ADVERTISEMENT

50 ವರ್ಷಗಳ ಹಿಂದೆ: ಶನಿವಾರ, 24–1–1970

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 19:47 IST
Last Updated 23 ಜನವರಿ 2020, 19:47 IST

ಬಾಂಗ್ಲಾ ಕಾಂಗ್ರೆಸ್ಸಿನ ಮೂವರು ಸಚಿವರ ರಾಜೀನಾಮೆ?
ಕಲ್ಕತ್ತ, ಜ. 23– ನಿರಪರಾಧಿ ಜನರ ಮೇಲೆ ನಡೆಯುತ್ತಿರುವ ನ್ಯಾಯಬಾಹಿರತೆ, ಬೆದರಿಕೆ ಮತ್ತು ಕಿರುಕುಳಗಳನ್ನು ಹತ್ತಿಕ್ಕುವುದರಲ್ಲಿ ತಾವು ಶಕ್ತಿಹೀನರಾದ ಕಾರಣ ಬಾಂಗ್ಲಾ ಕಾಂಗ್ರೆಸ್‌ನ ಮೂವರು ಸಚಿವರು ಸಂಯುಕ್ತರಂಗ ಸರ್ಕಾರದಲ್ಲಿ ಮುಂದುವರಿಯುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಗುರುವಾರ ರಾತ್ರಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಸುಶೀಲ್ ಧಾರಾ, ಸಮುದಾಯ ಅಭಿವೃದ್ಧಿ ಸಚಿವ ಶ್ರೀ ಚಾರು ಮಿಹಿರ್ ಸರ್ಕಾರ್ ಮತ್ತು ಅರಣ್ಯ ಸಚಿವರಾದ ಬಧುತೋಷ್ ಸೋರೆ ಅವರು ತಮ್ಮ ಅಸಮಾಧಾನವನ್ನು ತಿಳಿಸಿದ್ದಾರೆ.

ರಾಜ್ಯ ಸಂಪುಟದ ಮೇಲೆ ವಚನಭಂಗ ಆರೋಪ
ಬೆಂಗಳೂರು, ಜ. 23– ಭೂ ಕಂದಾಯ ರದ್ದು ಮಾಡುವುದಾಗಿ ನೀಡಿದ್ದ ಆಶ್ವಾಸನೆ ಉಲ್ಲಂಘನೆ, ಪಾನನಿರೋಧ ಸಡಿಲಿಕೆ ಮತ್ತಿತರ ಎಂಟು ಆಪಾದನೆಗಳನ್ನು ಶ್ರೀ ವೀರೇಂದ್ರ ಪಾಟೀಲರ ಮಂತ್ರಿಮಂಡಲದ ಮೇಲೆ ಮಾಜಿ ಸಚಿವ ಶ್ರೀ ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ಹೊರೆಸಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಕೂಡಿ ಪ್ರಸಕ್ತ ಮಂತ್ರಿಮಂಡಲವು ಅಧಿಕಾರ ದುರುಪ‍ಯೋಗ ಮಾಡಿಕೊಂಡಿದೆಯೆಂದು ಆಪಾದಿಸಿದ ಅವರು ‘ನಾನು ನಿಮ್ಮನ್ನು ಇಳಿಸದಿದ್ದರೂ ನಿಮ್ಮ ಸ್ವಯಂಕೃತಾಪರಾಧಗಳಿಂದಲೇ ಗದ್ದುಗೆ ತ್ಯಜಿಸುವಿರಿ’ ಎಂದರು.

ಭೂಸುಧಾರಣೆ ಜಾರಿಗೆ ಇನ್ನೂ ಐದಾರು ವರ್ಷ
ಬೆಂಗಳೂರು, ಜ. 23– ರಾಜ್ಯದಲ್ಲಿ ಭೂಸುಧಾರಣಾ ಶಾಸನವನ್ನು ಜಾರಿಗೆ ತರಲು ಇನ್ನೂ ಐದಾರು ವರ್ಷಗಳು ಬೇಕಾಗುವುದೆಂದು ಕಂದಾಯ ಸಚಿವ ಶ್ರೀ ಎಚ್.ವಿ. ಕೌಜಲಗಿ ಅವರು ಇಂದು ವಿಧಾನಪರಿಷತ್ತಿನಲ್ಲಿ ಅಭಿಪ್ರಾಯಪಟ್ಟರು.

ಭೂಸುಧಾರಣಾ ಕಾನೂನನ್ನು ಕಾರ್ಯಗತ ಮಾಡಲು 40 ಕೋಟಿ ರೂ. ಬೇಕಾಗುವುದೆಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.