣಿಯನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿರುವ 4,500 ಕಾರ್ಮಿಕರ ಪೈಕಿ 2,700 ಮಂದಿಯನ್ನು ಸ್ವಯಂ ನಿವೃತ್ತಿಗೊಳಿಸುವುದಾದರೆ ಅಲ್ಲಿ ಗಣಿಗಾರಿಕೆಯನ್ನು ಮುಂದುವರಿಸಲು ಪರಿಶೀಲಿಸಬಹುದಾಗಿದೆ ಎಂಬುದಾಗಿ ಕೇಂದ್ರವು ತಿಳಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.