ADVERTISEMENT

ಮಂಗಳವಾರ, 17–6–1969

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

ಮೈಸೂರಿನಲ್ಲಿ ಕೇಂದ್ರ ಭಾಷಾ ಸಂಸ್ಥೆ: ಜುಲೈ 10ರಿಂದ ಕಾರ್ಯಾರಂಭ
ಮೈಸೂರು, ಜೂನ್ 16– ಮಾನಸ ಗಂಗೋತ್ರಿಯಲ್ಲಿ ಕೇಂದ್ರ ಭಾಷಾ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಶಿಕ್ಷಣ ಸಚಿವ ಶಾಖೆ ನಿರ್ಧರಿಸಿದೆ.

ಈ ವಿಷಯವನ್ನು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದ ಉಪಕುಲಪತಿ ಡಾ. ಕೆ.ಎಲ್. ಶ್ರೀಮಾಲಿ ಅವರು, ಈ ಸಂಸ್ಥೆಯು ಜುಲೈ 10ರಿಂದ ಕಾರ್ಯಾರಂಭ ಮಾಡುವುದೆಂದರು.

ಸದ್ಯದಲ್ಲಿ ಸಂಸ್ಥೆಯು ಮಾನಸ ಗಂಗೋತ್ರಿಯ ಪಂಚಾಯ್ತಿ ರಾಜ್ಯ ಹಾಗೂ ಸಹಕಾರ ಸಂಸ್ಥೆಯ ಕಟ್ಟಡದಲ್ಲಿರುವುದೆಂದೂ, ನಂತರ ಸಂಸ್ಥೆಯು ತನ್ನದೇ ಆದ ಕಟ್ಟಡವನ್ನು ಹೊಂದುವುದೆಂದೂ ಡಾ. ಶ್ರೀಮಾಲಿ ತಿಳಿಸಿದರು.

ADVERTISEMENT

ಸಂತಸ, ವಿರೋಧ‍ಪ್ರದರ್ಶನದ ಮಧ್ಯೆ ಮಲಪ್ಪುರಂ ಉದಯ
ಮಲಪ್ಪುರಂ, ಜೂನ್ 16– ಸಂತಸ, ಸಂಭ್ರಮ ಮತ್ತು ವಿರೋಧ ಪ್ರದರ್ಶನಗಳ ನಡುವೆ ವಿವಾದಿತ ಮಲಪ್ಪುರಂ ಜಿಲ್ಲೆ ಇಂದು ಉದಯಿಸಿತು. ನೂತನ ಜಿಲ್ಲಾಧಿಕಾರಿ ಕೆ. ಭಾಸ್ಕರನ್ ನಾಯರ್ ಅವರು ಅಧಿಕಾರ ವಹಿಸಿಕೊಂಡಾಗ ಇಂದು ಬೆಳಿಗ್ಗೆ 9.55 ಗಂಟೆಗೆ ಸರಿಯಾಗಿ ಕೇರಳದ ಈ ಹತ್ತನೇ ಜಿಲ್ಲೆ (ಮುಸ್ಲಿಂ ಪ್ರಧಾನ) ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂತು. ಆನಂತರ ಜಿಲ್ಲಾಧಿಕಾರಿ ತಮ್ಮ ಕಚೇರಿ ಆವರಣದಲ್ಲಿ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಿದರು.

ವಿದೇಶಿ ಮಾರುಕಟ್ಟೆಗೆ ಬೀಡಿ ಕಟ್ಟು
ಮುಂಬೈ, ಜೂನ್ 16– ಜನಪ್ರಿಯ ಮಂಗಳೂರು ಬೀಡಿಗಳನ್ನು ವಿದೇಶಿ ಮಾರುಕಟ್ಟೆಗೆ ಪರಿಚಯ ಮಾಡಿಸಲು ಈಗ ತೀವ್ರ ಪ್ರಯತ್ನ ನಡೆದಿದೆ. ವಿದೇಶಿ ಮಾರುಕಟ್ಟೆಗಾಗಿ ಬೀಡಿಗಳನ್ನು ಆಕರ್ಷಕ ಪ್ಯಾಕುಗಳಲ್ಲಿಟ್ಟು ರಫ್ತು ಮಾಡಲಾಗುವುದು.

ಯುರೋಪ್ ಮತ್ತು ಅಮೆರಿಕಕ್ಕೆ ಬೀಡಿ ರಫ್ತು ಸಾಧ್ಯತೆ ಪರಿಶೀಲನೆಗಾಗಿ ಸದ್ಯದಲ್ಲೇ ದಕ್ಷಿಣ ಕನ್ನಡದ ಪಿ.ವಿ.ಎಸ್. ಬೀಡಿ ಸಂಸ್ಥೆಯ ವ್ಯವಸ್ಥಾಪಕ ಡೈರೆಕ್ಟರ್ ಶ್ರೀ ಮಧುಸೂದನ್ ಅವರು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.